ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ 7ನೇ ದಿನಕ್ಕೆ: 17 ಮಂದಿ ಅಸ್ವಸ್ಥ; ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ!
ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾನವ ಸರಪಳಿ ರಚಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಗೌರವ ಧನವನ್ನು 15,000 ರೂಪಾಯಿಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸೋಮವಾರ 7ನೇ ದಿನಕ್ಕೆ ಕಾಲಿಟ್ಟಿದೆ.
ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾನವ ಸರಪಳಿ ರಚಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ಚರ್ಚೆ ನಡೆಸಿ, ಬೇಡಿಕೆಗಳ ಪರಿಶೀಲನೆಗೆ ಕಾಲಾವಕಾಶ ಕೋರಿ ಹೋರಾಟ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಕೇವಲ ಮೌಖಿಕ ಭರವಸೆಗಳು ಸಾಕಾಗುವುದಿಲ್ಲ, ಅಧಿಕೃತ ಲಿಖಿತ ಆದೇಶ ನೀಡುವವರೆಗೂ ಧರಣಿ ಮುಂದುವರಿಯುತ್ತದೆ ಎಂದು ಕಾರ್ಯಕರ್ತೆಯರು ಸ್ಪಷ್ಟಪಡಿಸಿದ್ದಾರೆ.
ಮಾಸಿಕ ₹15,000 ನಿಗದಿತ ಗೌರವಧನ, ಜನವರಿ 2025 ರಲ್ಲಿ ನೀಡಿದ್ದ ₹10,000 ಭರವಸೆಯ ಜಾರಿ, ಕೇಂದ್ರದ ಬಾಕಿ ₹1,500 ಪ್ರೋತ್ಸಾಹಧನ ಹೆಚ್ಚಳ, ಬಾಕಿ ಹಣದ ಬಿಡುಗಡೆ, 6 ತಿಂಗಳ ವೇತನ ಸಹಿತ ಹೆರಿಗೆ ರಜೆ ಹಾಗೂ ₹5 ಲಕ್ಷದವರೆಗೆ ನಿವೃತ್ತಿ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
17 ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ ದಾಖಲು: ಈ ಮಧ್ಯೆ ನಿರಂತರ ಧರಣಿ ಹಾಗೂ ಚಳಿಯ ನಡುವೆ ಜ್ವರ, ಅಸ್ತಮಾ, ವಾಂತಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ 17 ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ವಿಶ್ರಾಂತಿಗೆ ಸೂಕ್ತ ವ್ಯವಸ್ಥೆಗಳ ಕೊರತೆಯ ಬಗ್ಗೆಯೂ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದೇನು?
ಇನ್ನೂ ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಮಾತನ್ನು ಆಶಾ ಕಾರ್ಯಕರ್ತೆಯರು ಕೇಳಬೇಕು. ಸಿಎಂ ಭರವಸೆ ಕೊಟ್ಟಿದ್ದಾರೆ. ಅವರನ್ನ ನಂಬಬೇಕು. ನವೆಂಬರ್ 25 ಕ್ಕೆ ಸಂಜೆ ಸಿಎಂ ಬೆಂಗಳೂರಿಗೆ ಬರ್ತಾರೆ. ಬಂದ ಬಳಿಕ ಒಂದು ತೀರ್ಮಾನ ಮಾಡ್ತಾರೆ ಎಂದರು. ಸರ್ಕಾರದ ಭರವಸೆಗಳನ್ನ ನಂಬಿ ಹತಾಶರಾಗಿ ಆಶಾ ಕಾರ್ಯಕರ್ತೆಯರು, ಈ ಬಾರಿ ತಮ್ಮ ಬೇಡಿಕೆಗಳಿಗೆ ನ್ಯಾಯ ಸಿಕ್ಕಿದ ಬಳಿಕವೇ ಇಲ್ಲಿಂದ ಹೋಗಲು ನಿರ್ಧರಿಸಿದ್ದಾರೆ.
ಖುದ್ದು ಸಿಎಂ ಭರವಸೆಗೂ ಆಶಾ ಕಾರ್ಯಕರ್ತೆಯರು ಒಪ್ಪುತ್ತಿಲ್ಲ. ಸ್ಥಳಕ್ಕೆ ಆರೋಗ್ಯ ಸಚಿವರು ಬಂದರೂ ಸರ್ಕಾರದ ಭರವಸೆಗೆ ಹೋರಾಟಗಾರರು ಸೊಪ್ಪು ಹಾಕಿಲ್ಲ. ಈ ಬಾರಿ ಆದೇಶದ ಪ್ರತಿ ಪಡೆದುಕೊಂಡೇ ಹೋಗಬೇಕು ಎಂದು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರೆಸಿದ್ದು, ಹಂತಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.