ಬೆಂಗಳೂರು: ಅಡುಗೆ ಮಾಡುತ್ತಿದ್ದಾಗ LPG ಸಿಲಿಂಡರ್‌ನಿಂದ ಸೋರಿಕೆಯಾದ ಅನಿಲ ಬೆಂಕಿಗೆ ತಗುಲಿದ ಪರಿಣಾಮ 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ನಾಯಂಡಹಳ್ಳಿಯ ವಿನಾಯಕ ಲೇಔಟ್‌ನ ಬಾಡಿಗೆ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ರಾಯಚೂರು ಮೂಲದ ಕುಟುಂಬವೊಂದು ಇಲ್ಲಿ ವಾಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಕರಿಲಿಂಗಪ್ಪ (40), ಅವರ ಪತ್ನಿ ಲಕ್ಷ್ಮಮ್ಮ (42), ಚೈತ್ರಾ (11), ಬಸವ (9) ಹಾಗೂ 3 ವರ್ಷದ ಅವಳಿ ಮಕ್ಕಳಾದ ಗೀತಾ ಮತ್ತು ಗಿರಿಜಾ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಕುಟುಂಬದ ಸದಸ್ಯರು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ LPG ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರುವ ಶಂಕೆ ಇದೆ.
ಸೋರಿಕೆಯಾದ ಅನಿಲ ಬೆಂಕಿಗೆ ತಗುಲಿದ ಪರಿಣಾಮ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ಆರು ಮಂದಿಗೂ ಸುಟ್ಟ ಗಾಯಗಳಾಗಿವೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.