ಬೆಂಗಳೂರು: ಸೋಮವಾರ ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನಲ್ಲಿ 17.3 ಮಿ.ಮೀ. ಮಳೆಯಾಗಿದ್ದು, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಗಳು ಹಾಗೂ ಮರದ ಕೊಂಬೆಗಳು ಧರೆಗುರುಳಿವೆ. ಇದಲ್ಲದೆ, ಮಳೆಯ ನೀರು ಸರಾಗವಾಗಿ ಹರಿದು ಹೋಗದ ಕಾರಣ ನಗರದ ಹಲವು ಭಾಗಗಳ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೆಣ್ಣೂರು, ದೊಡ್ಡಾನೆಕುಂದಿ, ಓಕಳೀಪುರಂ, ಐಟಿಪಿಎಲ್, ಕಸ್ತೂರಿನಗರ, ಇಂದಿರಾನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು. ಶಿವಾನಂದ ವೃತ್ತ ಹಾಗೂ ಹೂಡಿ ಅಂಡರ್‌ಪಾಸ್‌ಗಳಲ್ಲೂ ನೀರು ನಿಂತಿತ್ತು.
ದೊಡ್ಡಾನೆಕುಂದಿಯ ಸಂಹಿತಾ ಸೆರಿನಿಟಿ ಅಪಾರ್ಟ್‌ಮೆಂಟ್ ಸಮೀಪದ ರಸ್ತೆಯಲ್ಲಿ ನೀರು ನಿಂತಿತ್ತು. ವಿಮಾನ ನಿಲ್ದಾಣದ ಕಡೆಗೆ ಸಾಗುವ ಹೆಬ್ಬಾಳ ಮೇಲ್ಸೇತುವೆಯ ಕೆಳ ಇಳಿಜಾರು, ಮಹದೇವಪುರದ ಕಡೆಗೆ ಸಾಗುವ ರೇನ್‌ಬೋ ಸರ್ವಿಸ್ ರಸ್ತೆ, ಹೆಬ್ಬಾಳದ ಕಡೆಗಿನ ಕಸ್ತೂರಿನಗರ ಇಳಿಜಾರು, ಹೈಗ್ರೌಂಡ್ ಜಂಕ್ಷನ್ ಕಡೆಗೆ ಸಾಗುವ ವಿಂಡ್ಸರ್ ಮ್ಯಾನರ್ ಸೇತುವೆ ಹಾಗೂ ಯಲಹಂಕ ಸಮೀಪದ ಕೊಡಿಗೇಹಳ್ಳಿ ರಸ್ತೆಗಳಲ್ಲೂ ನೀರು ತುಂಬಿತ್ತು. ಮಳೆ ನಿಂತ ಬಳಿಕ ನೀರು ಇಳಿದರೂ, ಸಂಚಾರದ ಮೇಲೆ ದೀರ್ಘಕಾಲ ಪರಿಣಾಮ ಬೀರಿತು.
ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತ ಲೋಕಾಂಡೆ ಸ್ನೇಹಲ್ ಸುಧಾಕರ್ ಮಾತನಾಡಿ, ಈ ಪ್ರದೇಶಗಳಲ್ಲಿ ಪದೇಪದೆ ನೀರು ನಿಲ್ಲುತ್ತಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗೆದ್ದಲಹಳ್ಳಿಯಲ್ಲಿ ಕೈಗೊಂಡ ವೆಂಟ್ ಕಾಮಗಾರಿಯಿಂದ ಸಾಯಿ ಲೇಔಟ್ ಮತ್ತು ವಡ್ಡರಪಾಳ್ಯದಲ್ಲಿ ಜಲಾವೃತ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೂಡಿ ಮತ್ತು ಪಣತ್ತೂರು ಅಂಡರ್‌ಪಾಸ್‌ಗಳಿಗೆ ಸಂಬಂಧಿಸಿದ ಕಾಮಗಾರಿಗಳ ಮೂಲಕ ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರೈಲ್ವೆ ಇಲಾಖೆಯೊಂದಿಗೆ ಪಾಲಿಕೆ ನಿರಂತರವಾಗಿ ಸಮನ್ವಯ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ನಗರ ಪಾಲಿಕೆ ಅಧಿಕಾರಿಗಳ ಮಾತನಾಡಿ, ಇಂದಿರಾನಗರ ಮತ್ತು ಎಚ್‌ಎಎಲ್ 2ನೇ ಹಂತದಲ್ಲಿ ಕೆಲವು ಮರಗಳು ಹಾಗೂ ಕೊಂಬೆಗಳು ಬಿದ್ದಿದ್ದು, ಕಾರ್ಯಪಡೆಗಳು ತಕ್ಷಣವೇ ತೆರವುಗೊಳಿಸಿವೆ ಎಂದು ತಿಳಿಸಿದ್ದಾರೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆ ಮಂಗಳವಾರವೂ ಗಾಳಿಯ ಪರಿಚಲನೆಯಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಸೋಮವಾರ ಬೆಂಗಳೂರಿನ ಜಿಕೆವಿಕೆ 52.5 ಮಿ.ಮೀ. ಮಳೆ ದಾಖಲಿಸಿದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 42.5 ಮಿ.ಮೀ. ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 5.3 ಮಿ.ಮೀ. ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.8 ಮಿ.ಮೀ. ಮಳೆ ದಾಖಲಾಗಿದೆ.
ಕಾರ್ತಿಕ್‌ನಗರ, ಮಹದೇವಪುರ, 17ನೇ ಮುಖ್ಯರಸ್ತೆ, ದೂಪನಹಳ್ಳಿ, ಹಳೆಯ ಉದಯ ಟಿವಿ ಜಂಕ್ಷನ್, ಜಯಮಹಲ್, ಪಿಜಿ ಹಳ್ಳಿ ಬಸ್ ನಿಲ್ದಾಣ, ಅರಮನೆ ಕ್ರಾಸ್, ಸಿಎಲ್ ಕ್ರಾಸ್ ಕ್ಯಾಂಟೋನ್ಮೆಂಟ್, ಈಸ್ಟ್ ರಸ್ತೆ, ಸಿಬಿಐ ಜಂಕ್ಷನ್ ಮೇಲ್ಸೇತುವೆ, ವಿಮಾನ ನಿಲ್ದಾಣ ರಸ್ತೆ, ಕೋರಮಂಗಲ ಒಳವರ್ತುಲ ರಸ್ತೆ, ಕುವೆಂಪು ವೃತ್ತ, ಹೆಬ್ಬಾಳ ವೃತ್ತ, ಬಿ. ನಾರಾಯಣಪುರ ಹಾಗೂ ನಾಗವಾರದ ಎಚ್‌ಬಿಆರ್ ಲೇಔಟ್ ಮುಖ್ಯರಸ್ತೆ ಸೇರಿದಂತೆ ಹಲವು ಕಡೆ ಸಂಚಾರದ ಮೇಲೆ ಮಳೆಯಿಂದ ಪರಿಣಾಮ ಬೀರಿತು.