ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಪುಲಕೇಶಿನಗರದಲ್ಲಿ ನೀರಿನ ಸಮಸ್ಯೆ: BWSSB ₹22 ಕೋಟಿ ವೆಚ್ಚದ ಕಾಮಗಾರಿ; ಪುರಾತನ ಪೈಪ್ ಲೈನ್ ಗೆ ಮುಕ್ತಿ!

ಇದೀಗ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವಲ್ ಬೈರಸಂದ್ರದಲ್ಲಿ 6 ಮಿಲಿಯನ್ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಾಶಯವನ್ನು ನಿರ್ಮಿಸಲು ಹಾಗೂ ಹಳೆಯ, ತುಕ್ಕು ಹಿಡಿದ ಪೈಪ್‌ಗಳನ್ನು ಬದಲಾಯಿಸಲು ಸಜ್ಜಾಗಿದೆ.

ಸಾಂದರ್ಭಿಕ ಚಿತ್ರ
Shilpa D
Updated On : 24 Nov 2026, 11:10 am

ಬೆಂಗಳೂರು: ಕಾವಲ್ ಬೈರಸಂದ್ರ, ಕುಶಾಲ ನಗರ, ಡಿ.ಜೆ. ಹಳ್ಳಿ ಮತ್ತು ಮುನೇಶ್ವರ ನಗರದಂತಹ ಹಳೆಯ ಪ್ರದೇಶಗಳನ್ನು ಒಳಗೊಂಡಿರುವ ಪುಲಕೇಶಿನಗರ ವಿಧಾನಸಭಾ ಕ್ಷೇತ್ರವು, ಕಳೆದ 10 ರಿಂದ 15 ವರ್ಷಗಳಿಂದ ನೀರಿನ ಪೂರೈಕೆಯಲ್ಲಿನ ವ್ಯತ್ಯಯವನ್ನು ಎದುರಿಸುತ್ತಿದೆ.

ಇದಕ್ಕೆ 40 ವರ್ಷ ಹಳೆಯದಾದ ನೀರಿನ ಪೈಪ್‌ಲೈನ್ ಕಾರಣವಾಗಿದೆ. ಇದೀಗ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವಲ್ ಬೈರಸಂದ್ರದಲ್ಲಿ 6 ಮಿಲಿಯನ್ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಾಶಯವನ್ನು ನಿರ್ಮಿಸಲು ಹಾಗೂ ಹಳೆಯ, ತುಕ್ಕು ಹಿಡಿದ ಪೈಪ್‌ಗಳನ್ನು ಬದಲಾಯಿಸಲು ಸಜ್ಜಾಗಿದೆ.

ಈ ಯೋಜನೆಗೆ ಡಿಸೆಂಬರ್‌ನಲ್ಲಿ ಭೂಮಿ ಪೂಜೆ ನೆರವೇರಲಿದ್ದು, ತಕ್ಷಣವೇ ಕಾಮಗಾರಿ ಆರಂಭವಾಗಲಿದೆ. ಯೋಜನೆಯ ಒಟ್ಟು ವೆಚ್ಚ 22 ಕೋಟಿ ರೂಪಾಯಿಗಳಾಗಿದ್ದು, ಆರು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಯೋಜನೆ ಪೂರ್ಣಗೊಂಡ ನಂತರ, ಮುಖ್ಯವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 70,000 ಜನರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು BWSSBಯ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.

Advertisement

Advertisement

ವಿಧಾನಸೌಧದಿಂದ ಕೇವಲ 5 ಕಿ.ಮೀ ದೂರದಲ್ಲಿದ್ದರೂ ನೀರಿನ ಪೂರೈಕೆಯಲ್ಲಿ ವ್ಯತ್ಯಯವನ್ನು ಎದುರಿಸುತ್ತಿರುವ ಸ್ಥಳೀಯ ನಿವಾಸಿಗಳು, ಈ ಹಿಂದೆ ವಾರ್ಡ್ ಎಂಜಿನಿಯರ್‌ಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಹೇಳಿದ್ದಾರೆ. ಈ ಯೋಜನೆ ಪೂರ್ಣಗೊಂಡ ಬಳಿಕ, ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ನೀರು ಸಿಗಬಹುದು ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.

Also Read

'ವಿಜಯೇಂದ್ರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸುತ್ತೇನೆ, ಅವರೇ 'ಗಂಗಾ' ನಿವಾಸದ ಕಾಮಗಾರಿ ವೆಚ್ಚದ ತನಿಖೆ ಮಾಡಲಿ': ಸಿಎಂ; Video

ನಮಗೆ 10 ದಿನಕ್ಕೊಮ್ಮೆ ನೀರು ಬರುತ್ತದೆ. ಕೆಲವೊಮ್ಮೆ ನೀರು ಕಲುಷಿತವಾಗಿರುತ್ತದೆ ಮತ್ತು ದುರ್ವಾಸನೆ ಬೀರುತ್ತದೆ. ಕಳೆದ ಆರು ವರ್ಷಗಳಿಂದ ನಾವು ನೀರಿನ ಪೂರೈಕೆಯಲ್ಲಿನ ವ್ಯತ್ಯಯದಿಂದ ತೊಂದರೆ ಅನುಭವಿಸುತ್ತಿದ್ದೇವೆ" ಎಂದು ನ್ಯೂ ಬಾಗಲೂರು ಲೇಔಟ್‌ನ ನಿವಾಸಿ ಅನಿತಾ ಎ. ತಿಳಿಸಿದ್ದಾರೆ.

ಪುಲಕೇಶಿನಗರ ಶಾಸಕ ಎ.ಸಿ. ಶ್ರೀನಿವಾಸ್ ಅವರು ಈ ಯೋಜನೆಗೆ ಅನುಮೋದನೆ ಪಡೆಯಲು ಶ್ರಮಿಸಿದ್ದರೆ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ. ನೀರು ಸರಬರಾಜು ಮಾರ್ಗಗಳು 40 ವರ್ಷಕ್ಕೂ ಹಳೆಯದಾಗಿದ್ದು, ಕೊಳವೆಗಳು (ಪೈಪ್‌ಗಳು) ಹಾನಿಗೊಳಗಾಗಿವೆ.

ಡಿ.ಜೆ. ಹಳ್ಳಿ ಮತ್ತು ಕಾವಲ್ ಬೈರಸಂದ್ರ ವಾರ್ಡ್‌ಗಳ ನಡುವೆ ನಿರ್ಮಿಸಲಾದ ಜಿಎಲ್‌ಆರ್ (GLR - ನೆಲಮಟ್ಟದ ಜಲಾಶಯ) ಹಾಗೂ ಹೊಸ ಪೈಪ್‌ಲೈನ್ ಜಾಲದಿಂದಾಗಿ, ಅನೇಕ ಪ್ರದೇಶಗಳಲ್ಲಿ ಶೀಘ್ರದಲ್ಲೇ ಯಾವುದೇ ಅಡೆತಡೆಯಿಲ್ಲದೆ ನಿಯಮಿತವಾಗಿ ನೀರು ಸರಬರಾಜಾಗಲಿದೆ.

ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ವಿಧಾನಸಭಾ ಕ್ಷೇತ್ರದಲ್ಲಿ, 55 ಕಿ.ಮೀ ಉದ್ದದ ಹೊಸ ನೀರು ಸರಬರಾಜು ಮಾರ್ಗಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಇಲ್ಲಿ ಯಾವುದೇ ಪಂಪ್ ಹೌಸ್ ಇರಲಿಲ್ಲ; ಈಗ ನಮ್ಮ ನೀರು ಸರಬರಾಜು ಜಾಲವನ್ನು ಬಿಡಬ್ಲ್ಯುಎಸ್‌ಎಸ್‌ಬಿ ಯ 'ಹೈ ಗ್ರೌಂಡ್ಸ್' ಜಾಲದೊಂದಿಗೆ ಸಂಪರ್ಕಿಸಲಾಗುವುದು,” ಎಂದು ಶಾಸಕರು ತಿಳಿಸಿದರು.

Also Read

ರೈಲ್ವೆ ಸೇತುವೆ ವಿಸ್ತರಣೆ ಕಾಮಗಾರಿ: ಹೆಣ್ಣೂರು-ಬಾಗಲೂರು ರಸ್ತೆ 33 ದಿನ ಬಂದ್ ಸಾಧ್ಯತೆ; ಸ್ಥಳೀಯರ ಆಕ್ರೋಶ..!

ಪಿಳ್ಳಣ್ಣ ಗಾರ್ಡನ್‌ನಲ್ಲಿ 5.5 ಮಿಲಿಯನ್ ಲೀಟರ್ ಸಾಮರ್ಥ್ಯದ ಜಿಎಲ್‌ಆರ್ ನಿರ್ಮಾಣ ಮತ್ತು 45 ಕೋಟಿ ರೂ. ವೆಚ್ಚದ ಪೈಪ್‌ಲೈನ್ ಜಾಲದ ಕಾಮಗಾರಿಗಳನ್ನು ಬಿಡಬ್ಲ್ಯುಎಸ್‌ಎಸ್‌ಬಿ ಕೈಗೊಂಡಿದೆ. “ಶೇಕಡಾ 50 ರಷ್ಟು ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಈ ಯೋಜನೆ ಸಿದ್ಧವಾಗಲಿದೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.

ಮಾಜಿ ಶಾಸಕ ಹಾಗೂ ಜೆಡಿಎಸ್ ನಾಯಕ ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, 2013 ರಿಂದ 2018 ರವರೆಗೆ ಮತ್ತು 2018 ರಿಂದ 2023 ರವರೆಗೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಹಲವು ಬಾರಿ ಪ್ರಸ್ತಾಪಿಸಲಾಗಿತ್ತು ಮತ್ತು ಅದಕ್ಕೆ ಅನುಮೋದನೆಯನ್ನೂ ಪಡೆಯಲಾಗಿತ್ತು ಎಂದು ಹೇಳಿದರು.

“ಪಿಳ್ಳಣ್ಣ ಗಾರ್ಡನ್‌ನಲ್ಲಿ ಆಟದ ಮೈದಾನವೊಂದನ್ನು ಗುರುತಿಸಿ, ಸುಮಾರು 2,000 ಚದರ ಅಡಿ ಜಾಗವನ್ನು ಬಿಡಬ್ಲ್ಯುಎಸ್‌ಎಸ್‌ಬಿಗೆ ಹಂಚಿಕೆ ಮಾಡಲಾಗಿತ್ತು. ನಾನು ಆಯ್ಕೆಯಾಗಿದ್ದರೆ, ಒಂದು ವರ್ಷದ ಹಿಂದೆಯೇ ಈ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದೆ. ಆಗಷ್ಟೇ ಅಲ್ಲ, ಈಗಿನ ವೇಳೆಗೆ ನಿವಾಸಿಗಳ ಮನೆಗಳಲ್ಲಿನ ನಲ್ಲಿಗಳಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿತ್ತು,” ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments