

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಪ್ರಮುಖ ಆಕರ್ಷಣೆಯಾಗಿದ್ದ ಭಾರತೀಯ ವಾಯುಪಡೆಯ ‘ಸೂರ್ಯ ಕಿರಣ್ ಏರೋಬ್ಯಾಟಿಕ್ಸ್’ ಸಾಹಸ ಪ್ರದರ್ಶನವು ಹವಾಮಾನ ವೈಪರೀತ್ಯದಿಂದಾಗಿ ಭಾನುವಾರ ಅರ್ಧದಲ್ಲೇ ಸ್ಥಗಿತಗೊಂಡಿತು.
ಇಂದು ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ದಸರಾ ವೈಮಾನಿಕ ಪ್ರದರ್ಶನ ಆರಂಭವಾದ ಕೆಲವೇ ನಿಮಿಷಗಳಲ್ಲಿ ಹವಾಮಾನ ವೈಪರೀತ್ಯದ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿತು. ಪರಿಣಾಮ ಏರ್ ಶೋ ವೀಕ್ಷಿಸಲು ಟಿಕೆಟ್ ಪಡೆದು ಬೆಳಗ್ಗೆಯಿಂದಲೇ ಗಂಟೆಗಟ್ಟಲೆ ಕಾದುಕುಳಿತಿದ್ದ ಸಾವಿರಾರು ಜನರಿಗೆ ತೀವ್ರ ನಿರಾಸೆಯಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ನಿಗದಿತ ಸಮಯಕ್ಕೆ ಆಗಮಿಸಿದ ಒಟ್ಟು 9 ವಿಮಾನಗಳು ಕೇವಲ ಮೂರು ಸುತ್ತುಗಳ ಹಾರಾಟವನ್ನು ಮಾತ್ರ ನಡೆಸಿದವು. ಬಳಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ವಾಪಸ್ ಬೆಂಗಳೂರಿನ ಯೆಲಹಂಕ ವಾಯುನೆಲೆಗೆ ಮರಳಿದವು.
ಆದರೆ, ನಾಳೆ ಹವಾಮಾನ ಸುಧಾರಿಸಿದರೆ ಪೂರ್ಣ ಪ್ರಮಾಣದ ವೈಮಾನಿಕ ಪ್ರದರ್ಶನ ನಡೆಸಲಾಗುವುದು ಎಂದು ವಾಯುಪಡೆ ಸಿಬ್ಬಂದಿ ಭರವಸೆ ನೀಡಿದ್ದಾರೆ.