ಬೆಂಗಳೂರು: ಪ್ರತಿಭಟನೆಗಳಿಗೆ 'ಫ್ರೀಡಂ ಪಾರ್ಕ್' ಅನ್ನು ನಿಗದಿಪಡಿಸಿರುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಬೆಂಗಳೂರು ಪೊಲೀಸರು ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿದ ನಂತರ ಸಿಜೆಪಿ(CJP) ಸದಸ್ಯರು ಮತ್ತು ಬೆಂಬಲಿಗರು ಶುಕ್ರವಾರ ನಗರದ ಟೌನ್ ಹಾಲ್ನಿಂದ 'ತಿರಂಗಾ ಮಾರ್ಚ್' ನಡೆಸಿದರು.
ಆಯೋಜಕರ ಪ್ರಕಾರ, ಇಂದು ಸಂಜೆ 5 ಗಂಟೆಗೆ ಟೌನ್ ಹಾಲ್ನಿಂದ ಪ್ರಾರಂಭವಾದ ತಿರಂಗಾ ಮಾರ್ಚ್, 'ಕ್ವಿಟ್ ಇಂಡಿಯಾ ಸ್ಮಾರಕ'ದ (Quit India Memorial) ಬಳಿ ಕೊನೆಗೊಂಡಿದೆ.
ಟೌನ್ ಹಾಲ್ ಬಳಿ, ತಿರಂಗಾ ಮಾರ್ಚ್ ಸಾಗುವ ದಾರಿಯಲ್ಲಿ ಅಥವಾ ಕ್ವಿಟ್ ಇಂಡಿಯಾ ಸ್ಮಾರಕದ ಬಳಿ ಯಾವುದೇ ರೀತಿಯ ಪ್ರತಿಭಟನೆ ಅಥವಾ ಸಾಂಕೇತಿಕ ಪ್ರತಿಭಟನೆಯನ್ನು ನಡೆಸದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದರು. ಹೀಗಾಗಿ, ತಾವು ಕೇವಲ ಶಾಂತಿಯುತ ಮೆರವಣಿಗೆಯನ್ನು(ಮಾರ್ಚ್) ಮಾತ್ರ ನಡೆಸುತ್ತಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ಪೊಲೀಸ್ ಭದ್ರತೆಯ ನಡುವೆ ಟೌನ್ ಹಾಲ್ನಿಂದ ಈ ಮಾರ್ಚ್ ನಡೆಯಿತು. ಈ ವೇಳೆ, ಸಿಜೆಪಿ ಸದಸ್ಯರು ಒಂದು ರಾಜಕೀಯ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದಾಗ, ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಅವರನ್ನು ಎಚ್ಚರಿಸಿ, ಮಾರ್ಚ್ ಅನ್ನು ಶಾಂತಿಯುತವಾಗಿ ನಡೆಸುವಂತೆ ಸೂಚಿಸಿದರು.
ಆಯೋಜಕರು ಹಂಚಿಕೊಂಡ ಪೊಲೀಸ್ ಅನುಮತಿ ಪತ್ರದ ಪ್ರಕಾರ, ಯಾವುದೇ ರಾಜಕೀಯ ಪಕ್ಷ, ಸಂಘಟನೆ, ಸಮುದಾಯ ಅಥವಾ ವ್ಯಕ್ತಿಯ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಪ್ರತಿಭಟನಾ ಫಲಕಗಳು, ಬ್ಯಾನರ್ಗಳು ಅಥವಾ ಇತರ ವಸ್ತುಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಈ ಮಾರ್ಚ್ನಿಂದ ಸಾರ್ವಜನಿಕರಿಗೆ ಅಥವಾ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆಗಳು, ಮೆರವಣಿಗೆಗಳು, ರ್ಯಾಲಿಗಳು ಹಾಗೂ ಇತರೆ ಚಟುವಟಿಕೆಗಳನ್ನು 'ಫ್ರೀಡಂ ಪಾರ್ಕ್'ಗೆ ಮಾತ್ರ ಸೀಮಿತಗೊಳಿಸಿರುವ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಯೋಜಕರಿಗೆ ಸೂಚಿಸಲಾಗಿತ್ತು.
ಟೌನ್ ಹಾಲ್ ಬಳಿ ಜಮಾಯಿಸುವಾಗ, ಪಾದಯಾತ್ರೆಯ ಸಮಯದಲ್ಲಿ ಅಥವಾ ಕ್ವಿಟ್ ಇಂಡಿಯಾ ಸ್ಮಾರಕದ ಬಳಿ ಮಾರ್ಚ್ ಮುಕ್ತಾಯಗೊಳಿಸುವಾಗ ಹೈಕೋರ್ಟ್ ಆದೇಶದ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಪೊಲೀಸರು ಎಚ್ಚರಿಸಿದ್ದರು.