ಡಾ. ಅಜಯ್ ಧರ್ಮಸಿಂಗ್ 
ರಾಜ್ಯ

ತೆರೆದ ಕೊಳವೆಬಾವಿ ಮುಕ್ತ ಕರ್ನಾಟಕದ ಗುರಿ; ರಾಜ್ಯವ್ಯಾಪಿ ಸುರಕ್ಷತಾ ಅಭಿಯಾನ: ಸಚಿವ ಡಾ. ಅಜಯ್ ಧರ್ಮಸಿಂಗ್

ಅಭಿಯಾನದ ರೂಪುರೇಷೆ, ಅನುಷ್ಠಾನ ವಿಧಾನ, ಇಲಾಖಾವಾರು ಮಾಹಿತಿ ಸಂಗ್ರಹ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ಬೆಂಗಳೂರು: ವಿಫಲ ಹಾಗೂ ನಿರುಪಯುಕ್ತ ತೆರೆದ ಕೊಳವೆಬಾವಿಗಳಿಂದ ಮಕ್ಕಳು ಅಪಘಾತಕ್ಕೀಡಾಗುವ ಹಾಗೂ ಜಾನುವಾರುಗಳಿಗೆ ಅಪಾಯ ಉಂಟಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ರಾಜ್ಯಾದ್ಯಂತ ‘ಕೊಳವೆಬಾವಿ ಸುರಕ್ಷತಾ ಅಭಿಯಾನ’ ಆರಂಭಿಸಲು ಮುಂದಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.

ಅಭಿಯಾನದ ರೂಪುರೇಷೆ, ಅನುಷ್ಠಾನ ವಿಧಾನ, ಇಲಾಖಾವಾರು ಮಾಹಿತಿ ಸಂಗ್ರಹ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯಕ್ಕೆ ಸಚಿವರು ಸೂಚನೆ ನೀಡಿದ್ದಾರೆ.

ಕೊಳವೆಬಾವಿ ಕೊರೆಯುವ ಸಂದರ್ಭದಲ್ಲಿ ನೀರು ಸಿಗದೆ ವಿಫಲವಾದ ಅಥವಾ ಬಳಕೆಗೆ ಯೋಗ್ಯವಾಗದ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವುದು ಕಡ್ಡಾಯವಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಕುರಿತು ಅಗತ್ಯ ಸುರಕ್ಷತಾ ಕ್ರಮಗಳು ಹಾಗೂ ಮೇಲ್ವಿಚಾರಣಾ ವ್ಯವಸ್ಥೆಗೆ ಕಾನೂನುಬದ್ಧ ಅವಕಾಶ ಕಲ್ಪಿಸಲಾಗಿದೆ. ಆದರೂ ದಾಖಲೆಗಳಿಗೆ ಬಾರದ ಅಥವಾ ಸಮರ್ಪಕವಾಗಿ ಮುಚ್ಚದೇ ಬಿಟ್ಟಿರುವ ಕೊಳವೆಬಾವಿಗಳು ಇರುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಲಾಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

“ಒಂದು ತೆರೆದ ಕೊಳವೆಬಾವಿಯೂ ಮಗುವಿನ ಜೀವಕ್ಕೆ ಅಪಾಯವಾಗಬಾರದು. ಮೊದಲ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆಯೇ ಕೊರೆಸಿರುವ ಎಲ್ಲ ವಿಫಲ ಮತ್ತು ನಿರುಪಯುಕ್ತ ಕೊಳವೆಬಾವಿಗಳನ್ನು ಗುರುತಿಸಿ, ಅವು ಸುರಕ್ಷಿತವಾಗಿ ಮುಚ್ಚಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಅಗತ್ಯವಿರುವ ಕಡೆ ತಕ್ಷಣ ಮುಚ್ಚುವ ಕ್ರಮ ಕೈಗೊಳ್ಳಲಾಗುವುದು,” ಎಂದು ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ ಇತರೆ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿರುವ ವಿಫಲ ಅಥವಾ ತೆರೆದ ಕೊಳವೆಬಾವಿಗಳ ಮಾಹಿತಿಯನ್ನು ಸಂಗ್ರಹಿಸಿ, ಸಂಬಂಧಿಸಿದ ಇಲಾಖೆಗಳ ಸಮನ್ವಯದಲ್ಲಿ ಸುರಕ್ಷಿತ ಮುಚ್ಚುವಿಕೆಗೆ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಸಾರ್ವಜನಿಕರಿಂದ ಅಪಾಯಕಾರಿ ತೆರೆದ ಕೊಳವೆಬಾವಿಗಳ ಮಾಹಿತಿ ಪಡೆಯಲು ವಾಟ್ಸಾಪ್ ಸಂಖ್ಯೆ, ವೆಬ್ ಆಧಾರಿತ ವರದಿ ವ್ಯವಸ್ಥೆ, ಸ್ಥಳದ ಜಿಯೋ-ಟ್ಯಾಗ್ಡ್ ಚಿತ್ರಗಳು ಹಾಗೂ ದೂರುದಿಂದ ಮುಚ್ಚುವಿಕೆಯವರೆಗೆ ಟ್ರ್ಯಾಕಿಂಗ್ ವ್ಯವಸ್ಥೆ ರೂಪಿಸುವ ಸಾಧ್ಯತೆಯನ್ನು ಪರಿಶೀಲಿಸಿ ಕಾರ್ಯಯೋಜನೆಯಲ್ಲಿ ಸೇರಿಸುವಂತೆ ಸಚಿವರು ಸೂಚಿಸಿದ್ದಾರೆ.

“ನಮ್ಮ ಗುರಿ ಕೇವಲ ಇಲಾಖೆಯ ದಾಖಲೆಗಳಲ್ಲಿರುವ ಕೊಳವೆಬಾವಿಗಳನ್ನು ಮುಚ್ಚುವುದಲ್ಲ. ಸರ್ಕಾರದ ಗಮನಕ್ಕೆ ಬಾರದ ಅಪಾಯಕಾರಿ ತೆರೆದ ಕೊಳವೆಬಾವಿಗಳನ್ನೂ ಗುರುತಿಸಿ ಸುರಕ್ಷಿತಗೊಳಿಸಬೇಕು. ರಾಜ್ಯವನ್ನು ‘ತೆರೆದ ಕೊಳವೆಬಾವಿ ಮುಕ್ತ ಕರ್ನಾಟಕ’ವನ್ನಾಗಿಸುವುದು ನಮ್ಮ ಸರ್ಕಾರದ ಧೃಢ ಸಂಕಲ್ಪವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಅಭಿಯಾನಕ್ಕೆ ಸಂಬಂಧಿಸಿದ ಸಮಗ್ರ ಕಾರ್ಯಯೋಜನೆಯನ್ನು ಸಿದ್ಧಪಡಿಸುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಮ್ಮಿನಬಾವಿ ಹಾಗೂ ಅಂತರ್ಜಲ ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ