ಬೆಂಗಳೂರು: ಕರ್ನಾಟಕದಾದ್ಯಂತ ಸಿಹಿ ತಿನಿಸುಗಳ ತಯಾರಿಕೆ ಮತ್ತು ಮಾರಾಟ ಮಳಿಗೆಗಳಲ್ಲಿ ಗುರುವಾರ ನಡೆಸಿದ ವಿಶೇಷ ತಪಾಸಣಾ ಕಾರ್ಯಾಚರಣೆಯ ವೇಳೆ ವ್ಯಾಪಕ ಲೋಪ ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ನಿಯಮ ಉಲ್ಲಂಘಿಸಿದ 10 ಮಂದಿ ಉದ್ಯಮಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ಒಟ್ಟು 80 ಸಿಹಿ ತಿನಿಸುಗಳ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಗಿದೆ.
ಹಬ್ಬದ ಸಂದರ್ಭದಲ್ಲಿ ಜನರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ಉತ್ಪನ್ನಗಳು ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪರವಾನಗಿ ಮತ್ತು ನೋಂದಣಿ) ನಿಯಮಾವಳಿಗಳ ಅನ್ವಯ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ತಪಾಸಣೆಯ ವೇಳೆ ಒಟ್ಟು 125 ಆಹಾರ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಲು ಸಂಬಂಧಪಟ್ಟ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಆಹಾರ ತಯಾರಿಕೆಯಲ್ಲಿ ತೊಡಗಿರುವ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಹೊಂದಿರದಿರುವುದು ಹಾಗೂ ಕೆಲವು ಘಟಕಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಕಡ್ಡಾಯ ಪರವಾನಗಿ ಅಥವಾ ನೋಂದಣಿ ಪಡೆಯದಿರುವುದು ಕೂಡ ತಪಾಸಣೆಯ ವೇಳೆ ಬೆಳಕಿಗೆ ಬಂದಿದೆ.
ಇದರಂತೆ ನಿಯಮ ಉಲ್ಲಂಘಿಸಿರುವ 10 ಆಹಾರ ಉದ್ಯಮಿಗಳ ವಿರುದ್ಧ ಅನ್ವಯವಾಗುವ ಕಾನೂನು ಮತ್ತು ನಿಯಮಾವಳಿಗಳ ಪ್ರಕಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸುವ ಸಿಹಿ ತಿನಿಸುಗಳ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ಮುಂದಿನ ದಿನಗಳಲ್ಲೂ ತಪಾಸಣೆ ಮುಂದುವರಿಯಲಿದೆ.
ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.