ಪ್ರತಿಭಟನಾನಿರತ ರೈತರ ಭೇಟಿ ಮಾಡಿದ ಸಿಎಂ ಡಿಕೆ.ಶಿವಕುಮಾರ್. 
ರಾಜ್ಯ

CM ಡಿಕೆ.ಶಿವಕುಮಾರ್ ಭರವಸೆಗೂ ಜಗ್ಗದ ಕಬ್ಬು ಬೆಳೆಗಾರರು: ಹೋರಾಟ ಮುಂದುವರಿಸಲು ನಿರ್ಧಾರ..!

ಬೆಳೆಗಾರರ ಪಾದಯಾತ್ರೆ ತಾತ್ಕಾಲಿಕವಾಗಿ ನಿಂತಿದ್ದ ಕಿತ್ತೂರಿನಲ್ಲಿ ಶಿವಕುಮಾರ್ ಪ್ರತಿಭಟನಾಕಾರರನ್ನು ಭೇಟಿಯಾಗಿ, ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮಾತುಕತೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಬೆಳಗಾವಿ: ದಸರಾ ಹಬ್ಬದ ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಇತರ ಸಂಬಂಧಪಟ್ಟವರ ಸಭೆ ಕರೆದು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರೂ, ಪ್ರತಿಭಟನಾನಿರತ ಕಬ್ಬು ಬೆಳೆಗಾರರು ಶನಿವಾರ ತಮ್ಮ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಬೆಳೆಗಾರರ ಪಾದಯಾತ್ರೆ ತಾತ್ಕಾಲಿಕವಾಗಿ ನಿಂತಿದ್ದ ಕಿತ್ತೂರಿನಲ್ಲಿ ಶಿವಕುಮಾರ್ ಪ್ರತಿಭಟನಾಕಾರರನ್ನು ಭೇಟಿಯಾಗಿ, ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮಾತುಕತೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಆದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದಲೂ ಸ್ಪಷ್ಟ ಭರವಸೆ ಬೇಕೆಂದು ರೈತರು ಪಟ್ಟು ಹಿಡಿದರು. ಅಕ್ಟೋಬರ್ 18ರಂದು ಕಿತ್ತೂರಿಗೆ ಭೇಟಿ ನೀಡಿ, ರಾಣಿ ಚೆನ್ನಮ್ಮ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡುವಂತೆ ಜೋಶಿ ಅವರಿಗೆ ಆಹ್ವಾನ ನೀಡಿದರು.

ಜೋಶಿ ಅವರು ಕಿತ್ತೂರಿಗೆ ಬಂದು ನಮ್ಮ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರೆ, ಅವರಿಗೆ ಬೃಹತ್ ಹಾರ ಹಾಕಿ ಸ್ವಾಗತಿಸುತ್ತೇವೆ” ಎಂದು ರೈತರು ಹೇಳಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಕಬ್ಬಿನ ಬೆಲೆಗಳು ಏರಿಕೆಯಾಗುತ್ತಿದ್ದರೂ ಬೆಳೆಗಾರರ ಆದಾಯ ಕುಸಿಯುತ್ತಿರುವುದನ್ನು ಸರ್ಕಾರ ಅರ್ಥಮಾಡಿಕೊಂಡಿದೆ ಎಂದು ಹೇಳಿದರು.

ಮೊದಲಿಗೆ ಬೆಂಗಳೂರಿನಲ್ಲಿ ಸಭೆ ನಡೆಸುವ ಪ್ರಸ್ತಾಪ ಮುಂದಿಟ್ಟಿದ್ದ ಅವರು, ಬಳಿಕ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಸಭೆ ನಡೆಸಲು ಒಪ್ಪಿಕೊಂಡರು.

ರೈತ ಪ್ರತಿನಿಧಿಗಳ ಸಮ್ಮುಖದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಮಾತುಕತೆಗೆ ಕರೆಸಿ, ಕಬ್ಬಿನ ಬೆಲೆ ಹಾಗೂ ಸಕ್ಕರೆ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರದ ಅಧಿಕಾರಿಗಳನ್ನೂ ಸಭೆಗೆ ಆಹ್ವಾನಿಸಲಾಗುವುದು. ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾಗುವಾಗ ರೈತ ಪ್ರತಿನಿಧಿಗಳನ್ನೂ ತಮ್ಮೊಂದಿಗೆ ಕರೆದೊಯ್ಯುವುದಾಗಿ ಶಿವಕುಮಾರ್ ಭರವಸೆ ನೀಡಿದರು. ಆದರೆ, ಬೆಳಗಾವಿಯಲ್ಲಿ ನಡೆಯಲಿರುವ ಸಭೆಗೆ ಪ್ರಹ್ಲಾದ್ ಜೋಶಿ ಹಾಜರಾಗುತ್ತಾರೆಯೇ ಎಂಬುದನ್ನು ಅವರು ಖಚಿತಪಡಿಸಲಿಲ್ಲ.

ರೈತರು ಈ ಹೋರಾಟದ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರ ಅಹವಾಲುಗಳು ಸರ್ಕಾರದ ಗಮನಕ್ಕೆ ಬಂದಿವೆ. ಈಗ ಎಲ್ಲ ಸಂಬಂಧಪಟ್ಟವರು ಒಟ್ಟಿಗೆ ಕುಳಿತು ಚರ್ಚಿಸಿ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.

ಈ ಸಮಸ್ಯೆಯನ್ನು ರಾಜ್ಯ ಸರ್ಕಾರವೊಂದೇ ಪರಿಹರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಕ್ಕರೆ ಕಾರ್ಖಾನೆಗಳು, ಬ್ಯಾಂಕ್‌ಗಳು ಮತ್ತು ರೈತರು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಇದೇ ವೇಳೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಒಪ್ಪಿಕೊಂಡ ಅವರು, ಕಾರ್ಖಾನೆಗಳು ತಮ್ಮ ಜವಾಬ್ದಾರಿಗಳನ್ನೂ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಖಾನೆಗಳ ಕಾರ್ಯಾಚರಣೆ ಮುಂದುವರಿಯುವುದನ್ನು ಖಚಿತಪಡಿಸುವುದರ ಜೊತೆಗೆ ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನೂ ಸರ್ಕಾರ ಕಾಪಾಡಬೇಕಿದೆ ಎಂದು ತಿಳಿಸಿದರು.

ಪ್ರತಿಭಟನಾಕಾರರು ಶಾಂತಿ ಕಾಪಾಡಬೇಕು, ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಹಾಗೂ ಮಾತುಕತೆಯ ಮೂಲಕ ವಿವಾದ ಪರಿಹರಿಸಲು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಆದರೆ, ಕಬ್ಬಿಗೆ ನಿಗದಿಪಡಿಸುವ ಬೆಲೆಯ ಬಗ್ಗೆ ಸ್ಪಷ್ಟ ಭರವಸೆ ನೀಡದಿರುವುದು ಹಾಗೂ ಪ್ರಸ್ತಾವಿತ ಸಭೆಯ ದಿನಾಂಕವನ್ನು ಖಚಿತಪಡಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ, ಮುಖ್ಯಮಂತ್ರಿಯವರ ಭರವಸೆಯ ಹೊರತಾಗಿಯೂ ರೈತರು ಹೋರಾಟ ಹಿಂಪಡೆಯಲು ಅವರು ಒಪ್ಪಿಗೆ ನೀಡಿಲ್ಲ. ಇದೀಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸ್ಪಷ್ಟ ಭರವಸೆಗಳು ಸಿಗುವುದನ್ನೇ ಈಗ ರೈತರು ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಪವಿತ್ರ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು..!

ಜಂಟಿ ಮಾಲೀಕತ್ವದ ‘A-eKhata’ ಹೊಂದಿರುವವರಿಗೆ Good News: ಪ್ರತ್ಯೇಕ ಇಖಾತಾ ಪಡೆಯಲು ರಾಜ್ಯ ಸರ್ಕಾರ ಅವಕಾಶ..!

Cockroach Janta Partyಗೆ ಕಾಂಗ್ರೆಸ್ ಹಣಕಾಸು ನೆರವು, ಕರ್ನಾಟಕವೇನು ATM ಆಗಿದೆಯೇ..?

ಭಾರತದ ವಿರುದ್ಧದ ಷಡ್ಯಂತ್ರಗಳನ್ನು ಗಂಭೀರವಾಗಿ ಪರಿಗಣಿಸಿ, ವಿದೇಶಿ ಹಣದ ಹರಿವಿಗೆ ಕಡಿವಾಣ ಹಾಕಿ: ಕೇಂದ್ರಕ್ಕೆ ಸಂಸದ ಬೊಮ್ಮಾಯಿ ಆಗ್ರಹ