ಡಿಕೆ.ಶಿವಕುಮಾರ್ 
ರಾಜ್ಯ

ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆಂಬ ಸಾಕ್ಷ್ಯ ನನ್ನ ಬಳಿ ಇದೆ, ಕುಮಾರಸ್ವಾಮಿಗೇಕೆ ಕೊಡಲಿ..?: ಡಿಕೆ.ಶಿವಕುಮಾರ್

ನಾನು ಯಾರಿಗೆ ದಾಖಲೆಗಳನ್ನು ನೀಡಬೇಕೋ ಅವರಿಗೆ ನೀಡುತ್ತೇನೆ. ಕುಮಾರಸ್ವಾಮಿಗೇಕೆ ನೀಡಲಿ? ನಾನು ಮಾತನಾಡುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮಾತನಾಡುತ್ತೇನೆ.

ಬೆಂಗಳೂರು: ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆಂಬ ಸಾಕ್ಷ್ಯ ನನ್ನ ಬಳಿ ಇದೆ, ಅದನ್ನು ಹೆಚ್.ಡಿ ಕುಮಾರಸ್ವಾಮಿಗೇಕೆ ಕೊಡಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಎದುರಾಳಿಗಳ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷ್ಯಗಳು ತಮ್ಮ ಬಳಿ ಇವೆ. ಅವುಗಳನ್ನು ಯಾರಿಗೆ ನೀಡಬೇಕೋ ಅವರಿಗೆ ಮಾತ್ರ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ನಾನು ಯಾರಿಗೆ ದಾಖಲೆಗಳನ್ನು ನೀಡಬೇಕೋ ಅವರಿಗೆ ನೀಡುತ್ತೇನೆ. ಕುಮಾರಸ್ವಾಮಿಗೇಕೆ ನೀಡಲಿ? ನಾನು ಮಾತನಾಡುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮಾತನಾಡುತ್ತೇನೆ. ಯಾರು ಯಾರನ್ನು ಯಾವ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಯಾರನ್ನು ಊರಿನಿಂದ ಹೊರಗೆ ಕಳುಹಿಸಲಾಗಿದೆ, ಯಾರನ್ನು ಎಲ್ಲಿಗೆ ಕಳುಹಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳಿವೆ ಎಂದು ತಿಳಿಸಿದರು.

ಇದೇ ವೇಳೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ನನ್ನ ವಿರುದ್ಧ ಏನು ಮಾಡಲಾಗುತ್ತಿದೆಯೋ ಅದನ್ನೇ ನಿಮ್ಮ ವಿರುದ್ಧವೂ ಮಾಡುತ್ತಿದ್ದಾರೆ, ಎಚ್ಚರಿಕೆಯಿಂದಿರಿ ಎಂದು ನನ್ನ ಸಚಿವರಿಗೆ ಹೇಳುವುದು ನನ್ನ ಕರ್ತವ್ಯ. ಅವರನ್ನು ಎಚ್ಚರಿಸುವುದು ನನ್ನ ಜವಾಬ್ದಾರಿ” ಎಂದರು.

ಸಚಿವರು ಮತ್ತು ಅಧಿಕಾರಿಗಳು ಸ್ಟಿಂಗ್ ಆಪರೇಷನ್ ಮೂಲಕ ಬಲೆಗೆ ಬೀಳಿಸುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಾವು ಸೂಚಿಸಿರುವುದಾಗಿಯೂ ಅವರು ಪುನರುಚ್ಚರಿಸಿದರು.

ಆಪರೇಷನ್‌ನಲ್ಲಿ ಕರ್ನಾಟಕದವರೇ ಭಾಗಿಯಾಗಿದ್ದಾರೆಯೇ ಅಥವಾ ಬೇರೆ ರಾಜ್ಯಗಳ ವ್ಯಕ್ತಿಗಳೂ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, “ಈಗಲೇ ಎಲ್ಲವನ್ನೂ ಬಹಿರಂಗಪಡಿಸುವುದಿಲ್ಲ. ಸಮಯ ಬಂದಾಗ ಉತ್ತರಿಸುತ್ತೇನೆ” ಎಂದರು.

ಇತರ ಯಾವ ನಾಯಕರನ್ನು ಗುರಿಯಾಗಿಸಲಾಗಿದೆ ಎಂಬ ಬಗ್ಗೆಯೂ ತಮಗೆ ಮಾಹಿತಿ ಇದೆ. ಆದರೆ, ಸದ್ಯಕ್ಕೆ ಎಲ್ಲ ವಿವರಗಳನ್ನು ಬಹಿರಂಗವಾಗಿ ಹೇಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ವಿಧಾನ ಪರಿಷತ್ ಚುನಾವಣೆಗಳಲ್ಲಿ 12 ಶಾಸಕರು ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಹತಾಶರಾಗಿದ್ದಾರೆ. 12 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಬಿಜೆಪಿಯ ನಾಯಕರೂ ಅವರನ್ನು ಟೀಕಿಸುತ್ತಿದ್ದಾರೆ. ಎರಡೂ ಪಕ್ಷಗಳು ಸಂಕಷ್ಟದಲ್ಲಿವೆ. ಹೀಗಾಗಿಯೇ ಅವರು ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆಂದು ಹೇಳಿದರು..

ಇದೇ ವೇಳೆ ತಮ್ಮ ಮುಂದಿನ ರಾಜಕೀಯ ಕಾರ್ಯಕ್ರಮಗಳ ಕುರಿತು ಮಾತನಾಡಿದ ಅವರು, ಮೊದಲು ಗೋವಾ ಪ್ರವಾಸವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ