

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ರೀಲ್ಸ್ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ರೀಲ್ಸ್ ಮಾಡುವವರಿಗೆ ಸರ್ಕಾರದಿಂದ ವಿಶೇಷ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ಯುವಕ, ಯುವತಿಯರು ದಸರಾ ಸಂಭ್ರಮದ ಬಗ್ಗೆ ರೀಲ್ಸ್ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ. ಅತ್ಯುತ್ತಮ 100 ರೀಲ್ಸ್‌ಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಉತ್ತಮವಾದ ನೂರು ರೀಲ್ಸ್ ಆಯ್ಕೆ ಮಾಡಿ ಪ್ರಶಸ್ತಿ ನೀಡುತ್ತೇವೆ. ಮೈಸೂರು ದಸರಾದ ದೀಪಾಲಂಕಾರ, ಜಂಬೂಸವಾರಿ, ಆಹಾರ ಮೇಳ ಯಾವುದೇ ಇರಲಿ. ಯಾವುದೇ ರೀಲ್ ಕಳುಹಿಸಿದ್ರು, ಆಯ್ಕೆ ಮಾಡಿ 100 ಅತ್ಯುತ್ತಮ ರೀಲ್ಸ್‌ಗೆ ಬಹುಮಾನ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.
ದಸರಾ ಆರಂಭದಿಂದ ಅಂತ್ಯದವರೆಗೆ ನಿಮಗೆ ಏನೆಲ್ಲಾ ಇಷ್ಟವಾಯಿತೋ ಅದನ್ನು ರೀಲ್ಸ್ ಮಾಡಿ. ‘ಮೈಸೂರು ದಸರಾ- 2026’ ಎಂದು ಟ್ಯಾಗ್ ಮಾಡಲಾದ ಅತ್ಯುತ್ತಮ 100 ರೀಲ್ಸ್‌ಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಈಗಾಗಲೇ ನಾನೂ ರೀಲ್ಸ್ ಮಾಡಿದ್ದೇನೆ, ನೀವೂ ಉತ್ತಮವಾಗಿ ರೀಲ್ಸ್ ಮಾಡಿ” ಎಂದು ಸಿಎಂ ಕರೆ ನೀಡಿದರು.
ದಸರಾ ದೀಪಾಲಂಕಾರ 10 ದಿನ ವಿಸ್ತರಣೆ
ಇದೇ ವೇಳೆ ದಸರಾ ಕಾರ್ಯಕ್ರಮಗಳು ಹಾಗೂ ಮೈಸೂರಿನ ದೀಪಾಲಂಕಾರದ ಕುರಿತು ಮಾತನಾಡಿದ ಸಿಎಂ, ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಲೈಟಿಂಗ್ಸ್ ವೀಕ್ಷಿಸಿದ್ದೇನೆ. ನಿತ್ಯ ಲಕ್ಷಾಂತರ ಜನರು ಈ ಅದ್ಭುತ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ದಸರಾ ಲೈಟಿಂಗ್ಸ್ ಅನ್ನು ಇನ್ನೂ 10 ದಿನಗಳ ಕಾಲ ವಿಸ್ತರಿಸಲು ತೀರ್ಮಾನಿಸಿದ್ದೇವೆ ಎಂದರು.