ಹಾವೇರಿ: ನವರಾತ್ರಿ ಪ್ರಯುಕ್ತ ರಾಣೇಬೆನ್ನೂರಿನ ದೇವರಗುಡ್ಡದಲ್ಲಿ ನಡೆದ ಐತಿಹಾಸಿಕ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ 'ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್' ಎಂದು ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
ಒಂಬತ್ತು ದಿನಗಳ ಕಾಲ ಉಪವಾಸ ವೃತ ಕೈಗೊಂಡ ಬಳಿಕ ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು 15 ಅಡಿ ಎತ್ತರದ ಬಿಲ್ಲನ್ನೇರಿ ವರ್ಷದ ಕಾರ್ಣಿಕ ನುಡಿದಿದ್ದಾರೆ. ಗೊರವಯ್ಯನ ಕಾರ್ಣಿಕ ನುಡಿ ಭಕ್ತರ ಗಮನ ಸೆಳೆದಿದೆ. ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ಭವಿಷ್ಯವಾಣಿಯನ್ನು ಹಲವು ಈ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ್ದಾರೆ.
'ಕೆಂಪುಕೋಟೆ' ಎಂಬ ಉಲ್ಲೇಖವಿರುವುದರಿಂದ ದೇಶದಲ್ಲಿ ಅಥವಾ ದೆಹಲಿ ಮಟ್ಟದಲ್ಲಿ ಆಡಳಿತ ವ್ಯವಸ್ಥೆ ಬಲಿಷ್ಠವಾಗಲಿದೆ ಹಾಗೂ ಪ್ರಮುಖ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಇದು ಸೂಚಿಸುತ್ತದೆ. ಈ ಬಾರಿ ಮುಂಗಾರು ಮಳೆಯ ಕೊರತೆಯಾಗಿದ್ದು 'ಮುತ್ತು ಚೆಲ್ಲಿತ್ತಲೇ' ಎಂಬ ನುಡಿಯು ದೇಶ ಮತ್ತು ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿ, ಜನರಲ್ಲಿ ಸಂಪತ್ತು ಮತ್ತು ನೆಮ್ಮದಿ ಹೆಚ್ಚಾಗಲಿದೆ ಎಂಬುದರ ಸಂಕೇತವಾಗಿದೆ.