ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ ಆಡಳಿತ ಪಕ್ಷದ ಸಚಿವರು ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿರುವ ವರದಿಯಾಗಿದೆ.
ದಸರಾ ಜಂಬೂಸವಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತೆರಳುವಾಗ ರಾಜ್ಯ ಸರ್ಕಾರದ ಮೂವರು ಸಚಿವರು ಪರದಾಡಿದ ಘಟನೆ ನಡೆದಿದೆ. ಸಚಿವನ್ನು ಪೊಲೀಸ್ ಅಧಿಕಾರಿ ತಡೆ ಹಿಡಿದಿದ್ದು, ಶಿವರಾಜ ತಂಗಡಗಿ ಕೂಡಲೇ ನಾನು ಕಲ್ಚರಲ್ ಮಿನಿಸ್ಟರಪ್ಪಾ ಬಿಡಪಾ ಎಂದು ಪೊಲೀಸ್ ಮೇಲೆ ಗರಂ ಆದರು.
ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ ಹಾಗೂ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆಗೆ ಸಿಎಂ ಡಿಕೆ ಶಿವಕುಮಾರ್ ವೇದಿಕೆಯತ್ತ ಹೊರಟಿದ್ದರು. ಅವರ ಹಿಂದೆಯೇ ಕನ್ನಡ ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ, ಮುಜರಾಯಿ ಸಚಿವ ಕೆಎಸ್ ಬಸವಂತಪ್ಪ ಹಾಗೂ ಕೃಷಿ ಸಚಿವ ಪಿಎಂ ನರೇಂದ್ರ ಸ್ವಾಮಿ ಕೂಡ ಆಗಮಿಸಿದರು. ಸ್ಥಳದಲ್ಲಿದ್ದ ಉನ್ನತ ದರ್ಜೆಯ (ಐಪಿಎಸ್) ಪೊಲೀಸ್ ಅಧಿಕಾರಿಯು ಸಿಎಂ ತೆರಳಿದ ಬಳಿಕ ಹಿಂಬದಿಯಲ್ಲಿದ್ದ ಸಚಿವರನ್ನು ತಡೆದರು. ಅಡ್ಡಗಟ್ಟಿ ಅನುಮತಿ ಇಲ್ಲ ಸರ್ ಎಂದರು.
ಪೊಲೀಸ್ ಅಧಿಕಾರಿ ಅಡ್ಡಗಟ್ಟಿದ ಕೂಡಲೇ ಶಿವರಾಜ ತಂಗಡಗಿ "ನಾನು ಕಲ್ಚರಲ್ ಮಿನಿಸ್ಟರಪ್ಪಾ" ಎಂದು ಕೈ ಸರಿಸಿ ಮುಂದೆ ಹೋದರು. ಆ ಬಳಿಕ ಸಚಿವ ಬಸವಂತಪ್ಪ, ನರೇಂದ್ರ ಸ್ವಾಮಿಯವರನ್ನು ಅಡ್ಡ ಹಾಕಿದರು. ಕೂಡಲೇ ಸಿಎಂ ತಿರುಗಿ ಸೂಚನೆ ನೀಡುತ್ತಿದ್ದಂತೆ ಪೊಲೀಸರು ಸುಮ್ಮನಾದರು. ಅಧಿಕಾರಿಯ ಮುಖವನ್ನೇ ದಿಟ್ಟಿಸಿ ನೋಡುತ್ತಾ ಸಚಿವರು ಮುಂದೆ ಸಾಗಿದರು.
ಸಚಿವರನ್ನು ಪೊಲೀಸರು ಅಡ್ಡಗಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಚಿವರುಗಳಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಇನ್ನು ಸಚಿವರ ಹಿಂಬಾಲಕರು, ಪೊಲೀಸರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.