ಬಾಗಲಕೋಟೆ: ದಸರಾ ಪ್ರಯುಕ್ತ ಮುಧೋಳದ ವಿನಾಯಕ ನಗರದಲ್ಲಿ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ನೃತ್ಯದ ವೇಳೆ ಚಾಕು ಇರಿದು ಯುವಕನನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತನನ್ನು 25 ವರ್ಷದ ನಿತಿನ್ ನಿಂಬಾಳ್ಕರ್ ಎಂದು ಗುರುತಿಸಲಾಗಿದೆ. ಶ್ರೀನಿವಾಸ ಕದರಿ ಎಂಬಾತ ನಿತಿನ್ ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದ ಶ್ರೀನಿವಾಸ್ ಕದರಿ ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸಿದ್ದಾನೆ. ಈ ವೇಳೆ ಅಲ್ಲಿದ್ದ ನಿತಿನ್ ನಿಂಬಾಳ್ಕರ್, ಶ್ರೀನಿವಾಸ್ಗೆ ಇಲ್ಲಿಂದ ಹೋಗುವಂತೆ ಎಚ್ಚರಿಕೆ ನೀಡಿದ್ದಾನೆ.
ಶ್ರೀನಿವಾಸ್ ಇದ್ಯಾವುದಕ್ಕೆ ಕ್ಯಾರೆ ಎನ್ನದೆ ಗಲಾಟೆ ಮುಂದುವರೆಸಿದ್ದಾನೆ. ಈ ವೇಳೆ ನಿತಿನ್ ಕಪಾಳಕ್ಕೆ ಹೊಡೆದು ಕಳಿಸಿದ್ದಾನೆ. ತಮ್ಮ ಏರಿಯಾಗೆ ಹೋದ ಶ್ರೀನಿವಾಸ್ ಸ್ನೇಹಿತರಾದ ಸಂಪತ್ ಮತ್ತು ಪ್ರದೀಪ್ನನ್ನು ಕರೆದುಕೊಂಡು ಬಂದು ಪುನಃ ನಿತಿನ್ ಜೊತೆ ಜಗಳ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಚಾಕುವಿನಿಂದ ನಿತಿನ್ ಎದೆ, ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾರೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.