ಸಿಇಒ ಅನ್ಬುಕುಮಾರ್  
ರಾಜ್ಯ

ಫಾರ್ಮ್-7 ಆಕ್ಷೇಪಣೆ ಆಧರಿಸಿ ಯಾವುದೇ ಮತದಾರರ ಹೆಸರು ಅಳಿಸಿಹಾಕಿಲ್ಲ; ಅದಕ್ಕೆ ಕಾನೂನುಬದ್ಧ ಪ್ರಕ್ರಿಯೆ ಇದೆ: CEO ಅನ್ಬುಕುಮಾರ್; Video

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನ್ಬುಕುಮಾರ್, ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂಬ ಕಾರಣಕ್ಕೆ ಇದುವರೆಗೆ ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಇದುವರೆಗೆ 40 ಲಕ್ಷಕ್ಕೂ ಅಧಿಕ ಮತದಾರರಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ಅಕ್ಟೋಬರ್ 4ರವರೆಗೆ 91,278 ಫಾರ್ಮ್-7 ಅರ್ಜಿಗಳು ಸ್ವೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸೋಮವಾರ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಮ್ಯಾಪಿಂಗ್ ಆಗದಿರುವುದು / ಹೊಂದಾಣಿಕೆ ಪತ್ತೆಯಾಗದಿರುವುದು ಮತ್ತು ದೋಷಗಳು ವರ್ಗದಲ್ಲಿ ಬರುವ ಮತದಾರರಿಗೆ ನೊಟೀಸ್ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನ್ಬುಕುಮಾರ್, ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂಬ ಕಾರಣಕ್ಕೆ ಇದುವರೆಗೆ ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಈ ಬಗ್ಗೆ ವಿಚಾರಣೆ ನಡೆಸಲಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಫಾರ್ಮ್-7 ಮೂಲಕ ಪಟ್ಟಿಯಿಂದ ಹೆಸರು ತೆಗೆದುಹಾಕುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರಡು ಮತದಾರರ ಪಟ್ಟಿಯಿಂದ ಯಾವುದೇ ಹೆಸರನ್ನು ತೆಗೆದುಹಾಕಬೇಕಾದರೆ ERO ವಿಚಾರಣೆಗೆ ನೋಟಿಸ್ ನೀಡಬೇಕು. ಆಕ್ಷೇಪಣೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಬಂಧಪಟ್ಟ ಮತದಾರರನ್ನು ವಿಚಾರಣೆಗೆ ಕರೆಯಬೇಕು. ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಹೆಸರು ತೆಗೆದುಹಾಕಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಧಿಕಾರಿ ನಿರ್ಧಾರ ಕೈಗೊಳ್ಳಬಹುದು ಎಂದರು.

ಇದು ನೋಂದಣಿ ಆಫ್ ಎಲೆಕ್ಟರ್ಸ್ ರೂಲ್ಸ್, 1960ರ ನಿಯಮ 16ರಿಂದ 20ರವರೆಗೆ ಉಲ್ಲೇಖಿಸಿರುವ ಪ್ರಕ್ರಿಯೆಯಾಗಿದೆ. ಹೀಗಾಗಿ, ಇದುವರೆಗೆ ಒಬ್ಬೇ ಒಬ್ಬ ಮತದಾರರ ಹೆಸರನ್ನೂ ತೆಗೆದುಹಾಕಲಾಗಿಲ್ಲ. ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ EROಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ವಿಚಾರಣೆಯ ಬಳಿಕ ಕ್ರಮ ಅಗತ್ಯ ಎಂದು ಅಧಿಕಾರಿಗಳಿಗೆ ಮನವರಿಕೆಯಾದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಇದುವರೆಗೆ ಈ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

ಜೂನ್ 16ರಿಂದ ಅಕ್ಟೋಬರ್ 4ರವರೆಗೆ ಒಟ್ಟು 91,278 ಫಾರ್ಮ್-7 ಅರ್ಜಿಗಳು ಸ್ವೀಕರಿಸಲಾಗಿದ್ದು, ಪ್ರಸ್ತಾವಿತ ಹೆಸರು ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸುವ ಸಂಬಂಧ ಯಾವುದೇ ಅರ್ಜಿ ಬಂದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ಹೆಸರು ಅಳಿಸುವ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಸಲು ಫಾರ್ಮ್-7 ನ್ನು ಬಳಸಲಾಗುತ್ತದೆ.

ಅಕ್ಟೋಬರ್ 5ರ ವೇಳೆಗೆ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 4,50,29,916 ಮತದಾರರಿದ್ದು, ಈ ಪೈಕಿ 2.23 ಕೋಟಿ ಪುರುಷರು, 2.26 ಕೋಟಿ ಮಹಿಳೆಯರು ಹಾಗೂ 2,863 ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ಗಳನ್ನು ಸೃಷ್ಟಿಸಲಾಗಿದೆ. ಈ ಪೈಕಿ 43,55,818 ನೋಟಿಸ್‌ಗಳನ್ನು ವಿತರಿಸಲಾಗಿದ್ದು, ಇನ್ನೂ 26,495 ನೋಟಿಸ್‌ಗಳನ್ನು ವಿತರಿಸಬೇಕಿದೆ. ಒಟ್ಟಾರೆ ಶೇ.99.40ರಷ್ಟು ನೋಟಿಸ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಲಾಗಿದೆ.

ನೊಟೀಸ್ ಗಳಿಗೆ ಸಂಬಂಧಿಸಿದ ವಿಚಾರಣೆಯ ಪೈಕಿ 36,89,063 (ಶೇ.84.69) ವಿಚಾರಣೆಗಳು ಪೂರ್ಣಗೊಂಡಿದ್ದು, 6,66,755 ವಿಚಾರಣೆಗಳು ಬಾಕಿ ಉಳಿದಿವೆ.

ಮುಖ್ಯ ಚುನಾವಣಾಧಿಕಾರಿ ಕಚೇರಿ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ, ಜೂನ್ 16ರಿಂದ ಅಕ್ಟೋಬರ್ 4ರವರೆಗೆ 9,10,732 ಫಾರ್ಮ್-6, 4,677 ಫಾರ್ಮ್-6ಎ, 91,278 ಫಾರ್ಮ್-7 ಹಾಗೂ 11,98,484 ಫಾರ್ಮ್-8 ಅರ್ಜಿಗಳು ಸ್ವೀಕರಿಸಲಾಗಿದೆ. ಒಟ್ಟು 22,05,171 ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ.

ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಇದುವರೆಗೆ ಸ್ವೀಕರಿಸಲಾದ ಫಾರ್ಮ್-7 ಅರ್ಜಿಗಳ ಪೈಕಿ ಅತಿ ಹೆಚ್ಚು ಅರ್ಜಿಗಳು ಬೀದರ್‌ನಿಂದ (5,953) ಬಂದಿವೆ. ನಂತರ ಶಿವಮೊಗ್ಗ (5,936) ಮತ್ತು ದಕ್ಷಿಣ ಕನ್ನಡ (5,534) ಜಿಲ್ಲೆಗಳಿವೆ.

ಬೆಂಗಳೂರು ನಗರದಿಂದ 3,365, ಬಿಬಿಎಂಪಿ ಉತ್ತರದಿಂದ 1,842, ಬಿಬಿಎಂಪಿ ದಕ್ಷಿಣದಿಂದ 1,707, ಬಿಬಿಎಂಪಿ ಕೇಂದ್ರದಿಂದ 1,659, ಬೆಂಗಳೂರು ಗ್ರಾಮಾಂತರದಿಂದ 1,485, ಬೆಳಗಾವಿಯಿಂದ 4,002, ಮೈಸೂರಿನಿಂದ 3,090, ಕಲಬುರಗಿಯಿಂದ 1,067, ತುಮಕೂರಿನಿಂದ 4,568 ಹಾಗೂ ವಿಜಯಪುರದಿಂದ 3,808 ಫಾರ್ಮ್-7 ಅರ್ಜಿಗಳು ಬಂದಿವೆ.

ಅಂತಿಮ ವಿಚಾರಣೆಯನ್ನು ಅಕ್ಟೋಬರ್ 12ರಂದು ನಡೆಸಲಾಗುವುದು. ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಹಂತಕ್ಕೆ ಅಕ್ಟೋಬರ್ 22 ಕೊನೆಯ ದಿನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ‘ನೋ ಮ್ಯಾಪಿಂಗ್’ ಮತ್ತು ‘ಅನಾಮಲೀಸ್’ ವರ್ಗದಡಿ ನೊಟೀಸ್ ಜಾರಿಗೊಳಿಸಲಾದ ವ್ಯಕ್ತಿಗಳ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಫಾರ್ಮ್-6, ಫಾರ್ಮ್-6ಎ, ಫಾರ್ಮ್-7 ಹಾಗೂ ಫಾರ್ಮ್-8ರಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ಅಥವಾ ಘೋಷಣೆಗಳನ್ನು ಲಿಖಿತ ರೂಪದಲ್ಲಿ ನೀಡಿರುವ ಅರ್ಜಿದಾರರ ವಿರುದ್ಧ, ನೋಂದಣಿ ಆಫ್ ಎಲೆಕ್ಟರ್ಸ್ ರೂಲ್ಸ್, 1960ರ ನಿಯಮ 20ರಡಿ ವಿಚಾರಣೆ ನಡೆಸಿದ ಬಳಿಕ, ಪ್ರಜಾಪ್ರತಿನಿಧಿ ಕಾಯ್ದೆ, 1950ರ ಸೆಕ್ಷನ್ 31ರ ಅನ್ವಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ EROಗಳಿಗೆ ಅನ್ಬುಕುಮಾರ್ ನಿರ್ದೇಶನ ನೀಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಕರಡು ಮತದಾರರ ಪಟ್ಟಿಯಲ್ಲಿ ಈ ಹಿಂದೆ ನೋಂದಾಯಿಸಿಕೊಂಡಿದ್ದ ಭಾಗದಲ್ಲೇ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂಬ ಕುರಿತು ಹಲವು ಪ್ರಶ್ನೆಗಳು ಬಂದಿವೆ ಎಂದು ಕಚೇರಿ ತಿಳಿಸಿದೆ.

ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ (ರ್ಯಾಷನಲೈಸೇಶನ್) ಮತ್ತು ಮತದಾರರ ಮರುಕ್ರಮಾಂಕದಿಂದಾಗಿ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಬದಲಾಗಿರಬಹುದು. ಹೀಗಾಗಿ ಹಿಂದಿನ ಭಾಗಗಳಲ್ಲಿ ತಮ್ಮ ಹೆಸರು ಪತ್ತೆಯಾಗದ ಮತದಾರರು ತಮ್ಮ EPIC ಸಂಖ್ಯೆಯನ್ನು ಬಳಸಿ voters.eci.gov.in ವೆಬ್‌ಸೈಟ್‌ನಲ್ಲಿ ಅಥವಾ ECINET ಮೊಬೈಲ್ ಅಪ್ಲಿಕೇಶನ್ ಮೂಲಕ ಹೆಸರು ಹುಡುಕುವಂತೆ” ಕಚೇರಿ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಚುನಾವಣೆ: BJP ಅಭ್ಯರ್ಥಿಗಳ ಪಟ್ಟಿ ಪ್ರಕಟ; ಕೇಂದ್ರ ಸಚಿವ ಹರ್ದೀಪ್ ಪುರಿಗೆ ಕೊಕ್!

'ನೈಸ್‌'ಗೆ ಸುಪ್ರೀಂ ಕೋರ್ಟ್ ಶಾಕ್; ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಕಾರ!

ಕುನೋದಲ್ಲಿ ಮತ್ತೊಂದು ಗುಡ್‌ನ್ಯೂಸ್; ಭಾರತ ಮೂಲದ ಚೀತಾ KJP21ಗೆ 5 ಮರಿಗಳ ಜನನ-video

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ: ಮೀಸಲು ಸ್ಪರ್ಧಿಯಾಗಿದ್ದ ನನಗೆ ಓಡಲು ಅವಕಾಶ ಸಿಕ್ಕಿದೆ ರೋಚಕ - ಕನ್ನಡತಿ ಸ್ನೇಹಾ ಗೌಡ!

'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video