ಬೆಂಗಳೂರು: ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಸ್ಪಾವೊಂದಕ್ಕೆ ನುಗ್ಗಿದ ಮಹಿಳೆಯರು ಸೇರಿದಂತೆ ಆರು ಮಂದಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿರುವ ಮೈ ಸಲೂನ್ ಆ್ಯಂಡ್ ಸ್ಪಾದಲ್ಲಿ ಅ.3ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಗುರುವಾರ ರಾತ್ರಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ನುಗ್ಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪ
ಸ್ಪಾದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ ಗುಂಪು, ಆಡಳಿತ ಮಂಡಳಿಗೆ 5 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಹಣ ನೀಡದಿದ್ದರೆ ಸ್ಪಾ ವಿರುದ್ಧ ಅಪಪ್ರಚಾರ ಮಾಡುವಂತಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಸ್ಪಾ ಮಾಲೀಕಿ ನಯನಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಬಳಿಕ ಆರೋಪಿಗಳು ತಮ್ಮ ಬೇಡಿಕೆಯನ್ನು 1.5 ಲಕ್ಷ ರೂಗೆ ಇಳಿಸಿದ್ದರು. ಮತ್ತಷ್ಟು ಬೆದರಿಕೆ ಎದುರಾಗಬಹುದೆಂಬ ಭಯದಿಂದ ಸ್ಪಾ ಆಡಳಿತ ಮಂಡಳಿ 1 ಲಕ್ಷ ರೂ ನೀಡಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತ್ತೆ 50 ಸಾವಿರ ರೂಗೆ ಬೇಡಿಕೆ
1 ಲಕ್ಷ ರೂ ಪಡೆದ ಬಳಿಕವೂ ಆರೋಪಿಗಳು ಹೆಚ್ಚುವರಿಯಾಗಿ 50 ಸಾವಿರ ರೂ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಸ್ಪಾದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಘಟನೆಯ ಸಂದರ್ಭದಲ್ಲಿ ನಡೆದಿರುವ ಸಂಪೂರ್ಣ ಬೆಳವಣಿಗೆಗಳ ಬಗ್ಗೆ ತನಿಖೆ ಮುಂದುವರಿದಿದೆ.