ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

'ಬೆಂಗಳೂರು ಜಾತ್ರೆ' ಹೊಸ ಗಿಮಿಕ್ಕಾ? ರೀಲ್ಸ್ ಮಂತ್ರಿಗಳೇ, ನಗರದ ಜಂಜಾಟಕ್ಕೆ ಮೊದಲು ಮುಕ್ತಿ ಕೊಡಿ- ಆರ್ ಅಶೋಕ ಕಿಡಿ!

ರೀಲ್ಸ್ ಮಂತ್ರಿ ಕೃಷ್ಣ ಬೈರೇಗೌಡ ಅವರೇ,ಬೆಂಗಳೂರಿನ ಜನರ ಕಣ್ಣಿಗೆ ಮಣ್ಣೆರಚಲು ಜಾತ್ರೆಯೇ ನಿಮ್ಮ ಹೊಸ ಗಿಮಿಕ್ಕಾ?ಬೆಂಗಳೂರು ಜಾತ್ರೆಗಿಂತ ಮೊದಲು ಬೆಂಗಳೂರಿಗರ ಜಂಜಾಟಕ್ಕೆ ಮುಕ್ತಿ ಕೊಡಿ ಸ್ವಾಮಿ ಎಂದು ಲೇವಡಿ ಮಾಡಿದ್ದಾರೆ.

ಆರ್. ಅಶೋಕ, ಕೃಷ್ಣ ಬೈರೇಗೌಡ
Nagaraja AB
Updated On : 24 Nov 2026, 3:34 pm

ಬೆಂಗಳೂರು: ಡಿಸೆಂಬರ್ 4 ರಿಂದ 13ರವರೆಗೆ ಹತ್ತು ದಿನಗಳ ಕಾಲ ಸುಮಾರು 20 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಬೆಂಗಳೂರು ಜಾತ್ರೆ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ವಿರೋಧ ಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರೀಲ್ಸ್ ಮಂತ್ರಿ ಕೃಷ್ಣ ಬೈರೇಗೌಡ ಅವರೇ,ಬೆಂಗಳೂರಿನ ಜನರ ಕಣ್ಣಿಗೆ ಮಣ್ಣೆರಚಲು ಜಾತ್ರೆಯೇ ನಿಮ್ಮ ಹೊಸ ಗಿಮಿಕ್ಕಾ?ಬೆಂಗಳೂರು ಜಾತ್ರೆಗಿಂತ ಮೊದಲು ಬೆಂಗಳೂರಿಗರ ಜಂಜಾಟಕ್ಕೆ ಮುಕ್ತಿ ಕೊಡಿ ಸ್ವಾಮಿ ಎಂದು ಲೇವಡಿ ಮಾಡಿದ್ದಾರೆ.

ಒಂದು ಕಡೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿ ಬೆಂಗಳೂರು ಜಾತ್ರೆ ಆಚರಣೆ. ಮತ್ತೊಂದು ಕಡೆ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿರುವ ಬೆಂಗಳೂರಿಗರು! ಇಷ್ಟಕ್ಕೂ ಯಾವ ಪುರುಷಾರ್ಥಕ್ಕೆ ಈ ಬೆಂಗಳೂರು ಜಾತ್ರೆ? ಯಾವ ಸಾಧನೆಗೆ ಈ ಸಂಭ್ರಮಾಚರಣೆ? ಎಂದು ಅವರು ಪ್ರಶ್ನಿಸಿದ್ದಾರೆ.

Advertisement

Advertisement

ಇಡೀ ಬೆಂಗಳೂರನ್ನು ಕಸದ ರಾಶಿ ಮತ್ತು ದುರ್ನಾತದ ನಗರವನ್ನಾಗಿ ಮಾಡಿದ್ದಕ್ಕಾ? ರಸ್ತೆಗಳನ್ನೆಲ್ಲ ಗುಂಡಿಮಯ ಮಾಡಿ, ವಾಹನ ಸವಾರರ ಬೆನ್ನುಮೂಳೆ ಮುರಿಯುವ ಸ್ಥಿತಿಗೆ ತಂದಿದ್ದಕ್ಕಾ? ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಲಾಗದೆ, ಜನರ ಅಮೂಲ್ಯ ಸಮಯವನ್ನು ರಸ್ತೆಯಲ್ಲೇ ಕಳೆಯುವಂತೆ ಮಾಡಿದ್ದಕ್ಕಾ? ಮಳೆ ಬಂದರೆ ಸಾಕು, ರಸ್ತೆಗಳು ಕೆರೆಗಳಾಗಿ, ಬಡಾವಣೆಗಳು ಜಲಾವೃತವಾಗುವಂತೆ ಮಾಡಿದ್ದಕ್ಕಾ? ಕುಡಿಯುವ ನೀರಿನ ಸಮಸ್ಯೆ, ಕಾವೇರಿ ನೀರಿನ ಅಸಮರ್ಪಕ ಪೂರೈಕೆ ಮತ್ತು ಟ್ಯಾಂಕರ್ ಮಾಫಿಯಾದಿಂದ ಜನರನ್ನು ಹೈರಾಣಾಗಿಸಿದ್ದಕ್ಕಾ? ಆಸ್ತಿ ತೆರಿಗೆ ಹೆಚ್ಚಳ, ಇ-ಖಾತಾ ಹೆಸರಿನಲ್ಲಿ ಹೊಸ ಹೊಸ ಶುಲ್ಕ, ಸಾಫ್ಟ್‌ವೇರ್ ಶುಲ್ಕಗಳ ಮೂಲಕ ಬೆಂಗಳೂರಿಗರ ಜೇಬಿಗೆ ಕತ್ತರಿ ಹಾಕುತ್ತಿರುವುದಕ್ಕಾ?

Also Read

ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದಂತಿದೆ; 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮಿ..?

ಮೆಟ್ರೋ ಪ್ರಯಾಣ ದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ ಮಾಡಿ ಜನಸಾಮಾನ್ಯರ ಸಾರಿಗೆ ವೆಚ್ಚ ಹೆಚ್ಚಿಸಿದ್ದಕ್ಕಾ? ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗದೆ, ಜನರು ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಡೆಯುವಂತೆ ಮಾಡಿದ್ದಕ್ಕಾ? ಒಳಚರಂಡಿ ವ್ಯವಸ್ಥೆ ಹದಗೆಟ್ಟು, ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಕ್ಕಾ? ಕಳಪೆ ರಸ್ತೆ ಕಾಮಗಾರಿ, ಅಪೂರ್ಣ ಯೋಜನೆಗಳು, ಧೂಳು ಮತ್ತು ವಾಯುಮಾಲಿನ್ಯದಿಂದ ಸಿಲಿಕಾನ್ ಸಿಟಿಯ ಬದುಕನ್ನೇ ದುಸ್ತರಗೊಳಿಸಿದ್ದಕ್ಕಾ?ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿಗರಿಗೆ ಬೇಕಿರುವುದು ಜಾತ್ರೆಯಲ್ಲ; ಸುಗಮ ಸಂಚಾರ, ಗುಂಡಿಗಳಿಲ್ಲದ ರಸ್ತೆಗಳು, ಸ್ವಚ್ಛ ಪರಿಸರ, ನಿರಂತರ ಕುಡಿಯುವ ನೀರು, ಸಮರ್ಪಕ ಒಳಚರಂಡಿ ಮತ್ತು ಉತ್ತಮ ನಾಗರಿಕ ಸೌಲಭ್ಯಗಳು. ಕಲಾವಿದರಿಗೆ ವೇದಿಕೆ ಕಲ್ಪಿಸುವುದಕ್ಕೆ ನಮ್ಮ ವಿರೋಧವಿಲ್ಲ. ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಕಲಾವಿದರನ್ನು ಗೌರವಿಸುವುದು ಸ್ವಾಗತಾರ್ಹ. ಆದರೆ ಅದನ್ನೇ ಆಡಳಿತದ ವೈಫಲ್ಯಗಳನ್ನು ಮುಚ್ಚಿಹಾಕುವ ರಾಜಕೀಯದ ವೇದಿಕೆಯನ್ನಾಗಿ ಮಾಡಬೇಡಿ ಎಂದಿದ್ದಾರೆ.

ಈ ಜಾತ್ರೆ ಮುಗಿದ ಮರುದಿನ ಬೆಂಗಳೂರಿನ ರಸ್ತೆಗಳು ಗುಂಡಿಮುಕ್ತವಾಗುತ್ತವೆಯೇ? ಕಸದ ಸಮಸ್ಯೆ ಬಗೆಹರಿಯುತ್ತದೆಯೇ? ಟ್ರಾಫಿಕ್ ಕಡಿಮೆಯಾಗುತ್ತದೆಯೇ? ಕುಡಿಯುವ ನೀರು ಸಿಗುತ್ತದೆಯೇ? ಎಂದು ಅವರು ಕೇಳಿದ್ದಾರೆ.

ನಿಮಗೆ ಬೆಂಗಳೂರು ಜಾತ್ರೆ 13 ದಿನಗಳ 20 ಕೋಟಿ ವೆಚ್ಚದ ಸಂಭ್ರಮ ಇರಬಹುದು. ಆದರೆ ಬೆಂಗಳೂರಿಗರ ಸಂಕಷ್ಟಕ್ಕೆ 365 ದಿನಗಳೂ ಮುಕ್ತಿಯಿಲ್ಲ! ರೀಲ್ಸ್ ಮಾಡುವುದರಲ್ಲಿ, ಜಾತ್ರೆ ಮಾಡುವುದರಲ್ಲಿ ತೋರುವ ಉತ್ಸಾಹವನ್ನು ನಗರದ ಅಭಿವೃದ್ಧಿ ಮಾಡುವುದರಲ್ಲೂ ತೋರಿಸಿ. ಬೆಂಗಳೂರಿಗೆ ಜಾತ್ರೆಯ ಆಡಳಿತ ಬೇಕಿಲ್ಲ, ಜವಾಬ್ದಾರಿಯುತ ಆಡಳಿತ ಬೇಕು! ರೀಲ್ಸ್, ಜಾತ್ರೆ, ಪ್ರಚಾರಗಳಿಂದ ಬೆಂಗಳೂರಿನ ಅಭಿವೃದ್ಧಿಯಾಗುವುದಿಲ್ಲ ಕೃಷ್ಣ ಬೈರೇಗೌಡರೇ! ಅದಕ್ಕೆ ಇಚ್ಛಾಶಕ್ತಿ, ದೂರದೃಷ್ಟಿ ಮತ್ತು ಜವಾಬ್ದಾರಿಯುತ ಆಡಳಿತ ಬೇಕು. ಬೆಂಗಳೂರಿಗರು ನಿಮ್ಮ ಜಾತ್ರೆಯ ಪ್ರೇಕ್ಷಕರಲ್ಲ. ನಿಮ್ಮ ವೈಫಲ್ಯಗಳಿಗೆ ಪ್ರತಿದಿನ ಬೆಲೆ ತೆರುತ್ತಿರುವ ತೆರಿಗೆದಾರರು! ಜಾತ್ರೆಯ ಸಂಭ್ರಮದ ಹಿಂದೆ ಆಡಳಿತದ ವೈಫಲ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಬೆಂಗಳೂರಿಗೆ ಜಾತ್ರೆಯ ಗಿಮಿಕ್ ಬೇಡ, ಜವಾಬ್ದಾರಿಯುತ ಆಡಳಿತ ಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments