

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅದ್ದೂರಿಯಾಗಿ ನಡೆದು ನಿನ್ನೆ ವಿಜಯದಶಮಿ ಸಂಭ್ರಮಾಚರಣೆಯೊಂದಿಗೆ ತೆರೆ ಬಿದ್ದಿದೆ.
ನಿನ್ನೆ ಅಪರಾಹ್ನ ಮೈಸೂರು ಅರಮನೆ ಮುಂದೆ ದಸರಾ ಜಂಬೂಸವಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತೆರಳುವಾಗ ನಂದಿ ಧ್ವಜಕಂಬದ ಪೂಜೆಗೆ ಹೋಗಲು ರಾಜ್ಯ ಸರ್ಕಾರದ ಮೂವರು ಸಚಿವರನ್ನು ಎಸ್ ಪಿ ರಿಷ್ಯಂತ್ ತಡೆದ ಘಟನೆ ವ್ಯಾಪಕ ಸುದ್ದಿಯಾಗಿದೆ.
ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ ಹಾಗೂ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲು ಸಿಎಂ ಡಿಕೆ ಶಿವಕುಮಾರ್ ವೇದಿಕೆಯತ್ತ ಹೊರಟಿದ್ದರು. ಅವರ ಹಿಂದೆಯೇ ಕನ್ನಡ ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ, ಮುಜರಾಯಿ ಸಚಿವ ಕೆಎಸ್ ಬಸವಂತಪ್ಪ ಹಾಗೂ ಕೃಷಿ ಸಚಿವ ಪಿಎಂ ನರೇಂದ್ರ ಸ್ವಾಮಿ ಕೂಡ ತೆರಳಿದ್ದರು.
ಹೀಗೆ ಹೋಗುವಾದ ಸ್ಥಳದಲ್ಲಿದ್ದ ಎಸ್ ಪಿ ರಿಷ್ಯಂತ್ ಸಿಎಂ ತೆರಳಿದ ಬಳಿಕ ಹಿಂಬದಿಯಲ್ಲಿದ್ದ ಸಚಿವರನ್ನು ತಡೆದು ಅಡ್ಡಗಟ್ಟಿ ನೀವು ಹೋಗೋದಿಕ್ಕೆ ಪರ್ಮಿಷನ್ ಇಲ್ಲ ಸರ್ ಎಂದರು.
ಪೊಲೀಸ್ ಅಧಿಕಾರಿ ಅಡ್ಡಗಟ್ಟಿದ ಕೂಡಲೇ ಶಿವರಾಜ ತಂಗಡಗಿ ನಾನು ಕಲ್ಚರಲ್ ಮಿನಿಸ್ಟರ್ ನನ್ನ ಬಿಡಪ್ಪಾ ಎಂದು ಕೈ ಸರಿಸಿ ಮುಂದೆ ಹೋದರು. ಅವರ ಹಿಂದೆ ಇದ್ದ ಸಚಿವ ಬಸವಂತಪ್ಪ, ನರೇಂದ್ರ ಸ್ವಾಮಿಯವರನ್ನು ಪೊಲೀಸ್ ಅಧಿಕಾರಿ ತಡೆದರು. ಆಗ ಸಿಎಂ ತಿರುಗಿ ಸೂಚನೆ ನೀಡುತ್ತಿದ್ದಂತೆ ಪೊಲೀಸರು ಸುಮ್ಮನಾಗಿ ಬಿಟ್ಟರು. ಈ ಘಟನೆಗೆ ವಿಪಕ್ಷದವರು ಸರ್ಕಾರವನ್ನು ಟೀಕಿಸಿದ್ದಾರೆ.
ಈ ಬಗ್ಗೆ ಇಂದು ದೆಹಲಿಗೆ ತೆರಳುವ ಮುನ್ನ ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ಘಟನೆ ನನ್ನ ಗಮನಕ್ಕೆ ಬಂದಿದೆ, ಅದು ಹೇಗಾಯಿತು, ಏಕಾಯಿತು ಎಂದು ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ, ಅವರು ಪರಿಶೀಲಿಸಿದ ನಂತರ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುತ್ತೇವೆ ಎಂದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರೊಂದಿಗೆ ಅಧಿಕೃತ ಸಭೆಗಳಲ್ಲಿ ಪಾಲ್ಗೊಳ್ಳಲು ಇಂದು ದೆಹಲಿಗೆ ತೆರಳಿದ್ದಾರೆ.
ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ಮುಖ್ಯಮಂತ್ರಿಗಳ ಪ್ರವಾಸದ ವೇಳಾಪಟ್ಟಿಯ ಪ್ರಕಾರ, ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಹಾಗೂ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಈ ಪ್ರವಾಸದ ವೇಳೆ ಮುಖ್ಯಮಂತ್ರಿ ಅವರು ಕಾಂಗ್ರೆಸ್ನ ಹೈಕಮಾಂಡ್ ನಾಯಕರನ್ನೂ ಭೇಟಿಯಾಗುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.