ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಆಪ್ತ ಹಾಗೂ ಇತ್ತೀಚಿಗಷ್ಟೇ ಮದುವೆಯಾದ ನಟ ಚಿಕ್ಕಣ್ಣ ಮತ್ತು ನಟ ಯಶಸ್ ಸೂರ್ಯಗೆ ಕೋರ್ಟ್ ಶಾಕ್ ನೀಡಿದ್ದು, ಇಬ್ಬರಿಗೂ ಸಮನ್ಸ್ ಜಾರಿ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 59ನೇ ಸಿಎಸ್‌ಎಚ್ ಕೋರ್ಟ್, ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಅಕ್ಟೋಬರ್ 15ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ನೋಟಿಸ್ ನೀಡಿದೆ.
ಈ ನಟರೂ ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದು, ಕೊಲೆಗೂ ಮುನ್ನ ಆರೋಪಿ ದರ್ಶನ್ ಭಾಗಿಯಾಗಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಸಾಕ್ಷ್ಯ ಹೇಳಲು ನ್ಯಾಯಾಲಯ ಸಮನ್ಸ್ ನೀಡಿದೆ.
ರೇಣುಕಾಸ್ವಾಮಿ ಹತ್ಯೆ ನಡೆದ ದಿನದಂದು(ಜೂನ್ 8, 2024) ನಟ ದರ್ಶನ್ ಅವರು ಆರ್‌ಆರ್ ನಗರದ ‘ಸ್ಟೋನಿಬ್ರೂಕ್’ ರೆಸ್ಟೋರೆಂಟ್‌ನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಉಪಸ್ಥಿತರಿದ್ದರು. ತನಿಖಾಧಿಕಾರಿಗಳು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ನಟ ಚಿಕ್ಕಣ್ಣ ಅವರನ್ನು ದರ್ಶನ್ ವಿರುದ್ಧದ ಪ್ರಮುಖ ಸಾಕ್ಷಿಯನ್ನಾಗಿ ಸೇರಿಸಲಾಗಿದೆ.
ಹತ್ಯೆ ನಡೆಯುವ ಕೆಲವೇ ಗಂಟೆಗಳ ಮೊದಲು ನಟ ದರ್ಶನ್ ಎಲ್ಲಿದ್ದರು, ಯಾರ ಜೊತೆಗಿದ್ದರು ಹಾಗೂ ಅವರ ನಡವಳಿಕೆ ಹೇಗಿತ್ತು ಎಂಬುದನ್ನು ದೃಢೀಕರಿಸಲು ಚಿಕ್ಕಣ್ಣ ಅವರ ಸಾಕ್ಷ್ಯ ಹಾಗೂ ವಿಚಾರಣೆ ಅತ್ಯಂತ ನಿರ್ಣಾಯಕವಾಗಿದೆ.