ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂತಿಮ ಘಟ್ಟವಾದ ಐತಿಹಾಸಿಕ ಜಂಬೂಸವಾರಿಗೆ ಬುಧವಾರ ಮಧ್ಯಾಹ್ನ 4 ಗಂಟೆಗೆ ಚಾಲನೆ ನೀಡಲಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್ ಒಡೆಯರ್ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು.
ಇಂದು ಮೈಸೂರು ಅರಮನೆ ಅಂಗಳದಲ್ಲಿ ತಾಯಿ ಚಾಮುಂಡೇಶ್ವರಿ ವಿರಾಜಮಾನವಾಗಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜುಂಬೂಸವಾರಿಗೆ ಚಾಲನೆ ನೀಡಿದರು.
ಈ ವೇಳೆ ಸಚಿವ ಶಿವರಾಜ್ ತಂಗಡಗಿ, ಕೇರಳ ಸಿಎಂ ಸತೀಶನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನಾಡ ದೇವತೆ ಚಾಮುಂಡಿ ತಾಯಿ ವಿರಾಜಮಾನವಾಗಿರುವ 750 ಕೆಜಿಯ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಪ್ರಶಾಂತ ಆನೆ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿತು. ನಿಶಾನೆ, ಕುಮ್ಕಿ ಆನೆಗಳು ಪ್ರಶಾಂತನಿಗೆ ಸಾಥ್ ನೀಡಿದವು.
ಇದೇ ಮೊದಲ ಬಾರಿಗೆ ಪ್ರಶಾಂತ ಆನೆ ಚಿನ್ನದ ಅಂಬಾರಿ ಹೊತ್ತಿದ್ದು, ಜಂಬೂಸವಾರಿ ಮೆರವಣಿಗೆಯೊಂದಿಗೆ ವಿವಿಧ ಕಲಾತಂಡಗಳು, ಸ್ಥಬ್ಧಚಿತಗಳು ಭಾಗಿಯಾಗಿವೆ.
ಜಂಬೂಸವಾರಿ ಮೆರವಣಿಗೆ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೂ ಸಾಗಲಿದೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ನಟ-ನಟಿಯರು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ಮೈಸೂರು ದಸರಾ ಉತ್ಸವ ಸಮಿತಿಯ ವಿಶೇಷ ಆಹ್ವಾನದ ಮೇರೆಗೆ ವಿಶ್ವದ 11 ವಿವಿಧ ದೇಶಗಳ ರಾಯಭಾರಿಗಳು ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ಗಣ್ಯರು ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದು, ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡಿದ್ದಾರೆ.
ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಅನಾವರಣಕ್ಕಾಗಿ ಒಟ್ಟು 60 ಸ್ತಬ್ಧಚಿತ್ರಗಳು ಹಾಗೂ 50ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಈ ಬಾರಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿವೆ.