CM ಡಿಕೆಶಿಯಿಂದ ಕೇಂದ್ರ ಸಚಿವ ಭೂಪೇಂದರ್ ಯಾದವ್ ಭೇಟಿ 
ರಾಜ್ಯ

ಶರಾವತಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ: CM ಡಿಕೆಶಿಯಿಂದ ಕೇಂದ್ರ ಸಚಿವ ಭೂಪೇಂದರ್ ಯಾದವ್ ಭೇಟಿ

ಪ್ರಸ್ತಾವಿತ 'ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ' (Sharavathy Pumped Storage Project) ಮತ್ತು 'ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ'ಗೆ ವನ್ಯಜೀವಿ ಮಂಡಳಿಯಿಂದ ಅನುಮೋದನೆ ನೀಡುವಂತೆ ಕೋರಿದರು.

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿಯಾದರು.

ಈ ವೇಳೆ, ಪ್ರಸ್ತಾವಿತ 'ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ' (Sharavathy Pumped Storage Project) ಮತ್ತು 'ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ'ಗೆ ವನ್ಯಜೀವಿ ಮಂಡಳಿಯಿಂದ ಅನುಮೋದನೆ ನೀಡುವಂತೆ ಕೋರಿದರು.

ಇಂದು ಪರ್ಯಾವರಣ ಭವನದಲ್ಲಿ ನಡೆದ ಈ ಸಭೆಯಲ್ಲಿ, ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು 'ಪರಿಸರ ಸೂಕ್ಷ್ಮ ವಲಯ' (Ecologically Sensitive Area - ESA) ಎಂದು ಘೋಷಿಸುವ ಪ್ರಸ್ತಾವನೆ ಸೇರಿದಂತೆ ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಕೇಂದ್ರ ಸಚಿವರೊಂದಿಗೆ ಮುಖ್ಯಮಂತ್ರಿಗಳು ಚರ್ಚಿಸಿದರು.

ರಾಜ್ಯ ಸರ್ಕಾರವು ಸ್ಥಳ ಪರಿಶೀಲನೆ (physical survey) ನಡೆಸಿ, ಉನ್ನತ ಮಟ್ಟದ ಸಮಿತಿಯ ವರದಿಯನ್ನು ಸಲ್ಲಿಸುವವರೆಗೂ, ಕೇಂದ್ರ ಸರ್ಕಾರವು ಏಳನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಎಂದು ಸಿಎಂ ಮನವಿ ಮಾಡಿದರು.

ಅನುಮತಿಗಾಗಿ ಕಾಯುತ್ತಿರುವ ಈ ಎರಡು ಯೋಜನೆಗಳ ಪ್ರಸ್ತಾವನೆಗಳನ್ನು 'ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ'ಯು (SC-NBWL) ಆದಷ್ಟು ಬೇಗ ಪರಿಗಣಿಸಬೇಕೆಂದು ರಾಜ್ಯ ಸರ್ಕಾರ ಕೋರಿದೆ.

2,000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಸ್ಥಾಯಿ ಸಮಿತಿಯ ಹಲವು ಸಭೆಗಳಲ್ಲಿ ಚರ್ಚೆಗೊಳಗಾಗಿದ್ದರೂ, ನಿರ್ಧಾರವನ್ನು ಮುಂದೂಡಲಾಗಿತ್ತು. ಫೆಬ್ರವರಿ 28, 2026 ರಂದು ನಡೆದ ಸಮಿತಿಯ 89ನೇ ಸಭೆಯಲ್ಲಿ, ತಾಂತ್ರಿಕ ಸಮಿತಿಯು ಎತ್ತಿದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಯಿಂದ ಸ್ಪಷ್ಟನೆಗಳನ್ನು ಕೇಳಲಾಗಿತ್ತು. ಜೊತೆಗೆ, ಬೆಂಗಳೂರಿನ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್' (NIAS) ನೀಡುವ ವರದಿಯನ್ನೂ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಇನ್ನು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ಪ್ರಸ್ತಾವಿತ ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಯ ಭೂತಾಂತ್ರಿಕ ತನಿಖೆಗಾಗಿ (geotechnical investigations), ಕಾವೇರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ 20 ಕೊಳವೆ ಬಾವಿಗಳನ್ನು (boreholes) ಕೊರೆಯುವ ಪ್ರಸ್ತಾವನೆ ಇದೆ. ಜುಲೈ 1, 2026 ರಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಲಾದ ಈ ಪ್ರಸ್ತಾವನೆಯು ಒಟ್ಟು 0.0000352 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ಈ ಪ್ರಸ್ತಾವನೆಯು ಕೇವಲ ಸಮೀಕ್ಷೆ ಮತ್ತು ತನಿಖಾ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದು, ಈ ಹಂತದಲ್ಲಿ ಸಂರಕ್ಷಿತ ಪ್ರದೇಶದ ಬಳಕೆಯನ್ನು (diversion) ಬದಲಾಯಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳ ಕುರಿತು ಸಚಿವಾಲಯವು ಹೆಚ್ಚುವರಿ ಮಾಹಿತಿಯನ್ನು ಕೋರಿದ್ದು, ಅದನ್ನು ಶೀಘ್ರದಲ್ಲೇ ಒದಗಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಸಕ್ಕರೆ ಕಾರ್ಖಾನೆಗೆ ವಿನಾಯಿತಿ ಕೋರಿಕೆ

ಬೆಳಗಾವಿಯ 'ಇಕೋ ಕೇನ್ ಶುಗರ್ ಎನರ್ಜಿ ಲಿಮಿಟೆಡ್' Eco Cane Sugar Energy Limited) ಕಾರ್ಖಾನೆಯು 2016ಕ್ಕಿಂತ ಮೊದಲು ಸ್ಥಾಪನೆಯಾಗಿರುವುದರಿಂದ ಅದನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಕೈಬಿಡಬೇಕೆಂದು ರಾಜ್ಯ ಸರ್ಕಾರ ಕೋರಿದೆ.

ಈ ಕಾರ್ಖಾನೆಯು 2016 ಕ್ಕಿಂತ ಮೊದಲೇ ಸ್ಥಾಪನೆಯಾಗಿದ್ದು, ಇದನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಿದರೆ ಅಲ್ಲಿನ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ

ಪ್ರಧಾನಿ ಮೋದಿ ನಿವಾಸದ ಸಮೀಪವಿರುವ ಮಸೀದಿಗೆ ತೆರವು ನೋಟಿಸ್; ಕೇಂದ್ರದ ವಿರುದ್ಧ ಮೆಹಬೂಬಾ ಮುಫ್ತಿ ಕೆಂಡಾಮಂಡಲ

ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ!

India vs New Zealand: ಭುವಿ ಭರ್ಜರಿ ಕಂಬ್ಯಾಕ್; ವಿಶ್ವ ದಾಖಲೆ ಬರೆದ 'ಸ್ವಿಂಗ್ ಸುಲ್ತಾನ್'!

ರಾಜ್ಯದಲ್ಲಿ ಮಾಂಜಾಗೆ ಮತ್ತೊಂದು ಬಲಿ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕತ್ತು ಸೀಳಿದ ಗಾಳಿಪಟದ ದಾರ!