ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮಂಡ್ಯದಲ್ಲಿ ಭುಗಿಲೆದ್ದ ಫ್ಲೆಕ್ಸ್ ವಾರ್‌: ಮಿಮ್ಸ್ ಆಸ್ಪತ್ರೆಯ ನಾಮಫಲಕದಲ್ಲಿದ್ದ ಮೋದಿ, ಕುಮಾರಸ್ವಾಮಿ ಭಾವಚಿತ್ರಕ್ಕೆ ಟೇಪ್ ಅಂಟಿಸಿದ್ದಕ್ಕೆ ಆಕ್ರೋಶ!

ಮಂಡ್ಯದ ಮಿಮ್ಸ್ ಆಸ್ಪತ್ರೆ ಆವರಣದಲ್ಲಿನ ಅಭಿವೃದ್ಧಿ ಕಾಮಗಾರಿಯ ನಾಮಫಲಕದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಗಳಿಗೆ ಕಿಡಿಗೇಡಿಗಳು ಟೇಪ್ ಅಂಟಿಸಿ ವಿರೂಪಗೊಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮಿಮ್ಸ್ ಆಸ್ಪತ್ರೆಯ ನಾಮಫಲಕದಲ್ಲಿದ್ದ ಮೋದಿ, ಕುಮಾರಸ್ವಾಮಿ ಭಾವಚಿತ್ರಕ್ಕೆ ಟೇಪ್!
Hruthin H P
Updated On : 27 Nov 2026, 11:04 am

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿದ್ದ ಅಭಿವೃದ್ಧಿ ಕಾಮಗಾರಿಯ ನಾಮಫಲಕದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಗಳಿಗೆ ಟೇಪ್ ಅಂಟಿಸಿ ಮರೆಮಾಚಿರುವ ಘಟನೆ ಮಂಡ್ಯದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಶಿಫಾರಸಿನ ಮೇರೆಗೆ, ಸಾರ್ವಜನಿಕ ವಲಯದ ಉದ್ದಿಮೆಗಳಾದ ಸೇಲ್ (SAIL) ಮತ್ತು ಭೆಲ್ (BHEL) ಸಂಸ್ಥೆಗಳ ಸಿಎಸ್‌ಆರ್ (CSR) ಅನುದಾನದಡಿ ಸುಮಾರು ₹2.47 ಕೋಟಿಯಿಂದ ₹3 ಕೋಟಿ ವೆಚ್ಚದಲ್ಲಿ ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು, ಈ ಕಾಮಗಾರಿಯ ಪ್ರಗತಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಅಳವಡಿಸಲಾಗಿದ್ದ ನೀಲಿ ಬಣ್ಣದ ದೊಡ್ಡ ನಾಮಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಗಳು, ಹೆಸರು ಹಾಗೂ ಜೆಡಿಎಸ್ ಪಕ್ಷದ ಚಿಹ್ನೆ ಇತ್ತು.

Advertisement

Advertisement

ಆದರೆ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಅಭಿವೃದ್ಧಿ ಕಾಮಗಾರಿ ಫಲಕದಲ್ಲಿ ರಾಜಕೀಯ ನಾಯಕರ ಫೋಟೋ ಮತ್ತು ಪಕ್ಷದ ಚಿಹ್ನೆ ಇರುವುದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಒತ್ತಡ ಅಥವಾ ಆಕ್ಷೇಪದ ಹಿನ್ನೆಲೆಯಲ್ಲಿ ಮಿಮ್ಸ್ ಸಿಬ್ಬಂದಿಯೇ ನಾಮಫಲಕದಲ್ಲಿದ್ದ ಮೋದಿ, ಕುಮಾರಸ್ವಾಮಿ ಅವರ ಮುಖ, ಹೆಸರು ಹಾಗೂ ಪಕ್ಷದ ಚಿಹ್ನೆಯ ಮೇಲೆ ಕಂದು ಬಣ್ಣದ ಟೇಪ್ ಅಂಟಿಸಿ ಮರೆಮಾಚಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ, ಟೇಪ್ ಅಂಟಿಸಿ ವಿರೂಪಗೊಳಿಸಲಾದ ಫಲಕದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಅನುದಾನದ ಕಾಮಗಾರಿಗೆ ಈ ರೀತಿ ಅಗೌರವ ತೋರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇನ್ನು, ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಮಿಮ್ಸ್ ಆಡಳಿತ ಮಂಡಳಿ, ತಕ್ಷಣವೇ ನಾಮಫಲಕದ ಮೇಲಿದ್ದ ಟೇಪ್‌ಗಳನ್ನು ತೆರವುಗೊಳಿಸಿದೆ.

Also Read

'ಕೆಲಸಕ್ಕೆ ಬಾರದವ': ಕೆಡಿಪಿ ಸಭೆಯಲ್ಲಿದ್ದ ಕುಮಾರಸ್ವಾಮಿಯ ನಾಮಫಲಕ ತೆಗೆಸಿದ ಕಾಂಗ್ರೆಸ್ ಶಾಸಕ

ಮತ್ತೊಂದೆಡೆ, ಈ ಘಟನೆ ನಡೆಯುವ ಕೇವಲ ಎರಡು ದಿನಗಳ ಹಿಂದಷ್ಟೇ (ನವೆಂಬರ್ 24ರಂದು) ಮಂಡ್ಯ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲೂ ಇಂತಹದ್ದೇ ನಾಮಫಲಕ ವಿವಾದ ಭುಗಿಲೆದ್ದಿತ್ತು. ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೆಸರಿನ ನಾಮಫಲಕವನ್ನು ಇಡಲಾಗಿದ್ದಕ್ಕೆ ಮದ್ದೂರು ಕಾಂಗ್ರೆಸ್ ಶಾಸಕ ಉದಯ್ ಕದಲೂರು ಆಕ್ಷೇಪ ವ್ಯಕ್ತಪಡಿಸಿ, ಅದನ್ನು ತೆರವುಗೊಳಿಸಿ ತಮ್ಮ ನಾಮಫಲಕವನ್ನು ಇರಿಸಿದ್ದರು. ಈ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಸಭೆಯಲ್ಲೇ ತೀವ್ರ ಮಾತಿನ ಚಕಮಕಿ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement