ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರವಾಗಿ ಟೀಕಿಸಿದ್ದಾರೆ.
“ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ತನ್ನದೇ ಆದ ಗೌರವ ಮತ್ತು ಘನತೆ ಇದೆ. ಹಲವು ವರ್ಷಗಳಿಂದ ಜಾರಿಯಲ್ಲಿರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬದಲು, ಅದನ್ನು ಐದು ಆಯುಕ್ತಾಲಯಗಳಾಗಿ ವಿಭಜಿಸುವ ಅಗತ್ಯವೇನಿತ್ತು? ಈ ಕ್ರಮದಿಂದ ಪೊಲೀಸ್ ವ್ಯವಸ್ಥೆಯಲ್ಲಿ ಇನ್ನಷ್ಟು ಗೊಂದಲ ಉಂಟಾಗಲಿದೆ” ಎಂದು ಹೇಳಿದ್ದಾರೆ.
ಈಗಾಗಲೇ ಬೆಂಗಳೂರನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸಲಾಗಿದ್ದು, ಆಡಳಿತಾತ್ಮಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೀಗ ಅದೇ ರೀತಿಯಲ್ಲಿ ಪೊಲೀಸ್ ಇಲಾಖೆಯನ್ನೂ ವಿಭಜಿಸುವ ಮೂಲಕ ಸರ್ಕಾರ ಮತ್ತೊಂದು ಗೊಂದಲ ಸೃಷ್ಟಿಸುತ್ತಿದೆ. ಇದು ಬೆಂಗಳೂರು ಪೊಲೀಸ್ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಲಿದೆ. ಹಿರಿಯ ಪೊಲೀಸ್ ಅಧಿಕಾರಿಗಳೂ ಈ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಮೊದಲು ಈ ತುಘಲಕ್ ಮಾದರಿಯ ನಿರ್ಧಾರವನ್ನು ಕೈಬಿಟ್ಟು, ಈಗಿರುವ ಪೊಲೀಸ್ ಆಯುಕ್ತಾಲಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ತುಘಲಕ್ ಆಡಳಿತಕ್ಕೆ ಇನ್ನೊಂದು ಉದಾಹರಣೆ ಎಂದು ಕಿಡಿಕಾರಿದ್ದಾರೆ.
ಇಷ್ಟು ವರ್ಷಗಳಿಂದ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಐದು ಕಮಿಷನರೇಟ್‌ಗಳಾಗಿ ವಿಭಜಿಸುವ ಅಗತ್ಯ ಇರಲಿಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಭಜಿಸಿದ ನಂತರ ಆಡಳಿತ ಮತ್ತು ಹಣಕಾಸಿನ ಸಮಸ್ಯೆ ಎದುರಾಗಿದೆ. ಯಾವುದೇ ಯೋಜನೆಗೂ ಪಾಲಿಕೆಗಳ ಬಳಿ ಹಣವಿಲ್ಲ. ಅದಕ್ಕಾಗಿಯೇ ಜನರಿಂದ ಕಸ, ಪಾರ್ಕಿಂಗ್ ಎಂದು ದಂಡಗಳನ್ನೇ ಆದಾಯ ಸಂಗ್ರಹದ ಮೂಲ ಮಾಡಿಕೊಳ್ಳಲಾಗಿದೆ. ಈಗ ಪೊಲೀಸ್ ಇಲಾಖೆಯನ್ನೂ ಇದೇ ರೀತಿಯಲ್ಲಿ ವಿಭಜಿಸಿ, ಮತ್ತೆ ಹೊಸ ಶುಲ್ಕಗಳನ್ನು ತಂದರೂ ಅಚ್ಚರಿ ಪಡಬೇಕಿಲ್ಲ.
ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೇ, ಅನೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಯೋಗ್ಯತೆ ಇಲ್ಲದಿರುವಾಗ, ಹೊಸದಾಗಿ 1,022 ಹುದ್ದೆಗಳಿಗೆ ಹಣಕಾಸು ಎಲ್ಲಿಂದ ತರುತ್ತೀರಿ?ಕಚೇರಿಗಳ ನಿರ್ಮಾಣಕ್ಕೆ, ಹೊಸ ಜಾಗಗಳಿಗೆ ಅನುದಾನ ಎಲ್ಲಿದೆ? ಕೇವಲ ಘೋಷಣೆಗಳನ್ನು ಮಾಡಿ ನಂತರ ಜಾರಿ ಮಾಡದೆ ಸಬೂಬು ಹೇಳುವ ನಾಟಕ ಮಾಡಬೇಡಿ. ಇದರ ಬದಲು ಈಗ ಇರುವ ವ್ಯವಸ್ಥೆಗೆ ಹೆಚ್ಚು ಅನುದಾನ ನೀಡಿ ಬಲಪಡಿಸಿ ಎಂದು ವ್ಯಂಗ್ಯವಾಡಿದ್ದಾರೆ.