ಕೊಡಗು ಜಿಲ್ಲೆಯಲ್ಲಿ ಚೀನಿ ಹುಡ್ಲು ಹಾಡಿಯಲ್ಲಿ ₹4.84 ಕೋಟಿ ವೆಚ್ಚದ ವಿದ್ಯುತ್ ಯೋಜನೆಯನ್ನು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. 
ರಾಜ್ಯ

ದಸರಾ ಹೊತ್ತಿಗೆ ಕೊಡಗಿನ ಹಾಡಿ ಜನರ ಬದುಕಿನಲ್ಲಿ ಬೆಳಕು: ವಿದ್ಯುತ್ ಯೋಜನೆ ಉದ್ಘಾಟಿಸಿದ ಶಾಸಕ ಪೊನ್ನಣ್ಣ

4.84 ಕೋಟಿ ರೂಪಾಯಿ ವೆಚ್ಚದ ವಿದ್ಯುತ್ ಯೋಜನೆ ಉದ್ಘಾಟನೆಯಾಗುವುದರೊಂದಿಗೆ ಜನರ ಬದುಕಲ್ಲಿ ಬೆಳಕು ಬಂದಂತಾಗಿದೆ. ಜಂಗಲ್ ಹಾಡಿ, ಆಯುರ್ ಸುರುಳಿ ಹಾಡಿ, ಚೀನಿ ಹುಡ್ಲು ಹಾಡಿ ಮತ್ತು ಚೊಂಬು ಕಾಡು ಹಾಡಿಗಳಿಗೆ ಕೊನೆಗೂ ವಿದ್ಯುತ್ ಬೆಳಕು ತಲುಪಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಆದಿವಾಸಿ ಹಾಡಿಗಳಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಜನರ ಬದುಕಿನಲ್ಲಿ ಕೂಡ ಕತ್ತಲು ಆವರಿಸಿದಂತಾಗುತ್ತಿತ್ತು. ತಲೆಮಾರುಗಳಿಂದ ಈ ಜನರ ಬದುಕಿನಲ್ಲಿ ಕತ್ತಲೆ ಕೇವಲ ಬೆಳಕಿನ ಕೊರತೆಯಾಗಿರಲಿಲ್ಲ; ಅದು ಅವರ ಜೀವನದ ಒಂದು ಭಾಗವೇ ಆಗಿತ್ತು.

ಈ ವಾರ 4.84 ಕೋಟಿ ರೂಪಾಯಿ ವೆಚ್ಚದ ವಿದ್ಯುತ್ ಯೋಜನೆ ಉದ್ಘಾಟನೆಯಾಗುವುದರೊಂದಿಗೆ ಜನರ ಬದುಕಲ್ಲಿ ಬೆಳಕು ಬಂದಂತಾಗಿದೆ. ಜಂಗಲ್ ಹಾಡಿ, ಆಯುರ್ ಸುರುಳಿ ಹಾಡಿ, ಚೀನಿ ಹುಡ್ಲು ಹಾಡಿ ಮತ್ತು ಚೊಂಬು ಕಾಡು ಹಾಡಿಗಳಿಗೆ ಕೊನೆಗೂ ವಿದ್ಯುತ್ ಬೆಳಕು ತಲುಪಿದೆ.

ನಮ್ಮ ಮನೆಗಳು ಈ ರೀತಿ ಬೆಳಗುವುದನ್ನು ನೋಡುವ ದಿನ ಬರುತ್ತದೆ ಎಂದು ನಾವು ಕನಸಿನಲ್ಲಿಯೂ ಭಾವಿಸಿರಲಿಲ್ಲ. ಸ್ವಿಚ್ ಹಾಕಿದ ತಕ್ಷಣ ಮನೆಗಳಲ್ಲಿ ಬೆಳಕು ಮೂಡಿದಾಗ ನಾವೆಲ್ಲರೂ ಸಂಭ್ರಮದಿಂದ ಕುಣಿದಾಡಿದೆವು ಎಂದು ಚೀನಿ ಹುಡ್ಲು ಹಾಡಿಯ ನಿವಾಸಿ ಪಣಿಯೇರವರ ಸಿ. ರಾಮು ಹೇಳಿದರು.

ಯೋಜನೆ ನಾಲ್ಕು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದರೂ ಉದ್ಘಾಟನೆ ವಿಳಂಬವಾಗಿತ್ತು. ಇಷ್ಟು ದಿನ ಕತ್ತಲೆಯಲ್ಲೇ ಬದುಕುತ್ತಿದ್ದ ನಮಗೆ ಯೋಜನೆ ಪೂರ್ಣಗೊಂಡ ಬಳಿಕ ಸಂತೋಷ ತಡೆಯಲಾಗಲಿಲ್ಲ. ವಿದ್ಯುತ್ ಘಟಕವನ್ನು ಉದ್ಘಾಟಿಸುವಂತೆ ನಮ್ಮ ಶಾಸಕರನ್ನು ಒತ್ತಾಯಿಸಿದೆವು. ನಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಾಗ ಎಲ್ಲರ ಮುಖದಲ್ಲೂ ಮೂಡಿದ ಸಂತೋಷವನ್ನು ನೀವು ನೋಡಬೇಕಿತ್ತು ಎಂದು ಹೇಳಿದರು.

ತಿತಿಮತಿ ಅರಣ್ಯ ಅಂಚಿನಲ್ಲಿರುವ ಈ ನಾಲ್ಕು ಹಾಡಿಗಳಲ್ಲಿ ಜೇನು ಕುರುಬ, ಪಣಿಯೇರ ಯರವ ಮತ್ತು ಪಂಜಾರಿ ಯರವ ಎಂಬ ಮೂರು ಆದಿವಾಸಿ ಸಮುದಾಯಗಳಿಗೆ ಸೇರಿದ 185ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.

ತಲೆಮಾರುಗಳಿಂದ ಇಲ್ಲಿಯೇ ವಾಸಿಸುತ್ತಿರುವ ನಿವಾಸಿಗಳು, ಈಗಷ್ಟೇ ನೈಜ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ. ಈ ಹಿಂದೆ ಪಡಿತರ ಚೀಟಿಯ ಮೂಲಕ ಸಿಗುತ್ತಿದ್ದ ಸೀಮೆಎಣ್ಣೆಯಿಂದ ದೀಪಗಳನ್ನು ಹಚ್ಚುತ್ತಿದ್ದೆವು. ಆದರೆ, ಅರಣ್ಯ ಇಲಾಖೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸಲು ಆರಂಭಿಸಿದ ಬಳಿಕ ಸೀಮೆಎಣ್ಣೆ ಪೂರೈಕೆ ಸ್ಥಗಿತಗೊಂಡಿತು. ಇದರಿಂದ ಮನೆಗಳಲ್ಲಿ ದೀಪ ಹಚ್ಚುವುದಕ್ಕೂ ಪರದಾಡುವಂತಾಯಿತು ಎಂದು ರಾಮು ವಿವರಿಸಿದರು.

ನಂತರ ಹಾಡಿಗಳಿಗೆ ಸೌರ ದೀಪಗಳನ್ನು ಒದಗಿಸಲಾಗಿತ್ತು. ಆದರೆ, ಅವು ಹೆಚ್ಚು ಕಾಲ ಬಾಳಿಕೆ ಬರದೆ ಹಾಳಾದವು. ಇದರಿಂದಾಗಿ ಮಕ್ಕಳಿಗೆ ಓದಲು ತೊಂದರೆಯಾಗುತ್ತಿತ್ತು. ಇದೀಗ ವಿದ್ಯುತ್ ಸಂಪರ್ಕ ದೊರೆತಿರುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.

ಆದರೆ, ಹಾಡಿಗಳಲ್ಲಿರುವ ಯರವ ಸಮುದಾಯದವರು ಇನ್ನೂ ಶಾಶ್ವತ ಮನೆಗಳಿಗಾಗಿ ಕಾಯುತ್ತಿದ್ದಾರೆ. ವಿದ್ಯುತ್ ಮೀಟರ್ ಬೋರ್ಡ್‌ಗಳನ್ನು ಅಳವಡಿಸಲಾಗಿದ್ದರೂ, ಅನೇಕ ಕುಟುಂಬಗಳು ಇಂದಿಗೂ ಟಾರ್ಪಾಲಿನ್‌ನಿಂದ ನಿರ್ಮಿಸಿದ ತಾತ್ಕಾಲಿಕ ಗುಡಿಸಲುಗಳಲ್ಲೇ ವಾಸಿಸುತ್ತಿವೆ.

ಆದಿವಾಸಿ ಸಮುದಾಯಕ್ಕೆ ಸೇರಿದ ಜೇನು ಕುರುಬರಿಗೆ ಐಟಿಡಿಪಿ ಇಲಾಖೆ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲಾಗುತ್ತಿದೆ. ಈ ಹಿಂದೆ ಐಟಿಡಿಪಿ ಇಲಾಖೆಯ ವ್ಯಾಪ್ತಿಯಲ್ಲಿದ್ದ ಪಣಿಯೇರ ಯರವ ಮತ್ತು ಪಂಜಾರಿ ಯರವ ಸಮುದಾಯಗಳನ್ನು ಬಳಿಕ ವಾಲ್ಮೀಕಿ ನಿಗಮಕ್ಕೆ ವರ್ಗಾಯಿಸಲಾಗಿದ್ದು, ಈಗ ಅಲೆಮಾರಿ ನಿಗಮದ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಹೇಳಿದರು.

ಜೇನು ಕುರುಬರಿಗೆ ಆದ್ಯತೆಯ ಮೇರೆಗೆ ಸೌಲಭ್ಯಗಳು ಸಿಗುತ್ತಿವೆ. ಆದರೆ, ಹಾಡಿಯ ಯರವ ಸಮುದಾಯದವರು ಇನ್ನೂ ಶಾಶ್ವತ ಮನೆಗಳಿಗಾಗಿ ಕಾಯುತ್ತಿದ್ದಾರೆ. 2012ರಲ್ಲಿ ಯರವ ಸಮುದಾಯದವರಿಗೆ ಮಂಜೂರಾದ 25ಕ್ಕೂ ಹೆಚ್ಚು ಮನೆಗಳ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆಯುತ್ತಾ, ಇಂದಿಗೂ ನಾವು ನಿಜವಾದ ‘ಅಲೆಮಾರಿಗಳಂತೆ’ ಬದುಕುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಡಿಯಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎಂದು ರಾಮು ಹೇಳಿದರು. ಹಾಲಿ ಶಾಸಕರ ಪ್ರಯತ್ನದಿಂದ ಉತ್ತಮ ರಸ್ತೆ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯುತ್ ಬೆಳಕು ದೊರೆತಂತೆ ಶಾಶ್ವತ ಸೂರಿನ ಕನಸೂ ಶೀಘ್ರದಲ್ಲೇ ನನಸಾಗಬಹುದು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!