ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯ ಸಮಗ್ರ ಪುನರ್‌ರಚನೆಯ ಭಾಗವಾಗಿ ನಗರವನ್ನು ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಲು ರಾಜ್ಯ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
ಜಿಬಿಎ ರಚನೆಯ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಪುನರ್‌ರಚನೆ ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಇರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಆಯುಕ್ತಾಲಯಗಳಾಗಿ ವಿಭಜಿಸಲಾಗುತ್ತದೆ. ಇವುಗಳ ಒಟ್ಟಾರೆ ಮೇಲ್ವಿಚಾರಣೆಯನ್ನು ಮುಖ್ಯ ಪೊಲೀಸ್ ಆಯುಕ್ತರು ನಿರ್ವಹಿಸಲಿದ್ದಾರೆ.
ಈಗಿರುವ ಪೊಲೀಸ್ ಆಯುಕ್ತರ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ‘ಮುಖ್ಯ ಪೊಲೀಸ್ ಆಯುಕ್ತ’ ಎಂದು ಮರುನಾಮಕರಣ ಮಾಡಲಾಗುತ್ತದೆ. ಜಂಟಿ ಅಥವಾ ಹೆಚ್ಚುವರಿ ಪೊಲೀಸ್ ಆಯುಕ್ತರ (ಸಂಚಾರ) ಹುದ್ದೆಯನ್ನು ‘ಪೊಲೀಸ್ ಆಯುಕ್ತ (ಸಂಚಾರ)’ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ.
ಪ್ರಸ್ತಾವಿತ ಐದು ಘಟಕಗಳಲ್ಲಿ ಅಪರಾಧ ನಿಯಂತ್ರಣ, ಸಂಚಾರ ದಟ್ಟಣೆ ನಿರ್ವಹಣೆ ಹಾಗೂ ಸಾರ್ವಜನಿಕ ಭದ್ರತೆಗಾಗಿ ಒಟ್ಟು 6,550 ಹೆಚ್ಚುವರಿ ಹುದ್ದೆಗಳ ಅಗತ್ಯವಿದೆ. ಹೊಸ ಹುದ್ದೆಗಳ ಸೃಷ್ಟಿ ಹಾಗೂ ಈಗಿರುವ ಸಿಬ್ಬಂದಿಯ ಮರುನಿಯೋಜನೆ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುತ್ತದೆ.
ಪುನರ್‌ರಚನೆಗೆ ಅಗತ್ಯವಿರುವ 1,022 ಹೊಸ ಹುದ್ದೆಗಳ ಸೃಷ್ಟಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಇದಕ್ಕೆ ಸಚಿವ ಸಂಪುಟವೂ ಅನುಮೋದನೆ ನೀಡಿದೆ.
ಐದು ಪೊಲೀಸ್ ಆಯುಕ್ತಾಲಯಗಳ ವ್ಯಾಪ್ತಿಯಲ್ಲಿ, ನಗರದ ಹೊರವಲಯದ ಪ್ರದೇಶಗಳಲ್ಲಿರುವ ಪೊಲೀಸ್ ಠಾಣೆಗಳು ಸೇರಿದಂತೆ 11 ಹೊಸ ಪೊಲೀಸ್ ಠಾಣೆಗಳಿಗೆ 276 ಹುದ್ದೆಗಳನ್ನು ಸೃಷ್ಟಿಸಲು ಸಹ ಅನುಮೋದನೆ ನೀಡಲಾಗಿದೆ.
ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಹಾಗೂ ಸಿಬ್ಬಂದಿ ನಿಯೋಜನೆಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ. ಕಟ್ಟಡಗಳು, ವಾಹನಗಳು, ಉಪಕರಣಗಳು, ಸಿಸಿಟಿವಿ ವ್ಯವಸ್ಥೆಗಳು ಹಾಗೂ ಇತರೆ ಮೂಲಸೌಕರ್ಯಗಳಿಗಾಗಿ ಒಮ್ಮೆ ಮಾತ್ರ ಮಾಡಬೇಕಾದ 396.16 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಹೀಗಾಗಿ ಈ ಪುನರ್‌ರಚನೆಗೆ ಒಟ್ಟು ಅಂದಾಜು ವೆಚ್ಚ 764.87 ಕೋಟಿ ರೂಪಾಯಿಗಳಾಗಲಿದೆ.