ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಾಗಿ ಬೆಂಗಳೂರಿನಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನವನ್ನು ತಡವಾಗಿ ಹೊರಟಿತ್ತು ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿವೆ.
ಮಂಗಳವಾರ ಇಂಡಿಗೋ ವಿಮಾನ 6E 870, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಗಮನಕ್ಕಾಗಿ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸುಮಾರು ಒಂದು ಗಂಟೆ ಕಾಯಬೇಕಾಯಿತು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ. ಆದರೆ, ವಿಮಾನ ವಿಳಂಬಕ್ಕೆ ಕಾರ್ಯಾಚರಣೆಗೆ ಸಂಬಂಧಿಸಿದ ಕಾರಣಗಳಿದ್ದವು ಎಂದು ಇಂಡಿಗೋ ತಿಳಿಸಿದೆ.
ಪ್ರಯಾಣಿಕರಾದ ಸುಪರ್ಣಾ ಸಿಂಗ್ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಕಾಯಬೇಕಾಯಿತು. ವಿಮಾನಯಾನ ಸಂಸ್ಥೆಯಿಂದಲೂ ವಿಳಂಬದ ಬಗ್ಗೆ ಸಮರ್ಪಕ ಮಾಹಿತಿ ನೀಡಲಾಗಲಿಲ್ಲ ಎಂದು ಆರೋಪಿಸಿದ್ದಾರೆ.
ಪೈಲಟ್ ಯಾವುದೇ ಕಾರಣವನ್ನು ತಿಳಿಸಲಿಲ್ಲ. ಪ್ರಯಾಣಿಕರಾದ ನಾವು ಕಾಯುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ ಎಂದು ಹೇಳಿದ್ದಾರೆ.
ವಿಮಾನ ಸಂಚಾರ ಟ್ರ್ಯಾಕಿಂಗ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ವಿಮಾನವು ರಾತ್ರಿ 7.30ಕ್ಕೆ ಹೊರಡಬೇಕಿದ್ದರೂ ರಾತ್ರಿ 8.06ಕ್ಕೆ ಅಂದರೆ ನಿಗದಿತ ಸಮಯಕ್ಕಿಂತ ಸುಮಾರು 36 ನಿಮಿಷ ತಡವಾಗಿ ಹೊರಟಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ 6E870 ವಿಮಾನವು ಮುಖ್ಯಮಂತ್ರಿ ಆಗಮಿಸುವವರೆಗೆ ನಿನ್ನೆ ರಾತ್ರಿ ರನ್‌ವೇಯಲ್ಲಿ ಒಂದು ಗಂಟೆ ಕಾಯಬೇಕಾಯಿತು. ವಿಳಂಬಕ್ಕೆ ಅವರೇ ಕಾರಣ ಎಂದು ಸಿಬ್ಬಂದಿಯೊಬ್ಬರು ಖಚಿತಪಡಿಸಿದ್ದಾರೆ.
ಮಂಗಳವಾರ ಶಿವಕುಮಾರ್ ಅವರು ಇದೇ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸಬೇಕಾಗಿತ್ತು ಎಂದು ತಿಳಿದುಬಂದಿದೆ. ಆದಾಗ್ಯೂ, ವಿಮಾನ ವಿಳಂಬಕ್ಕೆ ಮುಖ್ಯಮಂತ್ರಿ ಆಗಮನ ಕಾರಣ ಎಂಬ ಆರೋಪವನ್ನು ಇಂಡಿಗೋ ದೃಢಪಡಿಸಿಲ್ಲ. ವಿಮಾನ ವಿಳಂಬವು ಕಾರ್ಯಾಚರಣೆಗೆ ಸಂಬಂಧಿಸಿದ ಕಾರಣಗಳಿಂದ ಉಂಟಾಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.