ಕೋಲಾರ: ಮದುವೆಯಾಗುವುದಾಗಿ ಭರವಸೆ ನೀಡಿ ಬಳಿಕ ಮದುವೆಗೆ ನಿರಾಕರಿಸಿದ್ದಾರೆ ಎಂದು ಆರೋಪಿಸಿ 25 ವರ್ಷದ ಯುವತಿಯೊಬ್ಬರು ಪ್ರಿಯಕರನ ಮನೆ ಎದುರು ಮೌನ ಪ್ರತಿಭಟನೆ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹನುಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಲೂರು ತಾಲ್ಲೂಕಿನ ಚಿಕ್ಕಕಡತೂರು ಗ್ರಾಮದ ಶಿವರಂಜನಿ (25) ಪ್ರತಿಭಟನೆ ನಡೆಸಿದ ಯುವತಿ. ಹನುಮನಾಯಕನಹಳ್ಳಿ ಗ್ರಾಮದ ಪೃಥ್ವಿರಾಜ್ (24) ಎಂಬ ಯುವಕನ ವಿರುದ್ಧ ಅವರು ಆರೋಪ ಮಾಡಿದ್ದಾರೆ.
ಪೃಥ್ವಿರಾಜ್ ತನನ್ನು ಪ್ರೀತಿಸಿ ಮದುವೆಯಾದುವುದಾಗಿ ಭರವಸೆ ನೀಡಿದ್ದ. ಆದರೆ ಬಳಿಕ ನನ್ನ ಜಾತಿ ವಿಚಾರವಾಗಿ ತಗಾದೆ ತೆಗೆದು ಇದೀಗ ನನ್ನ ಕೈ ಬಿಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಯುವತಿಯ ಈ ಪ್ರತಿಭಟನೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ಪರಿಚಯ, ಪ್ರೀತಿ
ಸಂತ್ರಸ್ಥೆ ಶಿವರಂಜನಿ ಅವರ ಆರೋಪದ ಪ್ರಕಾರ, ಇನ್ಸ್ಟಾಗ್ರಾಂ ಮೂಲಕ ಪೃಥ್ವಿರಾಜ್ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಈ ವೇಳೆ ಪೃಥ್ವಿರಾಜ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಶಿವರಂಜನಿ ಆರೋಪಿಸಿದ್ದಾರೆ.
ಅಲ್ಲದೆ, ಪೃಥ್ವಿರಾಜ್ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದೂ ಅವರು ದೂರಿದ್ದಾರೆ. ಇದರಿಂದ ನ್ಯಾಯಕ್ಕಾಗಿ ಆಗ್ರಹಿಸಿ ಯುವತಿ ಪೃಥ್ವಿರಾಜ್ ಅವರ ಮನೆ ಮುಂದೆ ಕುಳಿತು ಮೌನ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ
ಯುವತಿ ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ತಿಳಿದ ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಅಧಿಕೃತ ಹೇಳಿಕೆ ಹಾಗೂ ಮುಂದಿನ ತನಿಖೆಯ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಯುವತಿ ಮಾಡಿರುವ ಆರೋಪಗಳ ಬಗ್ಗೆ ಪೃಥ್ವಿರಾಜ್ ಅವರ ಪ್ರತಿಕ್ರಿಯೆ ಕೂಡ ಲಭ್ಯವಾಗಿಲ್ಲ.