ಯೋಗೇಶ್ ಗೌಡ ಕೊಲೆ ಕೇಸ್: ಶಾಸಕ ಸ್ಥಾನ ಉಳಿಸಲು ಶಿಕ್ಷೆಗೆ ತಡೆ ನೀಡಲಾಗದು: ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಚಾಟಿ
ಶಾಸಕ ಸ್ಥಾನದಿಂದ ಅನರ್ಹರಾಗುತ್ತಾರೆ ಎಂಬ ಕಾರಣಕ್ಕೆ ಅಪರಾಧ ಸಾಬೀತಾದ ತೀರ್ಪಿಗೆ ತಡೆ ನೀಡಬೇಕು ಎಂಬುದು ತಪ್ಪು ಕಲ್ಪನೆ.
ಹುಬ್ಬಳ್ಳಿ: ಶಾಸಕ ಸ್ಥಾನದಿಂದ ಅನರ್ಹರಾಗುತ್ತಾರೆ ಎಂಬ ಕಾರಣಕ್ಕೆ ಅಪರಾಧ ಸಾಬೀತಾದ ತೀರ್ಪಿಗೆ ತಡೆ ನೀಡಬೇಕು ಎಂಬುದು ತಪ್ಪು ಕಲ್ಪನೆ. ಶಿಕ್ಷೆಗೆ ಗುರಿಯಾದ ವ್ಯಕ್ತಿ ವಿಧಾನಸಭೆಯ ಸದಸ್ಯತ್ವ ಕಳೆದುಕೊಳ್ಳುತ್ತಾರೆ ಎಂಬ ಕಾರಣವನ್ನೇ ಶಿಕ್ಷೆಯ ತೀರ್ಪಿಗೆ ತಡೆ ನೀಡುವ ನ್ಯಾಯಾಲಯದ ಅಧಿಕಾರದ ಆಧಾರವಾಗಿ ಪರಿಗಣಿಸಿದರೆ, ಅಪರಾಧ ಸಾಬೀತಾದ ಪ್ರತಿಯೊಬ್ಬ ಶಾಸಕರೂ ತೀರ್ಪಿಗೆ ತಡೆ ನೀಡುವಂತೆ ಕೋರಲು ಅರ್ಹರಾಗುತ್ತಾರೆ. ಆಗ ಅಂತಹ ಶಾಸಕರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದಲ್ಲದೆ, ಮುಂದಿನ ಚುನಾವಣೆಗಳಲ್ಲಿಯೂ ಸ್ಪರ್ಧಿಸಲು ಅವಕಾಶ ಪಡೆಯುತ್ತಾರೆ. ಇದು ಕಾನೂನಿನ ಕಡ್ಡಾಯ ಪರಿಣಾಮಗಳನ್ನು ನಿರರ್ಥಕಗೊಳಿಸುತ್ತದೆ” ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಿಜೆಪಿ ಮುಖಂಡ ಯೋಗೇಶಗೌಡ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಅಪರಾಧ ಸಾಬೀತಾದ ತೀರ್ಪಿಗೆ ತಡೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(3)ರ ಅಡಿಯಲ್ಲಿ ವಿನಯ್ ಕುಲಕರ್ಣಿ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವ ಸಾಧ್ಯತೆಯಿದೆ ಎಂಬ ರಕ್ಷಣಾ ವಕೀಲರ ವಾದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿಗಳು ಈ ಅಭಿಪ್ರಾಯ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರನ್ನೊಳಗೊಂಡ ಪೀಠವು ತನ್ನ ಆದೇಶದಲ್ಲಿ, “ಕೊಲೆ, ದರೋಡೆ, ಅತ್ಯಾಚಾರ, ಅಪಹರಣಕ್ಕಾಗಿ ಸುಲಿಗೆ ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಮೇಲ್ಮನವಿ ವಿಚಾರಣೆ ಭವಿಷ್ಯದಲ್ಲಿ ನಡೆಯುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಶಿಕ್ಷೆಯನ್ನು ಅಮಾನತುಗೊಳಿಸಬಹುದು ಎಂದು ಭಾವಿಸುವುದು ತಪ್ಪು.
ಹೈಕೋರ್ಟ್ಗಳಲ್ಲಿ ಕ್ರಿಮಿನಲ್ ಮೇಲ್ಮನವಿಗಳು ದೀರ್ಘಕಾಲ ಬಾಕಿ ಉಳಿಯುವುದು ವಾಸ್ತವ. ಆದರೆ ಅದರಿಂದ ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರತಿಯೊಬ್ಬರಿಗೂ ಸ್ವಯಂಚಾಲಿತವಾಗಿ ಶಿಕ್ಷೆ ಅಮಾನತಿನ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿ ಶಿಕ್ಷೆಯ ಬಹುಭಾಗವನ್ನು ಈಗಾಗಲೇ ಅನುಭವಿಸಿರುವ ನೂರಾರು ಇತರ ಕೈದಿಗಳ ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕಿನ ದೃಷ್ಟಿಯಿಂದಲೂ ಈ ಪ್ರಕರಣವನ್ನು ಪರಿಗಣಿಸಬೇಕಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ ತೀರ್ಪು 2026ರ ಏಪ್ರಿಲ್ 15ರಂದು ಪ್ರಕಟವಾಗಿರುವುದನ್ನು ಹೈಕೋರ್ಟ್ ಗಮನಿಸಬೇಕಿತ್ತು. ಅವರನ್ನು ಇತರ ಶಿಕ್ಷಿತ ಕೈದಿಗಳಿಗಿಂತ ಭಿನ್ನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅಪರಾಧ ಸಾಬೀತಾದ ತೀರ್ಪಿಗೆ ತಡೆ ನೀಡುವುದರಿಂದ ನಿರಪರಾಧಿ ಎಂಬ ಪೂರ್ವಭಾವಿ ಊಹೆಯ ಮಹತ್ವ ಗಣನೀಯವಾಗಿ ಕುಗ್ಗುತ್ತದೆ. ಮೇಲ್ಮನವಿ ನ್ಯಾಯಾಲಯವು ಆರೋಪಿಗೆ ಖುಲಾಸೆಯಾಗುವ ನ್ಯಾಯಸಮ್ಮತ ಅವಕಾಶವಿದೆ ಹಾಗೂ ಮೇಲ್ನೋಟಕ್ಕೆ ಖುಲಾಸೆಗೆ ಪೂರಕವಾದ ಬಲವಾದ ಪ್ರಕರಣವಿದೆ ಎಂಬ ಅಭಿಪ್ರಾಯಕ್ಕೆ ಬಂದಾಗ ಮಾತ್ರ ಶಿಕ್ಷೆಯನ್ನು ಅಮಾನತುಗೊಳಿಸುವ ಆದೇಶ ನೀಡಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಶಿಕ್ಷೆಯನ್ನು ಅಮಾನತುಗೊಳಿಸುವುದು ಮತ್ತು ಅಪರಾಧ ಸಾಬೀತಾದ ತೀರ್ಪಿಗೆ ತಡೆ ನೀಡುವುದು ಎರಡೂ ವಿಭಿನ್ನ ಪ್ರಕ್ರಿಯೆಗಳಾಗಿವೆ ಎಂದು ಪೀಠ ಸ್ಪಷ್ಟಪಡಿಸಿದೆ.
ಅಪರಾಧ ಸಾಬೀತಾದ ತೀರ್ಪಿಗೆ ತಡೆ ನೀಡಲು ಅನ್ವಯಿಸುವ ಮಾನದಂಡಗಳು, ಶಿಕ್ಷೆಯನ್ನು ಅಮಾನತುಗೊಳಿಸುವುದಕ್ಕಿಂತ ಕಠಿಣವಾಗಿವೆ. ಇವೆರಡರ ನಡುವಿನ ವ್ಯತ್ಯಾಸ ಸೂಕ್ಷ್ಮವಾಗಿದ್ದರೂ, ಎರಡಕ್ಕೂ ಅನ್ವಯಿಸುವ ಪರೀಕ್ಷೆ ಮತ್ತು ಮಾನದಂಡಗಳು ವ್ಯಾಪಕವಾಗಿ ಭಿನ್ನವಾಗಿವೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಖುಲಾಸೆಗೆ ಆಧಾರವಾಗಬಹುದಾದ ತೀರ್ಪಿನಲ್ಲಿನ ಯಾವುದೇ ಗಂಭೀರ ದೋಷವನ್ನು ಹೈಕೋರ್ಟ್ ಗುರುತಿಸಿರಲಿಲ್ಲ. ಬದಲಿಗೆ, ಎರಡೂ ಕಡೆಯ ವಾದಗಳನ್ನು ಪಟ್ಟಿ ಮಾಡಿ, ಅಂತಿಮ ವಿಚಾರಣೆ ವೇಳೆ ಅವುಗಳನ್ನು ನಿರ್ಧರಿಸಬಹುದು ಎಂದು ಹೇಳಿತ್ತು ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಆರೋಪಿಗೆ ಮೇಲ್ಮನವಿಯಲ್ಲಿ ಗೆಲ್ಲುವ ನ್ಯಾಯಸಮ್ಮತ ಅವಕಾಶವಿದೆ ಮತ್ತು ವಾದಿಸಲು ಬಲವಾದ ಆಧಾರಗಳಿವೆ ಎಂಬ ಪ್ರಾಥಮಿಕ ಅಭಿಪ್ರಾಯದ ಆಧಾರದ ಮೇಲೆಯೇ ಹೈಕೋರ್ಟ್ ನಿರ್ಧಾರ ಕೈಗೊಳ್ಳಬೇಕಿತ್ತು. ತೀರ್ಪಿನಲ್ಲಿರುವ ಯಾವುದೇ ಬಲವಾದ ಕಾರಣವಿಲ್ಲದೆ ಘೋರ ಅಪರಾಧಗಳಿಗೆ ಶಿಕ್ಷೆಗೊಳಗಾದವರಿಗೆ ಶಿಕ್ಷೆ ಅಮಾನತಿನ ಪ್ರಯೋಜನ ನೀಡಲಾಗದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.