ಬೆಂಗಳೂರು: ಜಮೀನು ಖರೀದಿ ಮಾಡಿರೋದು ಪ್ರೂವ್ ಮಾಡಿದ್ರೆ ಪಬ್ಲಿಕ್‌ನಲ್ಲಿ ನೇಣು ಹಾಕಿಕೊಳ್ತೀನಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಡಿಕೆ ಶಿವಕುಮಾರ್ ಗೆ ಸವಾಲು ಹಾಕಿದ್ದಾರೆ.
ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ತೋಟದ ಗುಡ್ಡಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆಜಿ ಶ್ರೀಕಂಠಪುರ, ಗಂಗನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಹೆಚ್‌ಡಿಕೆ, ಸಿಎಂ ಡಿಕೆ ಶಿವಕುಮಾರ್ ಮೇಲೆ ನನಗೆ ಅಸೂಯೆ ಇಲ್ಲ. ಇನ್ನು 10 ವರ್ಷ ಅವರೇ ಸಿಎಂ ಆಗಿರಲಿ, ಬೇಡ ಅನ್ನಲ್ಲ. ಆದರೆ ರೈತರ ಜೊತೆ ಯಾಕೆ ಚೆಲ್ಲಾಟ ಆಡ್ತಾ ಇದ್ದೀರಾ? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಎಲ್ಲಿಂದ ಬಂದ್ರು ಅಂತಾರೆ, ನಾವೇನು ಪಾಕಿಸ್ತಾನದಿಂದ ಬಂದಿದ್ದೀವಾ? ನಾವೂ ಕರ್ನಾಟಕದವರೇ ಎಂದು ಕಿಡಿಕಾರಿದರು.
ರಾಜಕೀಯಕ್ಕೆ ಬರುವ ಮುನ್ನವೇ ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿ ಮಾಡಿದ್ದೇನೆ. ನಾನು ನನ್ನ ಸಹೋದರರು, ನನ್ನ ಕುಟುಂಬದವರು ಕಾನೂನುಬಾಹಿರವಾಗಿ ಒಂದು ಇಂಚು ಭೂಮಿ ಪಡೆದಿರುವುದನ್ನು ನೀವು ಪ್ರೂವ್ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ. ಇವರ ರೀತಿ ಬೆದರಿಸಿ, ಕಾನೂನುಬಾಹಿರವಾಗಿ ಜಮೀನು ಖರೀದಿ ಮಾಡಿರೊದು ಪ್ರೂವ್ ಮಾಡಿದ್ರೆ ಪಬ್ಲಿಕ್ ನಲ್ಲಿ ನೇಣು ಹಾಕಿಕೊಳ್ತೀನಿ ಎಂದು ಸವಾಲು ಹಾಕಿದರು. ನಾವು ಸ್ವಾಭಿಮಾನದಲ್ಲಿ ಬದುಕಿದ್ದೇವೆ. ಈ ಪ್ರಾಜೆಕ್ಟ್ ಹೆಸರಿನಲ್ಲಿ ಸಿಎಂ ಎಷ್ಟು ಎಕರೆ ಜಮೀನು ಲೂಟಿ ಮಾಡಿದ್ದಾರೆ ಗೊತ್ತಾ? ಎಂದು ಗುಡುಗಿದರು.
ಬ್ಲ್ಯಾಕ್‌ಮೇಲ್ ಮಾಡ್ತಿದ್ದೀನಿ ಅಂತ ಸಿಎಂ ಹೇಳ್ತಾರೆ. ನಾನು ಬ್ಲ್ಯಾಕ್‌ಮೇಲ್ ಮಾಡಿದ್ರೆ ಯಾಕೆ ನನ್ನ ಮೇಲೆ ಕೇಸ್ ಹಾಕಿಲ್ಲ. ಯಾರೋ ಒಬ್ಬ 3ಬಿ ಅಂತಾನೆ. ನೈಸ್‌ನಲ್ಲಿ ನೀವು ಏನೇನು ಮಾಡಿದ್ದೀರಾ ಅನ್ನೋ ದಾಖಲಾತಿ ನನ್ನ ಬಳಿ ಇದೆ. ಪಶ್ಚಿಮ ಬಂಗಾಳ ರೀತಿ ನಿಮ್ಮ ಭೂಮಿ ವಾಪಸ್ ಬರಬೇಕು. ನಮ್ಮ ಮೇಲೆ ಯಾವ ತನಿಖೆ ಬೇಕಾದ್ರು ಮಾಡಿ. ದೇವೇಗೌಡರು ಪ್ರಧಾನಿ ಆದಾಗಿಂದ ಇಲ್ಲಿವರೆಗೂ ನಮ್ಮ ಆಸ್ತಿ ಬಗ್ಗೆಯೂ ತನಿಖೆ ಮಾಡಿ. ನಮ್ಮ ಆಸ್ತಿ, ನಮ್ಮ ಕುಟುಂಬದ ಬಗ್ಗೆ ಯಾವುದೇ ತನಿಖೆ ಮಾಡಿ ಎಂದು ಸವಾಲು ಹಾಕಿದರು.
ಖೇಣಿ ಬಂಧನ ಆಗಬೇಕು. ಸಿದ್ದಗಂಗಾ ಮಠದ ಆಸ್ತಿ ಹೊಡೆದುಕೊಂಡು ಕೂತಿದ್ದಾರೆ. ಇಂತಹ ಸಿಎಂಗೆ ಸಹಕಾರ ಕೊಡ್ತೀರಾ? ಎಂದು ಜನರನ್ನು ಕೇಳಿದ ಕುಮಾರಸ್ವಾಮಿ, ನನಗೆ ರಾಜಕೀಯ ಬೇಕಿಲ್ಲ. ರೈತರ ಭೂಮಿ ವಾಪಸ್ ಕೊಡಿಸೋದು ನನ್ನ ಹೋರಾಟ. ಜನರು ಧ್ವನಿ ಎತ್ತಬೇಕು. ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆಂಧ್ರಪ್ರದೇಶದ ಮಹೇಶ್ ರೆಡ್ಡಿ ಜೊತೆ ಸಿಎಂ ಡಿಕೆ ಶಿವಕುಮಾರ್ ಒಟ್ಟಾಗಿ ಭೂಮಿ ಹೊಡೆಯೋಕೆ ನಿಂತಿದ್ದಾರೆ. ಜನರಿಗೆ ತಲೆ ಕೆಡಿಸುವ ಕೆಲಸ ಮಾಡ್ತಾ ಇದ್ದಾರೆ. ಯಾರನ್ನು ಬೇಕಾದ್ರು ಕೊಂಡು ಕೊಳ್ತೀವಿ ಅಂತ ಇದ್ದಾರೆ. ನಿಮ್ಮ ಪರ ನಾನು ಇರ್ತೀನಿ ಎಂದು ರೈತರಿಗೆ ಅಭಯ ನೀಡಿದರು.
ಬಳಿಕ ನೈಸ್ ಟೋಲ್ ಪ್ಲಾಜಾ ಬಳಿ ದೊಡ್ಡತೊಗೂರು, ಚಿಕ್ಕತೊಗೂರು, ಎಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ, ಬೇಗೂರು ರೈತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದರು. ನಂತರ ಮಾತನಾಡಿದ ಹೆಚ್‌ಡಿಕೆ, ದೇವೇಗೌಡರು ಓಡಾಡೋ ಪರಿಸ್ಥಿತಿ ಇಲ್ಲ. ವ್ಹೀಲ್‌ಚೇರ್‌ನಲ್ಲಿ ರೈತರ ಪರ ನಾನು ಬರ್ತೀನಿ ಅಂತಾರೆ. ರೈತರ ಜಮೀನು ವಾಪಸ್ ಕೊಡಿಸೋದು ನನ್ನ ಜವಾಬ್ದಾರಿ. ನೀವು ಒಟ್ಟಾಗಿ ಇರಬೇಕು ಎಂದು ಕರೆ ನೀಡಿದರು.
ನನ್ನ ಮೇಲೆ ಎಷ್ಟು ಒತ್ತಡ ಇದೆ. ಈ ಹೋರಾಟ ಕೈ ಬಿಡಿ ಅಂತ ಬರ್ತಿದೆ. ಚುನಾವಣೆ ಖರ್ಚು ಹಿಡಿದು ಎಲ್ಲಾ ಕೊಡ್ತೀವಿ ಅಂತ ಬರ್ತಿದೆ. ನಾನು ಒಬ್ಬ ಸುಮ್ಮನೆ ಇದ್ದರೆ ಜಮೀನು ಲೂಟಿ ಹೊಡೆಯುತ್ತಾರೆ. ನಿಮ್ಮ ಊರಿನ ಜನರಿಗೂ ನೀವು ಇದರ ಬಗ್ಗೆ ಹೇಳಬೇಕು. ಇದರ ವಿರುದ್ಧ ಜನಾಂದೋಲನ ಆಗಬೇಕು. ಮೊದಲು ಶಾಂತಿಯುತವಾಗಿ ಹೋರಾಟ ಮಾಡೋಣ. ಇದನ್ನ ವೀಕ್‌ನೆಸ್ ಅಂದರೆ ದೊಡ್ಡ ಹೋರಾಟ ಮಾಡೋಣ. ನಾನೇ ಮುಂದೆ ನಿಲ್ತೀನಿ. ನಿಮ್ಮನ್ನ ಮುಂದೆ ಬಿಡಲ್ಲ. ಮುಂದೆ ಮೀಟಿಂಗ್ ಕರೆಯುತ್ತೇನೆ. ಯಾವ ರೀತಿ ಮುಂದಿನ ಹೋರಾಟ ಅಂತ ಸಿದ್ಧ ಮಾಡ್ತೀನಿ ಎಂದರು.