ಮನೆಗಳಿಗೆ ಬೀಗ ಹಾಕಿರುವುದು. 
ರಾಜ್ಯ

ಗ್ರಾಮೀಣ ಭಾಗದಲ್ಲಿ ಜೀವ ಹಿಂಡುತ್ತಿರುವ ಬರಗಾಲ: ಹೊಟ್ಟೆಪಾಡಿಗಾಗಿ ನಗರಗಳತ್ತ ಮುಖ ಮಾಡಿದ ಕುಟುಂಬಗಳು..!

ಬೆಳೆ ನಷ್ಟ ಮತ್ತು ಆದಾಯದ ಕೊರತೆಯಿಂದ ಬದುಕು ನಡೆಸುವುದೇ ಕಷ್ಟವಾಗಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಉದ್ಯೋಗ ಅರಸಿ ಬೆಂಗಳೂರು, ಹೈದರಾಬಾದ್‌, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಉಳಿಯುವಂತಾಗಿದೆ.

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಗಾಲದ ಪರಿಸ್ಥಿತಿ ಗ್ರಾಮೀಣ ಭಾಗದ ಜನರ ಜೀವನವನ್ನು ತಲ್ಲಣಗೊಳಿಸಿದೆ. ಹಳ್ಳಿಗಳಲ್ಲಿ ಉದ್ಯೋಗ ಮತ್ತು ಕುಡಿಯುವ ನೀರಿಲ್ಲದೆ ಕಂಗಾಲಾದ ನೂರಾರು ಕುಟುಂಬಗಳು ಮನೆಗಳಿಗೆ ಬೀಗ ಹಾಕಿ, ಜೀವನೋಪಾಯಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ಪುಟ್ಪಕ್ ಗ್ರಾಮದಲ್ಲಿ ತೀವ್ರ ಬರದಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ.

ಬೆಳೆ ನಷ್ಟ ಮತ್ತು ಆದಾಯದ ಕೊರತೆಯಿಂದ ಬದುಕು ನಡೆಸುವುದೇ ಕಷ್ಟವಾಗಿರುವ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಉದ್ಯೋಗ ಅರಸಿ ಬೆಂಗಳೂರು, ಹೈದರಾಬಾದ್‌, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಉಳಿಯುವಂತಾಗಿದೆ.

ಗ್ರಾಮದಲ್ಲಿರುವ ನಾಲ್ಕು ಕೊಳವೆಬಾವಿಗಳ ಪೈಕಿ ಈಗಾಗಲೇ ಒಂದು ಬತ್ತಿಹೋಗಿದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಉಳಿದ ಕೊಳವೆಬಾವಿಗಳಲ್ಲೂ ನೀರು ಸಿಗದಂತಾಗಬಹುದು ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

70 ವರ್ಷದ ಮರೇಪ್ಪ ಅವರು ಮಾತನಾಡಿ, ಗ್ರಾಮದ ಪರಿಸ್ಥಿತಿ 1972ರ ಬರಗಾಲಕ್ಕಿಂತಲೂ ಭೀಕರವಾಗಿದೆ. ಇದು 1972ರ ಬರಗಾಲಕ್ಕಿಂತಲೂ ಮೀರಿದ ಸಂಕಷ್ಟ ಎಂದು ಅವರು ಸ್ಥಳೀಯ ಭಾಷೆಯಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳೂ ಬರದಿಂದ ತತ್ತರಿಸಿರುವುದರಿಂದ ಬೇರೆಡೆ ನೀರು ಹುಡುಕುವುದೂ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಒಬ್ಬ ವಯಸ್ಕ ವ್ಯಕ್ತಿಗೆ ದಿನಕ್ಕೆ ಕುಡಿಯಲು ಸುಮಾರು ನಾಲ್ಕು ಲೀಟರ್ ನೀರು ಹಾಗೂ ಇತರ ಗೃಹಬಳಕೆಯ ಉದ್ದೇಶಗಳಿಗೆ ಸುಮಾರು 125 ಲೀಟರ್ ನೀರು ಅಗತ್ಯವಿದೆ. ಆದರೆ, ಸದ್ಯ ಕೊಳವೆಬಾವಿಗಳಿಂದ ಒಬ್ಬರಿಗೆ ದಿನಕ್ಕೆ ಸುಮಾರು 60 ಲೀಟರ್ ನೀರು ಮಾತ್ರ ಲಭ್ಯವಾಗುತ್ತಿದೆ.

ಪುಟ್ಪಕ್ ಗ್ರಾಮ ಪಂಚಾಯಿತಿಯ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ಮಾತನಾಡಿ, ಗ್ರಾಮದ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.

45 ವರ್ಷದ ಪಾರ್ವತಮ್ಮ ಗುರ್ರಾಳ್ ಅವರು ಏಳು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದು, ನಡೆಯಲು ವಾಕರ್‌ನ ಸಹಾಯ ಪಡೆಯುವ ಅವರು, ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ.

ನನ್ನ ಹಿರಿಯ ಮಗ ಪತ್ನಿಯೊಂದಿಗೆ ಮುಂಬೈಗೆ ಕೂಲಿ ಕೆಲಸಕ್ಕಾಗಿ ಹೋಗಿದ್ದಾನೆ. ಆದರೆ, ಆತ ನಮಗೆ ಹಣ ಕಳುಹಿಸುವುದಿಲ್ಲ. ಕಿರಿಯ ಮಗನಿಗೆ ಕೇವಲ 14 ವರ್ಷ. ಅವನು ಶಾಲೆಗೆ ಹೋಗುತ್ತಾನೆ. ಜತೆಗೆ, ಕುಟುಂಬದ ಖರ್ಚು ನಿಭಾಯಿಸಲು ಸಣ್ಣಪುಟ್ಟ ಕೆಲಸಗಳನ್ನೂ ಮಾಡುತ್ತಾನೆ ಎಂದು ತಮ್ಮ ಸಂಕಷ್ಟವನ್ನು ವಿವರಿಸಿದ್ದಾರೆ.

ಗ್ರಾಮದ ಬಹುತೇಕ ಕುಟುಂಬಗಳು ಎರಡು ಅಥವಾ ಮೂರು ಎಕರೆಗಳಷ್ಟು ಸಣ್ಣ ಪ್ರಮಾಣದ ಜಮೀನು ಹೊಂದಿವೆ. ಕೃಷಿಯಿಂದ ಬರುವ ಆದಾಯ ಅಷ್ಟಕ್ಕಷ್ಟೇ ಇರುವುದರಿಂದ ಅನೇಕರು ಉದ್ಯೋಗ ಅರಸಿ ಹೈದರಾಬಾದ್, ಬೆಂಗಳೂರು ಮತ್ತು ಮುಂಬೈ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬರದ ತೀವ್ರತೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪುಟ್ಪಕ್ ಗ್ರಾಮದಲ್ಲಿ ಸುಮಾರು 5,000 ಮತದಾರರಿದ್ದು, ಅವರಲ್ಲಿ ಸುಮಾರು 3,500 ಮಂದಿ ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ. ಇದರಿಂದ ವಯಸ್ಸಾದ ತಂದೆ-ತಾಯಿಗಳು ಹಾಗೂ ಶಾಲೆಗೆ ಹೋಗುವ ಮಕ್ಕಳು ಗ್ರಾಮದಲ್ಲೇ ಉಳಿಯುವಂತಾಗಿದೆ. ಕೆಲವು ಕುಟುಂಬಗಳು ಮಕ್ಕಳನ್ನೂ ತಮ್ಮೊಂದಿಗೆ ಕರೆದುಕೊಂಡು ಗ್ರಾಮ ತೊರೆದಿವೆ.

ಗ್ರಾಮದ ಪ್ರಮುಖ ಬೆಳೆಗಳೆಂದರೆ ತೊಗರಿ, ಹತ್ತಿ ಮತ್ತು ಶೇಂಗಾ. ಈ ಬೆಳೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಗುರುಮಿಟ್ಕಲ್ ತಾಲ್ಲೂಕಿನ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವರದ್ ತಿಳಿಸಿದ್ದಾರೆ.

ಮುಂದಿನ 15 ದಿನಗಳಲ್ಲಿ ಮಳೆಯಾದರೆ ಶೇ.30ರಿಂದ 40ರಷ್ಟು ಇಳುವರಿ ದೊರೆಯುವ ಸಾಧ್ಯತೆಯಿದೆ. ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅವರು ಹೇಳಿದ್ದಾರೆ. ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡಿರುವ ರೈತರಿಗೆ ವಿಮಾ ಪರಿಹಾರ ದೊರೆಯಲಿದೆ ಎಂದೂ ತಿಳಿಸಿದ್ದಾರೆ.

ಪುಟ್ಪಕ್ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಪುಟ್ಪಾಕ್ ತಾಂಡಾ (ಜವಾಹರನಗರ)ದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿನ ಶೇ.70ರಷ್ಟು ವಯಸ್ಕರು ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ವಲಸೆ ಹೋಗಿದ್ದಾರೆ.

ಇಬ್ಬರು ಮಕ್ಕಳ ತಾಯಿ ಸಂಗೀತಾ ಅವರು ಪತಿ ರವಿಯೊಂದಿಗೆ ಕೆಲಸ ಹುಡುಕಿಕೊಂಡು ಮುಂಬೈಗೆ ತೆರಳಿದ್ದಾರೆ. ತಮ್ಮ ಮಕ್ಕಳನ್ನು ತಾಯಿ ಬಾದ್ಲಿಬಾಯಿ ಮತ್ತು ಅತ್ತೆ ಶಾಂತಿಬಾಯಿ ಅವರ ಆರೈಕೆಯಲ್ಲಿ ಬಿಟ್ಟು ಹೋಗಿದ್ದಾರೆ. ತಾಂಡಾದ ಹೊಲಗಳು ಕೃಷಿ ಚಟುವಟಿಕೆಗಳಿಲ್ಲದೆ ಪಾಳು ಬಿದ್ದಿವೆ.

ಬದುಕು ಸಾಗಿಸಲು ರವಿ ಮತ್ತು ಸಂಗೀತಾ ಅವರಿಗೆ ವಲಸೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ” ಎಂದು ಬಾದ್ಲಿಬಾಯಿ ಮತ್ತು ಶಾಂತಿಬಾಯಿ ತಿಳಿಸಿದ್ದಾರೆ. ತಾವು ವಯಸ್ಸಾದವರಾಗಿದ್ದರೂ ಮೊಮ್ಮಕ್ಕಳನ್ನು ನೋಡಿಕೊಳ್ಳುವುದು ತಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಪುಟ್ಪಕ್ ಗ್ರಾಮ ಅಥವಾ ತಾಂಡಾಕ್ಕೆ ಕೇಂದ್ರದ ಅಧ್ಯಯನ ತಂಡವಾಗಲಿ, ರಾಜ್ಯದ ಸಚಿವರಾಗಲಿ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥ ಸೋಮ್ಲಾ ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುಮಿಟ್ಕಲ್ ತಾಲ್ಲೂಕಿನಲ್ಲಿ 15,926 ರೈತರಿಗೆ ಸೇರಿದ 13,173 ಹೆಕ್ಟೇರ್ ಕೃಷಿ ಭೂಮಿ ಬರದಿಂದ ಹಾನಿಗೊಳಗಾಗಿದೆ ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವರದ್ ತಿಳಿಸಿದ್ದಾರೆ. ಪರಿಹಾರವಾಗಿ ಸರ್ಕಾರ ರೂ.11.19 ಕೋಟಿ ನೆರವು ಕೋರಿದೆ ಎಂದೂ ಹೇಳಿದ್ದಾರೆ.

ಯಾದಗಿರಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರನಾಥ ಸುಗೂರು ಅವರು ಮಾತನಾಡಿ, ಜಿಲ್ಲೆಯ ಒಟ್ಟು 468 ಗ್ರಾಮಗಳ ಪೈಕಿ 95 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಗುರುಮಿಟ್ಕಲ್ ತಾಲ್ಲೂಕಿನ ಒಟ್ಟು 64 ಗ್ರಾಮಗಳ ಪೈಕಿ ಪುಟ್ಪಾಕ್ ಸೇರಿದಂತೆ 13 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಗುರುಮಿಟ್ಕಲ್‌ನ ರಸ್ತೆಗಳು ತುಲನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿವೆ. ಜಲಜೀವನ್ ಮಿಷನ್ ಯೋಜನೆಯಡಿ ಬಹುತೇಕ ಮನೆಗಳಿಗೆ ನಳ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಆದರೆ, ತೀವ್ರ ಬರದಿಂದಾಗಿ ನಳ ಸಂಪರ್ಕವಿದ್ದರೂ ಗ್ರಾಮಸ್ಥರಿಗೆ ಅಗತ್ಯ ಪ್ರಮಾಣದ ನೀರು ದೊರೆಯುತ್ತಿಲ್ಲ. ಕೃಷಿ ನಷ್ಟ, ಕುಡಿಯುವ ನೀರಿನ ಅಭಾವ ಮತ್ತು ಉದ್ಯೋಗದ ಕೊರತೆಯಿಂದಾಗಿ ಗ್ರಾಮೀಣ ಕುಟುಂಬಗಳು ಬದುಕು ಕಟ್ಟಿಕೊಳ್ಳಲು ನಗರಗಳತ್ತ ವಲಸೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿಗೆ ದೂರು ನೀಡಿದ ಆಯುಕ್ತರು, ಕೇಂದ್ರ ಹೇಳಿದ್ದೇನು?

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

ರಾಜ್ಯದಲ್ಲಿ ಭೀಕರ ಬರ: 62,481 ಕೋಟಿ ರೂ. ಬೆಳೆ ನಷ್ಟ, ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ

Namma Metro ಪ್ರಯಾಣಿಕರಿಗೆ Good News: ಮುಂದಿನ 4-5 ದಿನಗಳಲ್ಲಿ Pink Line ಮೆಟ್ರೋ ಸಂಚಾರಕ್ಕೆ ಅನುಮತಿ ಸಾಧ್ಯತೆ..!