ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ನೀರು ಬಿಡದಿದ್ದರೆ ಮಹಾರಾಷ್ಟ್ರಕ್ಕೆ ಸೇರುತ್ತೇವೆ: ಸರ್ಕಾರದ ವಿರುದ್ಧ ಶಾಸಕ ಯಶವಂತರಾಯಗೌಡ ಪಾಟೀಲ್ ಆಕ್ರೋಶ

ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಕುಡಿಯುವ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಶಾಸಕ ಯಶವಂತರಾಯಗೌಡ ಪಾಟೀಲ್
Hruthin H P
Updated On : 23 Nov 2026, 2:16 pm

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಯಲ್ಲಿ, ತಮ್ಮ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ನೀರು ಬಿಡಿ, ಇಲ್ಲಾ ಅಂದರೆ ಇಂಡಿ ಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

37 ದಿನಗಳಿಂದ ಕುಡಿಯುವ ನೀರಿಲ್ಲ

ಬರಗಾಲದ ಹಿನ್ನೆಲೆಯಲ್ಲಿ ಭೀಮಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಕಳೆದ 37 ದಿನಗಳಿಂದ ಇಂಡಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಜನರು ಕುಡಿಯುವ ನೀರಿಗಾಗಿ ತೀವ್ರ ಪರದಾಡುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದ ಶಾಸಕರು, ಆಲಮಟ್ಟಿ ಜಲಾಶಯದಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ತಾರತಮ್ಯ ಮಾಡುತ್ತಿದ್ದಾರೆ. ಇಂಡಿ ತಾಲೂಕು ಕಾಲುವೆಯ ಕೊನೆಯ ಭಾಗದಲ್ಲಿರುವುದರಿಂದ ನಮ್ಮ ಭಾಗದ ಕೆರೆಗಳಿಗೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Advertisement

Advertisement

ಮಹಾರಾಷ್ಟ್ರ ಸೇರ್ಪಡೆಯ ಎಚ್ಚರಿಕೆ

ಇದೆ ವೇಳೆ, "ಮಹಾರಾಷ್ಟ್ರ ಗಡಿಭಾಗದ ಕನ್ನಡಿಗರು, ಅದರಲ್ಲೂ ಜತ್ತ ತಾಲೂಕಿನ 40 ಹಳ್ಳಿಗಳು ಕರ್ನಾಟಕಕ್ಕೆ ಸೇರುವ ನಿರ್ಣಯ ಕೈಗೊಂಡಿದ್ದವು; ಅದೇ ರೀತಿ ಈಗ ನಮಗೂ ನೀರು ಬಿಡದಿದ್ದರೆ ಇಂಡಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ನಿರ್ಣಯ ಕೈಗೊಂಡು ಮಹಾರಾಷ್ಟ್ರಕ್ಕೆ ಸೇರಬೇಕಾಗುತ್ತದೆ ಎಂದು ಎಚ್ಚರಿಸಿದ ಶಾಸಕರು, ಕುಡಿಯುವ ನೀರಿಗಾಗಿ ನಾವು ಮಹಾರಾಷ್ಟ್ರ ಸಿಎಂ ಅವರನ್ನು ಭೇಟಿ ಮಾಡಿ ಬಂದಿದ್ದೇವೆ, ನಮ್ಮ ಸಮಸ್ಯೆಗೆ ಅಲ್ಲಾದರೂ ಪರಿಹಾರ ಸಿಗಬಹುದೇನೋ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

Also Read

'ಖಾತೆ ಮಾಡಿಕೊಡಲು ಲಂಚ ಪಡೆದವನ ಬಲಿ ಹಾಕಿ; ಅಜ್ಜಿ, ನಿಮಗೆ ಭೂಮಿ ಮಂಜೂರು ಗ್ಯಾರಂಟಿ; ನಾನಿದ್ದೇನೆ ಟೆನ್ಷನ್ ತಗೋಬೇಡಿ'

ಇತರ ಕ್ಷೇತ್ರಗಳಲ್ಲೂ ನೀರಿನ ಹಾಹಾಕಾರ

ಸಭೆಯಲ್ಲಿ ಹಾಜರಿದ್ದ ಸಿಂದಗಿ ಶಾಸಕ ಅಶೋಕ ಮನಗೂಳಿ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಹಾಗೂ ನಾಗಠಾಣ ಶಾಸಕ ವಿಠಲ ಕಟಕಧೋಂಡ ಅವರೂ ಸಹ ತಮ್ಮ ಕ್ಷೇತ್ರಗಳ ಕೆರೆಗಳಿಗೆ ನೀರು ಹರಿಸದಿರುವ ಬಗ್ಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಿರುವ ಬಗ್ಗೆ ದೂರು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಆದ್ಯತೆ ಮೇರೆಗೆ ಬಳಸಬೇಕು ಮತ್ತು ಅಕ್ರಮವಾಗಿ ನೀರು ಎತ್ತುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಭೀಮಾ ಮತ್ತು ಕೃಷ್ಣಾ ನದಿಗಳಿಗೆ ನೀರು ಬಿಡುವಂತೆ ಮನವಿ ಮಾಡಲು ಮಹಾರಾಷ್ಟ್ರಕ್ಕೆ ನಿಯೋಗ ಕೊಂಡೊಯ್ಯುವ ಕುರಿತೂ ಚರ್ಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement