ಬೆಂಗಳೂರು: ಅಕ್ಟೋಬರ್ 8 ರಂದು ಇಲ್ಲಿ ನಡೆದ 'ಎಸ್‌ಐಆರ್' ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ, ಯೂಟ್ಯೂಬರ್ ಧ್ರುವ್ ರಾಠಿ ಅವರ ಪೌರತ್ವ, ಇಮಿಗ್ರೇಷನ್ ಸ್ಥಾನಮಾನ ಮತ್ತು ವೀಸಾ ಷರತ್ತುಗಳ ಪಾಲನೆಯನ್ನು ಪರಿಶೀಲಿಸುವಂತೆ ಕೋರಿ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬದೆದಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಜರ್ಮನ್ ಪೌರತ್ವವನ್ನು ಹೊಂದಿದ್ದಾರೆ ಎಂದು ಭಾವಿಸಲಾದ ರಾಠಿ ಅವರು, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ನಟ ಪ್ರಕಾಶ್ ರಾಜ್ ಮತ್ತು ಇತರರೊಂದಿಗೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಮತ್ತು ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಕುರಿತು ಭಾರತೀಯ ಚುನಾವಣಾ ಆಯೋಗವನ್ನು ಟೀಕಿಸಿದ್ದರು ಎಂದು ರಾವ್ ತಿಳಿಸಿದ್ದಾರೆ.
ಚಾಮರಾಜಪೇಟೆ ಕ್ಷೇತ್ರದಿಂದ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ರಾವ್, ಪತ್ರವನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ವೀಸಾ, ಇಮಿಗ್ರೇಷನ್ ಅನುಮತಿ ಅಥವಾ ಇತರ ಸ್ಥಾನಮಾನದ ಆಧಾರದ ಮೇಲೆ ಭಾರತದಲ್ಲಿರುವ ವಿದೇಶಿ ಪ್ರಜೆಯೊಬ್ಬರು, ಭಾರತದ ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಂಘಟಿತ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಲು, ಅದನ್ನು ಉದ್ದೇಶಿಸಿ ಮಾತನಾಡಲು ಅಥವಾ ಅದರೊಂದಿಗೆ ಗುರುತಿಸಿಕೊಳ್ಳಲು ಕಾನೂನುಬದ್ಧವಾಗಿ ಅರ್ಹರೇ ಎಂಬುದು ಪರಿಶೀಲನೆಗೆ ಅಗತ್ಯವಿರುವ ಸೀಮಿತ ಹಾಗೂ ನಿರ್ದಿಷ್ಟ ವಿಷಯವಾಗಿದೆ' ಎಂದು ರಾವ್ ಪತ್ರದಲ್ಲಿ ತಿಳಿಸಿದ್ದಾರೆ.
ರಾಠಿ ಅವರ ಸದ್ಯದ ಪೌರತ್ವ ಮತ್ತು ರಾಷ್ಟ್ರೀಯತೆ, ಭಾರತ ಪ್ರವೇಶಿಸಲು ಬಳಸಿದ ಪಾಸ್‌ಪೋರ್ಟ್, ಅವರು ದೇಶದಲ್ಲಿ ಉಳಿದುಕೊಂಡಿದ್ದ ವೀಸಾ ಅಥವಾ ಇತರ ಅನುಮತಿ, ಅವರ ಭೇಟಿಯ ಘೋಷಿತ ಉದ್ದೇಶ ಹಾಗೂ ಅವರ ಅಧಿಕೃತ ವಾಸ್ತವ್ಯಕ್ಕೆ ಸಂಬಂಧಿಸಿದ ಷರತ್ತುಗಳನ್ನು ಪರಿಶೀಲಿಸುವಂತೆ ಅವರು ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಅಲ್ಲದೆ, ಅನ್ವಯವಾಗುವ ಇಮಿಗ್ರೇಷನ್ ಮತ್ತು ವೀಸಾ ನಿಯಮಗಳ ಅಡಿಯಲ್ಲಿ ಪ್ರತಿಭಟನೆಯಲ್ಲಿ ರಾಠಿ ಅವರ ಭಾಗವಹಿಸುವಿಕೆ ಹಾಗೂ ಅಲ್ಲಿ ಅವರು ಮಾಡಿದ ಭಾಷಣಕ್ಕೆ ಅವಕಾಶವಿತ್ತೇ ಮತ್ತು ಅದಕ್ಕೆ ಪೂರ್ವಾನುಮತಿ ಅಥವಾ ಅನುಮೋದನೆಯ ಅಗತ್ಯವಿತ್ತೇ ಎಂಬುದನ್ನು ಪರಿಶೀಲಿಸುವಂತೆಯೂ ಅವರು ಕೋರಿದ್ದಾರೆ.
ವಿದೇಶಿಯರ ಕಾಯ್ದೆ-1946, ವೀಸಾ ಷರತ್ತುಗಳು, ಇಮಿಗ್ರೇಷನ್ ನಿಯಮಗಳು, ಒಸಿಐ ನಿಯಮಗಳು ಅಥವಾ ಇತರ ಅನ್ವಯವಾಗುವ ಕಾನೂನುಗಳ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ತಮ್ಮ ಮನವಿಯು ರಾಠಿ ಅವರ ರಾಜಕೀಯ ನಿಲುವುಗಳೊಂದಿಗಿನ ಭಿನ್ನಾಭಿಪ್ರಾಯದಿಂದ ಅಥವಾ ಸರ್ಕಾರ ಅಥವಾ ಚುನಾವಣಾ ಆಯೋಗದ ಟೀಕೆಯಿಂದ ಪ್ರೇರೇಪಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತದಲ್ಲಿ ತಮ್ಮ ವಾಸ್ತವ್ಯ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದ ಕಾನೂನು ಚೌಕಟ್ಟನ್ನು ವಿದೇಶಿ ಪ್ರಜೆಗಳು ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಮನವಿಯನ್ನು ಮಾಡಲಾಗಿತ್ತು. ಈ ವಿಷಯದ ಸ್ವತಂತ್ರ ಪರಿಶೀಲನೆಗೆ ಅನುಕೂಲವಾಗುವಂತೆ, ಸಂಬಂಧಿತ ವಲಸೆ ಹಾಗೂ ಆಗಮನ-ನಿರ್ಗಮನ ದಾಖಲೆಗಳನ್ನು ಸಂರಕ್ಷಿಸುವಂತೆ ಮತ್ತು ಪರಿಶೀಲಿಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ನಾಗರಿಕ ಸಂಘಟನೆಗಳು ಮತ್ತು ಸಿಜೆಪಿ ಆಯೋಜಿಸಿದ್ದ 'ಜನತಾ ನ್ಯಾಯಾಲಯ' (people's tribunal) ಎಂಬ ಪ್ರತಿಭಟನೆಯಲ್ಲಿ ರಾಠಿ ಭಾಗವಹಿಸಿದ್ದರು; ಎಸ್‌ಐಆರ್ ವಿರುದ್ಧ ನಡೆದ ಈ ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್ ಮತ್ತು 'ಕಾಕ್ರೋಚ್ ಜನತಾ ಪಾರ್ಟಿ'ಯ ಸ್ಥಾಪಕ ಅಭಿಜಿತ್ ದಿಪ್ಕೆ ಕೂಡ ಉಪಸ್ಥಿತರಿದ್ದರು.