ಎಐ ಸೃಷ್ಟಿತ ಚಿತ್ರ 
ರಾಜ್ಯ

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾನಗಳ ಮತ್ತು ರಾಜ್ಯದ ಅಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳ ಮೀಸಲಾತಿ) ಕಾಯ್ದೆ, 2022ರ ಸೆಕ್ಷನ್‌ 3 ಮತ್ತು 4 ಅನ್ನು ನ್ಯಾಯಾಲಯ ಅಸಂವಿಧಾನಿಕ ಎಂದು ಘೋಷಿಸಿದೆ.

ಬೆಂಗಳೂರು: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. 2022ರಲ್ಲಿ ಜಾರಿಗೆ ತರಲಾಗಿದ್ದ ಕಾಯ್ದೆಯ ಸೆಕ್ಷನ್ 3 ಮತ್ತು 4 ಅನ್ನು ನ್ಯಾಯಾಲಯವು ಅಸಂವಿಧಾನಿಕ ಎಂದು ಘೋಷಿಸಿ, ರದ್ದುಗೊಳಿಸಿದೆ.

ಹೈಕೋರ್ಟ್ ಆದೇಶದಿಂದ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾನಗಳ ಮತ್ತು ರಾಜ್ಯದ ಅಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳ ಮೀಸಲಾತಿ) ಕಾಯ್ದೆ, 2022ರ ಸೆಕ್ಷನ್‌ 3 ಮತ್ತು 4 ಅನ್ನು ನ್ಯಾಯಾಲಯ ಅಸಂವಿಧಾನಿಕ ಎಂದು ಘೋಷಿಸಿದೆ. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಶೇ.32ರಲ್ಲೇ ಉಳಿಸಲಾಗಿದ್ದರೂ, ಒಟ್ಟಾರೆ ಮೀಸಲಾತಿ ಪ್ರಮಾಣವು ಶೇ.50ರ ಮಿತಿಯನ್ನು ಮೀರಿತ್ತು.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ವಿಭಾಗೀಯ ಪೀಠವು, “ಒಟ್ಟಾರೆ ಮೀಸಲಾತಿಯನ್ನು ಶೇ.50ರ ಮಿತಿಯನ್ನು ಮೀರುವಂತೆ ಮಾಡುವ ಸೆಕ್ಷನ್‌ 3ರ ಭಾಗವು ಸಂವಿಧಾನದ 14 ಮತ್ತು 15ನೇ ವಿಧಿಗಳನ್ನು ಉಲ್ಲಂಘಿಸುವುದರಿಂದ ಅದನ್ನು ರದ್ದುಗೊಳಿಸಲಾಗಿದೆ. ಸಂವಿಧಾನದ 14 ಮತ್ತು 16ನೇ ವಿಧಿಗಳನ್ನು ಉಲ್ಲಂಘಿಸುವುದರಿಂದ ಸೆಕ್ಷನ್‌ 4ನ್ನೂ ಅಸಂವಿಧಾನಿಕ ಎಂದು ರದ್ದುಗೊಳಿಸಲಾಗಿದೆ” ಎಂದು ಆದೇಶಿಸಿದೆ.

ಸಮಾನ ರಕ್ಷಣೆ ಮತ್ತು ಸಮಾನ ಅವಕಾಶಗಳಿಗೆ ಸಂಬಂಧಿಸಿದ ಸಂವಿಧಾನದ 14, 15 ಮತ್ತು 16ನೇ ವಿಧಿಗಳ ವ್ಯಾಪ್ತಿಯಲ್ಲಿ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿತ್ರ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೇರಿದಂತೆ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ. ಈ ಕಾಯ್ದೆ 2023ರ ಜನವರಿ 12ರಂದು ಜಾರಿಗೆ ಬಂದಿತ್ತು.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಇಂದ್ರಾ ಸಾಹ್ನಿ ಪ್ರಕರಣ ಸೇರಿದಂತೆ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಕಾಯ್ದೆ ರೂಪಿಸುವ ಶಾಸಕಾಂಗದ ಅಧಿಕಾರ ರಾಜ್ಯ ಸರ್ಕಾರಕ್ಕಿದ್ದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪ್ರಮುಖ ನೀತಿ ನಿರ್ಧಾರಗಳ ಕುರಿತು ರಾಷ್ಟ್ರೀಯ ಆಯೋಗಗಳೊಂದಿಗೆ ಸಮಾಲೋಚನೆ ನಡೆಸುವುದು ಕಡ್ಡಾಯ ಎಂದು ಹೇಳಿದೆ.

ಸಂವಿಧಾನದ 338(9) ಮತ್ತು 338ಎ(9)ನೇ ವಿಧಿಗಳ ಅಡಿಯಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗಗಳೊಂದಿಗೆ ಸಮಾಲೋಚನೆ ನಡೆಸಬೇಕು. ಕಾಯ್ದೆ ಜಾರಿಗೊಳಿಸಿದ ಬಳಿಕ ಕೇವಲ ಪತ್ರ ಬರೆಯುವುದನ್ನು ಅಗತ್ಯ ಸಮಾಲೋಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರವು 2025ರ ಡಿಸೆಂಬರ್ 10 ಮತ್ತು 2026ರ ಜನವರಿ 20ರಂದು ಆಯೋಗಗಳಿಗೆ ಪತ್ರ ಬರೆದಿತ್ತು. ಆದರೆ, ಕಾಯ್ದೆ ಜಾರಿಯಾಗಿ ಸುಮಾರು ಮೂರು ವರ್ಷಗಳ ಬಳಿಕ ಮತ್ತು ಅದರ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಈ ಪತ್ರಗಳನ್ನು ಬರೆಯಲಾಗಿತ್ತು. ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಸಮಾಲೋಚನೆಯು ನಿರ್ಧಾರ ಕೈಗೊಳ್ಳುವ ಮೊದಲೇ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದೆ.

ಮೀಸಲಾತಿಯ ಶೇ.50ರ ಮಿತಿ ಇನ್ನು ಅನ್ವಯಿಸುವುದಿಲ್ಲ ಎಂಬ ವಾದವನ್ನು ರಾಜ್ಯ ಸರ್ಕಾರ ಮುಂದಿಟ್ಟಿತ್ತು. ಸಂವಿಧಾನದ 245 ಮತ್ತು 246ನೇ ವಿಧಿಗಳು ರಾಜ್ಯ ಶಾಸಕಾಂಗಕ್ಕೆ ಕಾಯ್ದೆ ರೂಪಿಸುವ ಅಧಿಕಾರ ನೀಡುತ್ತವೆ ಮತ್ತು ಈ ಅಧಿಕಾರವನ್ನು 338(9) ಹಾಗೂ 338ಎ(9)ನೇ ವಿಧಿಗಳು ನಿರ್ಬಂಧಿಸುವುದಿಲ್ಲ ಎಂದು ಸರ್ಕಾರ ವಾದಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ರಾಜ್ಯ ಶಾಸಕಾಂಗಕ್ಕೆ ಕಾಯ್ದೆ ರೂಪಿಸುವ ಅಧಿಕಾರವಿದೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದರೆ, ಸಂವಿಧಾನದ ಇತರ ನಿಬಂಧನೆಗಳ ಮೂಲಕ ವಿಧಿಸಲಾದ ನಿರ್ಬಂಧಗಳಿಂದ ಈ ಅಧಿಕಾರ ಹೊರತಾಗಿದೆ ಎಂದು ಹೇಳುವುದು ತಪ್ಪು ಎಂದು ತಿಳಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರುವ ಪ್ರಮುಖ ನೀತಿ ನಿರ್ಧಾರಗಳ ಸಂದರ್ಭದಲ್ಲಿ ಸಂಬಂಧಿತ ಆಯೋಗಗಳೊಂದಿಗೆ ಸಮಾಲೋಚನೆ ನಡೆಸುವ ನಿಯಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಶೇ.90ಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಹೀಗಾಗಿ, ಮೀಸಲಾತಿಯ ಪ್ರಮಾಣವು ಅವರ ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂದು ರಾಜ್ಯ ಸರ್ಕಾರ ವಾದಿಸಿತ್ತು. ಆದರೆ, ಈ ವಾದವನ್ನು ಒಪ್ಪಿಕೊಂಡರೆ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ತತ್ವಕ್ಕೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಶೇ.50ರ ಮೀಸಲಾತಿ ಮಿತಿಯು ಸಂವಿಧಾನದ 16(4)ನೇ ವಿಧಿಯ ಅಡಿಯಲ್ಲಿ ಮಾತ್ರವಲ್ಲದೆ, 15(4)ನೇ ವಿಧಿಯ ಅಡಿಯಲ್ಲಿನ ಮೀಸಲಾತಿಗೂ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಸಾಧಾರಣ ಪರಿಸ್ಥಿತಿಗಳಲ್ಲಿ ಮಿತಿ ಮೀರಲು ಬಲವಾದ ಕಾರಣಗಳನ್ನು ಸಾಬೀತುಪಡಿಸಿದರೆ ಮಾತ್ರ ವಿನಾಯಿತಿ ನೀಡಲು ಸಾಧ್ಯ ಎಂದು ತಿಳಿಸಿದೆ.

ರತ್ನಪ್ರಭಾ ಸಮಿತಿಯ ವರದಿಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ನ್ಯಾಯಾಂಗ ಪರಿಶೀಲನೆಯ ಮೂಲಕ ಮರುಪರಿಶೀಲಿಸುವುದು ನ್ಯಾಯಸಮ್ಮತವಲ್ಲ ಎಂಬ ಅಂಶವನ್ನು ನ್ಯಾಯಾಲಯ ಉಲ್ಲೇಖಿಸಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಮೀಸಲಾತಿ ಕಾಯ್ದೆ ರೂಪಿಸುವ ಅಧಿಕಾರ ಇದೆಯೇ ಎಂಬುದು ಪ್ರಶ್ನೆಯಲ್ಲ; ಮೀಸಲಾತಿಯ ಪ್ರಮಾಣವು ಶೇ.50ರ ಮಿತಿಯನ್ನು ಮೀರಬಹುದೇ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ ಎಂದು ಹೇಳಿದೆ.

ಕೆಲವು ಸಮುದಾಯಗಳು ಸಾಮಾಜಿಕವಾಗಿ ಅಂಚಿನಲ್ಲಿದ್ದು, ಮೀಸಲಾತಿಯ ಪ್ರಯೋಜನಗಳು ಅವುಗಳಿಗೆ ತಲುಪಿಲ್ಲ ಎಂಬ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿನ ಅಂಶಗಳು ಆಂತರಿಕ ಮೀಸಲಾತಿಗೆ ಆಧಾರವಾಗಬಹುದೇ ಹೊರತು, ಒಟ್ಟಾರೆ ಮೀಸಲಾತಿಯ ಶೇ.50ರ ಮಿತಿಯನ್ನು ಮೀರಲು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಕೆಲವು ಸಮುದಾಯಗಳಿಗೆ ರಾಜ್ಯ ಸರ್ಕಾರಿ ಸೇವೆಗಳಲ್ಲಿ ದೊರೆಯುತ್ತಿರುವ ಮೀಸಲಾತಿ ಅಥವಾ ಪ್ರಾತಿನಿಧ್ಯವು ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಕಡಿಮೆಯಿದೆ ಎಂಬುದಷ್ಟೇ ಮಿತಿ ಮೀರಲು ಅಸಾಧಾರಣ ಪರಿಸ್ಥಿತಿಯೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

“ಮೀಸಲಾತಿಯ ಪ್ರಮಾಣ ಶೇ.18ರಷ್ಟಿದ್ದರೆ, ಜನಸಂಖ್ಯೆಯಲ್ಲಿ ಸಂಬಂಧಿತ ಸಮುದಾಯಗಳ ಪಾಲು ಶೇ.24.10ರಷ್ಟಿದೆ ಎಂಬ ಅಂಶವು ಶೇ.50ರ ಮಿತಿಯನ್ನು ಮೀರುವ ಅಗತ್ಯವನ್ನು ಸಾಬೀತುಪಡಿಸುವುದಿಲ್ಲ. ಮಿತಿ ಹೆಚ್ಚಿಸಿದರೆ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಲಭ್ಯವಿರುವ ಹುದ್ದೆಗಳ ಸಂಖ್ಯೆಯೂ ಕಡಿಮೆಯಾಗುತ್ತದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬೊಮ್ಮಾಯಿ ಆಗ್ರಹ

ಈ ನಡುವೆ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಬೇಕು ಎಂದು ಹಾವೇರಿ ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಸರ್ಕಾರ ಈ ಕ್ರಮ ಕೈಗೊಳ್ಳದಿದ್ದರೆ ತಾವೇ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಎಚ್ಚರಿಸಿದ್ದಾರೆ.

ತಮ್ಮ ಸರ್ಕಾರದ ಅವಧಿಯಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯ ಆಧಾರದ ಮೇಲೆ ಮಾಡಲಾಗಿತ್ತು. ಅಲ್ಲದೆ, ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ಈ ಕುರಿತು ಮಸೂದೆ ಅಂಗೀಕರಿಸಲಾಗಿತ್ತು.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಅಭಿವೃದ್ಧಿಯನ್ನು ವಿರೋಧಿಸುವ ಉದ್ದೇಶದಿಂದಲೇ ಕೆಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೀಸಲಾತಿ ಹೆಚ್ಚಳದ ವಿಚಾರವನ್ನು ರಾಜ್ಯ ಸರ್ಕಾರ ಖಂಡಿತವಾಗಿಯೂ ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...