ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ರಾಜ್ಯದಲ್ಲಿ ಸೀಟ್ ಬೆಲ್ಟ್, ಹೆಲ್ಮೆಟ್ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ! ಕೇವಲ ಶೇ. 15ರಷ್ಟು ಸವಾರರಿಂದ ಮಾತ್ರ ಸರಿಯಾದ ಹೆಲ್ಮೆಟ್ ಬಳಕೆ ಎಂದ ನಿಮ್ಹಾನ್ಸ್ ವರದಿ

ಕರ್ನಾಟಕದ ರಸ್ತೆಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಸಂಚರಿಸಿದರೂ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್‌ನಂತಹ ಜೀವ ರಕ್ಷಕ ನಿಯಮಗಳನ್ನು ಎಷ್ಟು ಮಂದಿ ಪಾಲಿಸುತ್ತಿದ್ದಾರೆ? ಆ ಕುರಿತ ವರದಿ ಇಲ್ಲಿದೆ:

ಸಾಂದರ್ಭಿಕ ಚಿತ್ರ — Express illustrations
Hruthin H P
Updated On : 26 Nov 2026, 9:45 am

ಬೆಂಗಳೂರು: ಸಂಚಾರ ದಟ್ಟಣೆ ಮತ್ತು ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವ ನಡುವೆಯೂ, ಕರ್ನಾಟಕದ ರಸ್ತೆಗಳಲ್ಲಿ ಪ್ರಯಾಣಿಕರ ಸುರಕ್ಷತಾ ನಿಯಮಗಳ ಪಾಲನೆ ಅತ್ಯಂತ ಕಳಪೆ ಮಟ್ಟದಲ್ಲಿದೆ ಎಂಬ ಕಹಿ ಸತ್ಯವನ್ನು ನೂತನ ಅಧ್ಯಯನವೊಂದು ಬಯಲು ಮಾಡಿದೆ. ಹೆಲ್ಮೆಟ್ ಧರಿಸುವುದರಿಂದ ಹಿಡಿದು ಕಾರಿನಲ್ಲಿ ಸೀಟ್ ಬೆಲ್ಟ್ ಹಾಕುವವರೆಗೆ ವಾಹನ ಸವಾರರು ತೋರುತ್ತಿರುವ ಉದಾಸೀನತೆ ಎಷ್ಟರಮಟ್ಟಿಗೆ ಅಪಾಯಕಾರಿಯಾಗಿದೆ ಎಂಬುದನ್ನು ನಿಮ್ಹಾನ್ಸ್ ಸಂಸ್ಥೆಯ 'ಸ್ಥಿತಿಗತಿ ಸಾರಾಂಶ ವರದಿ 2026' ಅಂಕಿ-ಅಂಶಗಳ ಸಮೇತ ವಿವರಿಸಿದೆ. ಆ ಕುರಿತ ವರದಿ ಇಲ್ಲಿದೆ:

ವರದಿಯಲ್ಲಿ ಏನಿದೆ?

ಬುಧವಾರ ನಿಮ್ಹಾನ್ಸ್‌ನಲ್ಲಿ (NIMHANS) ಬಿಡುಗಡೆಯಾದ 'ಸ್ಥಿತಿಗತಿ ಸಾರಾಂಶ ವರದಿ 2026: ಭಾರತದ ಕರ್ನಾಟಕ ರಾಜ್ಯದಲ್ಲಿ ರಸ್ತೆ ಸುರಕ್ಷತಾ ಅಪಾಯದ ಅಂಶಗಳು' ಎಂಬ ವರದಿಯಲ್ಲಿ, ಕರ್ನಾಟಕದಲ್ಲಿ ಕೇವಲ ಶೇ. 15ರಷ್ಟು ದ್ವಿಚಕ್ರ ವಾಹನ ಸವಾರರು ಮಾತ್ರ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸುತ್ತಾರೆ, ಹಾಗೆಯೇ ಬೆಂಗಳೂರಿನಲ್ಲಿ ಹೆಲ್ಮೆಟ್ ಬಳಕೆಯು ಶೇ. 88ರಿಂದ ಶೇ. 56ಕ್ಕೆ ತೀವ್ರವಾಗಿ ಕುಸಿದಿದೆ ಎಂದು ಪತ್ತೆಹಚ್ಚಿದ್ದು, ಇದು ಕಡ್ಡಾಯ ಹೆಲ್ಮೆಟ್ ನಿಯಮಗಳ ಪಾಲನೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅದರಲ್ಲೂ, ಬೆಂಗಳೂರಿನಲ್ಲಿ ಸರಿಯಾದ ಅಂದ್ರೆ, ಪ್ರಮಾಣೀಕೃತ ಪೂರ್ಣ ಮುಖದ (ಫುಲ್ ಫೇಸ್) ಅಥವಾ ಅರ್ಧ ಮುಖದ (ಹಾಫ್ ಫೇಸ್) ಹೆಲ್ಮೆಟ್ ಅನ್ನು ಭದ್ರವಾಗಿ ಪಟ್ಟಿ ಕಟ್ಟಿ (ಫಾಸ್ಟೆನ್ ಮಾಡಿ) ಧರಿಸುವವರ ಪ್ರಮಾಣವೂ ಶೇ. 34ರಿಂದ ಶೇ. 25ಕ್ಕೆ ಇಳಿದಿದೆ ಎಂಬುದನ್ನು ಪತ್ತೆಹಚ್ಚಿದೆ.

Advertisement

Advertisement

ಹೆಲ್ಮೆಟ್ ಮತ್ತು ಹಿಂಬದಿ ಸವಾರರ ಸ್ಥಿತಿ

ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಇನಿಶಿಯೇಟಿವ್ ಫಾರ್ ಗ್ಲೋಬಲ್ ರೋಡ್ ಸೇಫ್ಟಿ ಅಡಿಯಲ್ಲಿ, ಜಾನ್ಸ್ ಹಾಪ್‌ಕಿನ್ಸ್ ಇಂಟರ್‌ನ್ಯಾಶನಲ್ ಇಂಜುರಿ ರಿಸರ್ಚ್ ಯೂನಿಟ್‌ನ ತಾಂತ್ರಿಕ ಬೆಂಬಲದೊಂದಿಗೆ ನಿಮ್ಹಾನ್ಸ್ ನಡೆಸಿರುವ ಇ ಅಧ್ಯಯನದಲ್ಲಿ ರಾಜ್ಯಾದ್ಯಂತ ಒಟ್ಟಾರೆ ಹೆಲ್ಮೆಟ್ ಬಳಕೆಯು ಶೇ. 30ರಷ್ಟಿದ್ದು, ಬೆಂಗಳೂರು ಮಹಾನಗರ ಪ್ರದೇಶದ ಶೇ. 56ಕ್ಕೆ ಹೋಲಿಸಿದರೆ, ಬಿಎಂಆರ್ ಹೊರಗಿನ ಪ್ರದೇಶಗಳಲ್ಲಿ ನಿಯಮ ಪಾಲನೆಯು ಗಮನಾರ್ಹವಾಗಿ ಕಡಿಮೆ ಅಂದರೆ ಶೇ. 22ರಷ್ಟಿದೆ. ಹಿಂಬದಿ ಸವಾರರು ವಿಶೇಷವಾಗಿ ಹೆಚ್ಚಿನ ಅಪಾಯದಲ್ಲಿದ್ದು, ಶೇ. 19ರಷ್ಟು ಬೈಕ್ ಸವಾರರಿಗೆ ಹೋಲಿಸಿದರೆ ಕೇವಲ ಶೇ. 5ರಷ್ಟು ಹಿಂಬದಿ ಸವಾರರು ಮಾತ್ರ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸುತ್ತಿದ್ದಾರೆ ಎನ್ನಲಾಗಿದೆ.

Also Read

ಮನಸ್ಸಿದ್ದರೆ ಮಾರ್ಗ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದು ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ; ರೈತನ ದಿಟ್ಟ ಹೆಜ್ಜೆಗೆ ಇಡೀ ಊರೇ ಸಾಥ್!

ಮುಂದುವರೆದು, ಡಿಸೆಂಬರ್ 2025 ಮತ್ತು ಜೂನ್ 2026ರ ನಡುವೆ ಪ್ರತಿಯೊಂದು ಅಪಾಯಕಾರಿ ಅಂಶದ ಕ್ಷೇತ್ರಕ್ಕೂ ಸಂಬಂಧಿಸಿದಂತೆ 48 ಸ್ಥಳಗಳಲ್ಲಿ ನಡೆಸಲಾದ ಹತ್ತು ಲಕ್ಷಕ್ಕೂ (ಒಂದು ಮಿಲಿಯನ್) ಹೆಚ್ಚು ರಸ್ತೆ ಬಳಕೆದಾರರು ಮತ್ತು ವಾಹನಗಳ ವೀಕ್ಷಣೆಗಳನ್ನು ಈ ಅಧ್ಯಯನದ ಫಲಿತಾಂಶಗಳು ಆಧರಿಸಿರುವ ಇ ವರದಿಯಲ್ಲಿ, ಕರ್ನಾಟಕದಾದ್ಯಂತ ವಯಸ್ಕರ ಸೀಟ್-ಬೆಲ್ಟ್ ಬಳಕೆಯು ಕೇವಲ ಶೇ. 22ರಷ್ಟಿದ್ದು, ಬಿಎಂಆರ್‌ನಲ್ಲಿ ಶೇ. 40ರಷ್ಟು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ. 15ರಷ್ಟು ನಿಯಮ ಪಾಲನೆಯಾಗುತ್ತಿದೆ ಎಂಬುದನ್ನೂ ಈ ಅಧ್ಯಯನವು ಪತ್ತೆಹಚ್ಚಿದೆ. ಮಕ್ಕಳ ಸುರಕ್ಷತಾ ಸಾಧನಗಳ (ಚೈಲ್ಡ್ ರಿಸ್ಟ್ರೇಂಟ್) ಬಳಕೆಯು ಶೇ. 1ಕ್ಕಿಂತ ಕಡಿಮೆಯಿದ್ದು, ಇದು ವಾಹನಗಳಲ್ಲಿ ಪ್ರಯಾಣಿಸುವ ಚಿಕ್ಕ ಮಕ್ಕಳನ್ನು ಅಪಘಾತಗಳ ಸಮಯದಲ್ಲಿ ಗಂಭೀರ ಅಪಾಯಗಳಿಗೆ ದೂಡುತ್ತಿದೆ. ಜೊತೆಗೆ, ಶೇ. 24ರಷ್ಟು ವಾಹನಗಳಲ್ಲಿ ಅತಿ ವೇಗದ ಚಾಲನೆ ದಾಖಲಾಗಿದ್ದು, ನಿಗದಿತ ವೇಗದ ಮಿತಿಯನ್ನು ಮೀರುವ ವಾಹನಗಳಲ್ಲಿ ಎಸ್‌ಯುವಿಗಳು (ಶೇ. 38), ಸೆಡಾನ್‌ಗಳು (ಶೇ. 36) ಮತ್ತು ಲಘು ವಾಹನಗಳು (ಶೇ. 34) ಸೇರಿವೆ.

ಮುಂದೇನು?

ರಾಜ್ಯ ಮಟ್ಟದಲ್ಲಿ ಇಂತಹ ನಡವಳಿಕೆಯ ಅಧ್ಯಯನಗಳನ್ನು ಈ ಹಿಂದೆ ನಡೆಸಿರಲಿಲ್ಲ ಎಂದು ಹೇಳಿದ ಕರ್ನಾಟಕ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಕೆ. ಪರಶುರಾಮ ಅವರು, ಗುರಿ ಆಧಾರಿತ ಕಾನೂನು ಜಾರಿಯನ್ನು (ಟಾರ್ಗೆಟೆಡ್ ಎನ್‌ಫೋರ್ಸ್‌ಮೆಂಟ್) ಸಕ್ರಿಯಗೊಳಿಸಲು ಕಣ್ಗಾವಲನ್ನು ರಸ್ತೆ ಸುರಕ್ಷತಾ ಕ್ರಿಯಾ ಯೋಜನೆಗಳ ದಿನನಿತ್ಯದ ಭಾಗವನ್ನಾಗಿ ಮಾಡುವಂತೆ ಕರೆ ನೀಡಿದರು. ಜೊತೆಗೆ, ನಿಯಮ ಪಾಲನೆಯನ್ನು ಸುಧಾರಿಸಲು ಮತ್ತು ಅಪಘಾತಗಳು ಹಾಗೂ ಗಾಯಗಳನ್ನು ಕಡಿಮೆ ಮಾಡಲು ಕೇಂದ್ರೀಕೃತ ಕಾನೂನು ಜಾರಿ, ರಸ್ತೆ ಎಂಜಿನಿಯರಿಂಗ್ ಮಧ್ಯಸ್ಥಿಕೆಗಳು (ಸುಧಾರಣೆಗಳು) ಮತ್ತು ಕಾರ್ಯತಂತ್ರದ ಸಂವಹನವನ್ನು (ಜಾಗೃತಿ) ಈ ವರದಿಯು ಶಿಫಾರಸು ಮಾಡುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement