ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಇಂಧನ ತುಂಬಿಸಲು ಬಂದ ಐಷಾರಾಮಿ ಜಾಗ್ವಾರ್ ಕಾರೊಂದು ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸೇರಿದಂತೆ ಇಡೀ ಬಂಕ್ ಹೊತ್ತಿ ಉರಿದ ಘಟನೆ ಅತ್ತಿಬೆಲೆ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಘಟನೆ ನಡೆದಿದೆ.
ಕರ್ನಾಟಕ-ತಮಿಳುನಾಡು ಗಡಿಯ ಸಮೀಪ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕುಡ್ಲು ಗ್ರಾಮದ ನಿವಾಸಿ ಸಂಜಯ್ ಅವರು ಬುಧವಾರ ರಾತ್ರಿ ಕಾರಿಗೆ ಇಂಧನ ತುಂಬಿಸಿಕೊಳ್ಳಲು ಅತ್ತಿಬೆಲೆ ಸಮೀಪದ ಪೆಟ್ರೋಲ್ ಬಂಕ್‌ಗೆ ತೆರಳಿದ್ದರು.
ಈ ವೇಳೆ ಬಂಕ್ ಸಿಬ್ಬಂದಿ ಇಂಧನ ತುಂಬಿಸುವ ವೇಳೆ ಕಾರನ್ನು ಸ್ವಲ್ಪ ಮುಂದಕ್ಕೆ ಚಲಿಸುವಂತೆ ಸಂಜಯ್ ಅವರಿಗೆ ಸೂಚಿಸಿದ್ದಾರೆ. ಈ ವೇಳೆ ಅವರು ಕಾರನ್ನು ರಿವರ್ಸ್‌ಗೆ ಹಾಕಿದ್ದು, ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ್ದಾರೆ.
ಇದರಿಂದ ನಿಯಂತ್ರಣ ತಪ್ಪಿದ ಕಾರು ಪೆಟ್ರೋಲ್ ಪಂಪ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ ತಕ್ಷಣವೇ ಕಿಡಿ ಹೊತ್ತಿಕೊಂಡು ಇಡೀ ಜಾಗ್ವಾರ್ ಕಾರನ್ನು ಬೆಂಕಿ ಆವರಿಸಿದೆ.
ಬೆಂಕಿ ತೀವ್ರಗೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಚಾಲಕ ಸಂಜಯ್ ಹಾಗೂ ಆತನ ಜೊತೆಯಲ್ಲಿದ್ದ ಮಹಿಳಾ ಸಹಪ್ರಯಾಣಿಕ ತಕ್ಷಣವೇ ಕಾರಿನಿಂದ ಹೊರಗೆ ಜಿಗಿದು ಸಿನಿಮೀಯ ಶೈಲಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಂಕ್ ಉದ್ಯೋಗಿ ಗುಡ್ಡು ಕುಮಾರ್ ಎಂಬುವವರ ಕಾಲುಗಳಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಹಾಗೂ ತಮಿಳುನಾಡಿನ ಹೊಸೂರಿನಿಂದ ಒಟ್ಟು 3 ಅಗ್ನಿಶಾಮಕ ವಾಹನಗಳು ಧಾವಿಸಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು.
ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಬೆಂಕಿ ಭೂಗತ ಇಂಧನ ಟ್ಯಾಂಕ್‌ಗಳಿಗೆ ಹರಡುವುದು ತಪ್ಪಿದ್ದು, ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಘಟನೆಗೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸರು ಸಂಜಯ್ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.