ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಈ ಮಹತ್ವದ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳುವಂತೆ ಸಂಶೋಧಕರಲ್ಲಿ ನಾನು ಮನವಿ ಮಾಡುತ್ತೇನೆ. ಇದರಿಂದ ನಾವು ಈ ಕ್ಷೇತ್ರದ ಬಗ್ಗೆ ಆಳವಾದ ತಿಳುವಳಿಕೆ ಬೆಳೆಸಿಕೊಳ್ಳಲು ಹಾಗೂ ವೈದ್ಯಕೀಯ ಕ್ಷೇತ್ರವನ್ನು ಹೆಚ್ಚು ವಾಸ್ತವಿಕಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಪುರುಷರು ಮತ್ತು ಮಹಿಳೆಯರಲ್ಲಿ ರೋಗಗಳ ಲಕ್ಷಣಗಳು, ಚಿಕಿತ್ಸಾ ವಿಧಾನಗಳು ಹಾಗೂ ಔಷಧಿಗಳ ಪರಿಣಾಮಗಳು ಭಿನ್ನವಾಗಿರಬಹುದು. ಆದರೆ ಈ ಕ್ಷೇತ್ರದಲ್ಲಿ ತುಲನಾತ್ಮಕವಾಗಿ ಕಡಿಮೆ ಸಂಶೋಧನೆಗಳು ನಡೆದಿವೆ. ಹೀಗಾಗಿ ಮಹಿಳೆಯರ ಆರೋಗ್ಯದ ಕುರಿತು ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ.
ನಿನ್ನೆ ಶುಕ್ರವಾರ ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ಸಂಶೋಧನಾ ಅಧ್ಯಯನಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಸೀಮಿತವಾಗಿದೆ ಎಂದು ಹೇಳಿದರು.
ಈ ಮಹತ್ವದ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳುವಂತೆ ಸಂಶೋಧಕರಲ್ಲಿ ನಾನು ಮನವಿ ಮಾಡುತ್ತೇನೆ. ಇದರಿಂದ ನಾವು ಈ ಕ್ಷೇತ್ರದ ಬಗ್ಗೆ ಆಳವಾದ ತಿಳುವಳಿಕೆ ಬೆಳೆಸಿಕೊಳ್ಳಲು ಹಾಗೂ ವೈದ್ಯಕೀಯ ಕ್ಷೇತ್ರವನ್ನು ಹೆಚ್ಚು ವಾಸ್ತವಿಕಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ (AI), ಜೀನೋಮಿಕ್ಸ್, ಸ್ವಯಂಚಾಲಿತ ತಂತ್ರಜ್ಞಾನ ಹಾಗೂ ದತ್ತಾಂಶ ಆಧಾರಿತ ಸೇವೆಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳನ್ನು ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ತಂತ್ರಜ್ಞಾನವು ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಸುಧಾರಿಸಬಹುದಾದರೂ, ವೈದ್ಯಕೀಯ ಸೇವೆಯಲ್ಲಿ ಅಗತ್ಯವಿರುವ ಮಾನವೀಯ ಕಾಳಜಿ ಮತ್ತು ಕರುಣೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಅದಿಚುಂಚನಗಿರಿ ಮಠದ ಸೇವೆಯನ್ನು ಶ್ಲಾಘಿಸಿದ ಸಿಎಂ
ಆದಿಚುಂಚನಗಿರಿ ಮಠವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಒದಗಿಸುತ್ತಿರುವ ಸೇವೆಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ಸಮುದಾಯಗಳಿಗೂ ಮಠವು ಸಲ್ಲಿಸುತ್ತಿರುವ ಸೇವೆಯನ್ನು ಅವರು ಪ್ರಶಂಸಿಸಿದರು.
18ನೇ ಬಿಜಿಎಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ-2026 ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ದೂರದೃಷ್ಟಿಯ ಫಲವಾಗಿ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದ್ದು, ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದು ಹೇಳಿದರು.
ಟ್ರಸ್ಟ್ ಅಡಿಯಲ್ಲಿ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಮರಳಿ ಬಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅವರ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಿಜಿಎಸ್ ಮತ್ತು ಎಸ್‌ಜೆಬಿ ಶಿಕ್ಷಣ ಸಂಸ್ಥೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶನಾಥ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಕೈಬಿಟ್ಟು, ಕರ್ತವ್ಯಕ್ಕೆ ಮರಳಿ: ಸಿಎಂ ಮನವಿ; ಬೇಡಿಕೆಗಳ ಈಡೇರಿಕೆಯ ಭರವಸೆ! Video
ಬಾಲಕಿಯರು, ಮಹಿಳಾ ಶಿಕ್ಷಕಿಯರ ನೈರ್ಮಲ್ಯಕ್ಕೆ CSR ನಿಧಿ
ಮಹಿಳಾ ಸಬಲೀಕರಣ ಮತ್ತು ಆರೋಗ್ಯದ ಕುರಿತು ಮಾತನಾಡುತ್ತಿರುವ ಈ ಸಂದರ್ಭದಲ್ಲಿ, ಗ್ರಾಮೀಣ ಪ್ರದೇಶದ ಹಲವು ಶಾಲೆಗಳಲ್ಲಿ ಬಾಲಕಿಯರು ಮತ್ತು ಶಿಕ್ಷಕಿಯರಿಗೆ ಮೂಲಭೂತ ನೈರ್ಮಲ್ಯ ಸೌಲಭ್ಯಗಳೇ ಇಲ್ಲ. ಕರ್ನಾಟಕದಾದ್ಯಂತ ಇಂತಹ ಸವಾಲುಗಳನ್ನು ಪರಿಹರಿಸಲು ಉದ್ಯಮ ವಲಯ ಸಮಗ್ರ ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ರಾಜ್ಯಪಾಲೆ ಡಾ. ಸುಧಾ ಯಾದವ್ ಹೇಳಿದರು.
ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ (ಬಿಸಿಐಸಿ) ಆಯೋಜಿಸಿದ್ದ ಮೊದಲ ಸಿಎಸ್‌ಆರ್ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೂರದ ಪ್ರದೇಶಗಳ ಸಮುದಾಯಗಳಲ್ಲಿ ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳ ಲಭ್ಯತೆಯಲ್ಲಿರುವ ಕೊರತೆಗಳನ್ನು ಪ್ರಸ್ತಾಪಿಸಿದ ಅವರು, ಸಸಿ ನೆಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹೊಣೆಗಾರಿಕೆ ವಹಿಸುವಂತೆ ಕರೆ ನೀಡಿದರು.
ಬಿಸಿಐಸಿ ಅಧ್ಯಕ್ಷ ಕೆ. ರವಿ, ಸಿಎಸ್‌ಆರ್ ಚಟುವಟಿಕೆಗಳು ಕೇವಲ ಚೆಕ್ ಮೂಲಕ ದೇಣಿಗೆ ನೀಡುವ ಪರೋಪಕಾರದ ಹಂತದಿಂದ ಕಾರ್ಯತಂತ್ರ ಆಧಾರಿತ, ಅಳೆಯಬಹುದಾದ ಹಾಗೂ ಆಡಳಿತ ಮಂಡಳಿಯ ನೇತೃತ್ವದಲ್ಲಿ ನಡೆಯುವ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಾಗಿ ವಿಕಸನಗೊಂಡಿವೆ.
ಬಿಸಿಐಸಿ ತನ್ನ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ತಡೆಗಟ್ಟುವ ಆರೋಗ್ಯ ಸೇವೆ, ಸಮುದಾಯ ಆಧಾರಿತ ನಗರಾಭಿವೃದ್ಧಿ ಮತ್ತು ಪರಿಸರ ಸುಸ್ಥಿರತೆ ಕುರಿತ ನಮ್ಮ ಉಪಕ್ರಮಗಳು ಕೇವಲ ನಿಯಮ ಪಾಲನೆಗೆ ಸೀಮಿತವಾಗದೆ, ಉದ್ಯಮ ವಲಯದ ಸಕ್ರಿಯ ಸಹಭಾಗಿತ್ವದ ಮೂಲಕ ತಳಮಟ್ಟದಲ್ಲಿ ಶಾಶ್ವತ ಬದಲಾವಣೆ ತರುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.