ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆದಿದ್ದು, ಮತದಾರರ ಪಟ್ಟಿಯಿಂದ ಕೈಬಿಡಲಾದವರಲ್ಲಿ ಅಲೆಮಾರಿಗಳು, ಬುಡಕಟ್ಟು ಸಮುದಾಯಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ಎಸ್‌ಐಆರ್ ವಿರೋಧಿ ಒಕ್ಕೂಟ ಗಂಭೀರ ಆರೋಪ ಮಾಡಿದೆ.
ಎಸ್‌ಐಆರ್ ವಿರೋಧಿ ಒಕ್ಕೂಟ ಎಸ್‌ಐಆರ್ ಲೆಕ್ಕಪರಿಶೋಧನಾ ವರದಿಯನ್ನು ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದು, ಈ ವರದಿ ನಾಗರಿಕ ಸಮಾಜದ ಗುಂಪುಗಳ ನಡೆಸಿದ ಪರಿಶೀಲನೆಯ ಆಧಾರದ ಮೇಲೆ ಸಿದ್ಧವಾಗಿದೆ ಎಂದು ತಿಳಿಸಿದೆ.
ಶಾಸಕರ ಭವನದಲ್ಲಿ ನಡೆದ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಎದ್ದೇಳು ಕರ್ನಾಟಕದ ಪದಾಧಿಕಾರಿ ನೂರ್ ಶ್ರೀಧರ್, ಕ್ಷೇತ್ರ ಮಟ್ಟದ ಪರಿಶೀಲನೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಅಳಿಸಿರುವುದು ಕಂಡುಬಂದಿದೆ ಎಂದು ಹೇಳಿದರು.
ಹಲವು ಮತದಾರರನ್ನು ತಪ್ಪಾಗಿ ಸ್ಥಳಾಂತರಗೊಂಡವರು, ಗೈರುಹಾಜರಾದವರು ಅಥವಾ ಮೃತಪಟ್ಟವರು ಎಂದು ವರ್ಗೀಕರಿಸಲಾಗಿದೆ. ಪ್ರತಿಯೊಬ್ಬ ಮತದಾರನನ್ನು 2002ರ ಮತದಾರರ ಪಟ್ಟಿಗೆ ಜೋಡಿಸುವ ಅಗತ್ಯವೇನು ಎಂಬುದರ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ.
ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಗೋಪಾಲಗೌಡ ಅವರು ಎಸ್‌ಐಆರ್ ಪ್ರಕ್ರಿಯೆಗೆ ಇರುವ ಕಾನೂನು ಆಧಾರದ ಬಗ್ಗೆ ಪ್ರಶ್ನೆ ಎತ್ತಿದ್ದು, ಮತದಾರರ ಕೆಲವು ವರ್ಗಗಳನ್ನು ಪಟ್ಟಿಯಿಂದ ಹೊರಗಿಡಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್, ನಿರ್ದೇಶಕ ಬಿ. ಸುರೇಶ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್. ಮುಕುಂದರಾಜ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು, ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಹಾಗೂ ಪಟ್ಟಿಯಿಂದ ಅಳಿಸಲಾದ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಚುನಾವಣಾ ಆಯುಕ್ತರ ನೇಮಕಕ್ಕೆ ಸಾಂವಿಧಾನಿಕ ವ್ಯವಸ್ಥೆ ರೂಪಿಸಬೇಕು ಮತ್ತು ವೈಜ್ಞಾನಿಕ ಹಾಗೂ ಮತದಾರ ಸ್ನೇಹಿ ರೀತಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕ್ರಮ ಜಾರಿಗೆ ಬರಬೇಕು ಎಂದು ಆಗ್ರಹಿಸಿದೆ.
ಎಸ್‌ಐಆರ್ ಪ್ರಕ್ರಿಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಇದೇ ವೇಳೆ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮರುಮತದಾನ ನಡೆಸಬೇಕು ಎಂಬ ಬೇಡಿಕೆಯನ್ನೂ ಒಕ್ಕೂಟ ಮುಂದಿಟ್ಟಿದೆ.
ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಮತ್ತು ಎಸ್‌ಐಆರ್ ಮೂಲಕ ಸಿದ್ಧಪಡಿಸಲಾದ ಮತದಾರರ ಪಟ್ಟಿ ಹಾಗೂ ಪ್ರಕ್ರಿಯೆಯನ್ನು ತಿರಸ್ಕರಿಸುವ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿದೆ.
ತಪ್ಪಾಗಿ ಮತದಾರರ ಪಟ್ಟಿಯಿಂದ ಅಳಿಸಲಾಗಿರುವವರನ್ನು ಗುರುತಿಸಲು ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು ಹಾಗೂ ಅವರ ಹೆಸರುಗಳನ್ನು ಮರುಸೇರ್ಪಡೆಗೊಳಿಸಲು ವಿಶೇಷ ಅಭಿಯಾನ ನಡೆಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಅರ್ಹ ಮತದಾರರ ಹೆಸರುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸುವವರೆಗೆ ಎಸ್‌ಐಆರ್ ಮೂಲಕ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಯಾವುದೇ ಚುನಾವಣೆಗೆ ಬಳಸಬಾರದು ಎಂದು ಕೂಡ ಒತ್ತಾಯಿಸಿದೆ.