ಎಇಸಿಎಸ್ ಲೇಔಟ್‌ನಲ್ಲಿರುವ ಕಟ್ಟಡಗಳನ್ನು ಅಕ್ರಮ ಪೇಯಿಂಗ್ ಗೆಸ್ಟ್ ವಸತಿ ಕೇಂದ್ರಗಳಾಗಿ ನಡೆಸಲಾಗುತ್ತಿದೆ. 
ರಾಜ್ಯ

ಬೆಂಗಳೂರಿನ ಶೇ. 63ರಷ್ಟು PGಗಳು ಅನಧಿಕೃತ: ಮಾಲೀಕರಿಗೆ GBA ನೋಟಿಸ್..!

ಇದಕ್ಕಾಗಿ ಜಿಬಿಎ ತನ್ನ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಎಂಜಿನಿಯರ್‌ಗಳನ್ನು ನಿಯೋಜಿಸಿತ್ತು. ಪರಿಶೀಲನೆಯಲ್ಲಿ ನಗರದಲ್ಲಿ ಒಟ್ಟು 5,480 ಪಿಜಿ ವಸತಿಗಳಿರುವುದು ತಿಳಿದುಬಂದಿದ್ದು, ಅವುಗಳಲ್ಲಿ 3,597 ಪಿಜಿಗಳು ಪರವಾನಗಿ ಇಲ್ಲದ ವಿಭಾಗಕ್ಕೆ ಸೇರಿವೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ (PG)ಗಳ ವಿರುದ್ಧ ಬಿಗಿ ಕ್ರಮ ಜಾರಿಯಾಗಿದ್ದು, ನಗರದಲ್ಲಿರುವ ಒಟ್ಟು ಪಿಜಿಗಳಲ್ಲಿ ಶೇಕಡಾ 63 ರಷ್ಟು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಇತ್ತೀಚೆಗೆ ಈ ವಿಚಾರವಾಗಿ ನೀಡಿದ ತೀರ್ಪುಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ.

ಇದಕ್ಕಾಗಿ ಜಿಬಿಎ ತನ್ನ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಎಂಜಿನಿಯರ್‌ಗಳನ್ನು ನಿಯೋಜಿಸಿತ್ತು. ಪರಿಶೀಲನೆಯಲ್ಲಿ ನಗರದಲ್ಲಿ ಒಟ್ಟು 5,480 ಪಿಜಿ ವಸತಿಗಳಿರುವುದು ತಿಳಿದುಬಂದಿದ್ದು, ಅವುಗಳಲ್ಲಿ 3,597 ಪಿಜಿಗಳು ಪರವಾನಗಿ ಇಲ್ಲದ ವಿಭಾಗಕ್ಕೆ ಸೇರಿವೆ ಎಂದು ತಿಳಿದುಬಂದಿದೆ.

ಪರವಾನಗಿ ನೀಡುವ ಅಧಿಕಾರ ಹೊಂದಿರುವ ಜಿಬಿಎ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2025ರಲ್ಲಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಸುತ್ತೋಲೆಯ ಅನ್ವಯ, 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿರುವ, ಕಟ್ಟಡದ ಅನುಮೋದಿತ ನಕ್ಷೆಯ ನಿಯಮಗಳನ್ನು ಉಲ್ಲಂಘಿಸಿರುವ, ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ನೆಲಮಾಳಿಗೆಯಲ್ಲಿ ಅಡುಗೆಮನೆ ಹೊಂದಿರುವ ಪಿಜಿಗಳಿಗೆ ವ್ಯಾಪಾರ ಪರವಾನಗಿ ನೀಡಲು ಸಾಧ್ಯವಿಲ್ಲ. ಇಂತಹ ಪಿಜಿಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.

ಇಂತಹ ಕಟ್ಟಡಗಳು ಅಲ್ಲಿ ವಾಸಿಸುವವರ ಸುರಕ್ಷತೆಗೆ ಅಪಾಯ ಉಂಟುಮಾಡುತ್ತವೆ. ಯಾವುದೇ ಅವಘಡ ಸಂಭವಿಸಿದರೆ ಕಟ್ಟಡದ ಮಾಲೀಕರು ಮತ್ತು ನಿರ್ಮಾಣಕಾರರ ಜತೆಗೆ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಜಂಟಿ ಆಯುಕ್ತರು, ನಗರ ಯೋಜನಾ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಹೊಣೆಗಾರಿಕೆಯನ್ನೂ ನಿಗದಿಪಡಿಸಬೇಕಾಗುತ್ತದೆ ಎಂದು ನಿವೃತ್ತ ಮುಖ್ಯ ಎಂಜಿನಿಯರ್ ಒಬ್ಬರು ಹೇಳಿದ್ದಾರೆ.

ಪರಿಶೀಲನಾ ವರದಿ ಸಲ್ಲಿಕೆಯಾದ ಬಳಿಕ ಕಳೆದ ವಾರ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.

ನಿಯಮ ಉಲ್ಲಂಘಿಸಿರುವ ಕಟ್ಟಡಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಮುಂದಿನ ಆದೇಶಗಳಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ನಗರಕ್ಕೆ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕಾಗಿ ಬಂದಿರುವ ಸುಮಾರು 50,000 ಜನರು ಈ 3,000ಕ್ಕೂ ಹೆಚ್ಚು ಪಿಜಿಗಳಲ್ಲಿ ವಾಸಿಸುತ್ತಿರಬಹುದು. ಯಾವುದೇ ಕಠಿಣ ನಿರ್ಧಾರ ಕೈಗೊಂಡರೂ ಅದು ಅವರ ಮೇಲೆ ಪರಿಣಾಮ ಬೀರಲಿದೆ” ಎಂದು ಜಿಬಿಎಯ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಕ್ರಮಗಳ ಕುರಿತು ಮುಖ್ಯ ಆಯುಕ್ತರಿಂದ ನಿರ್ದೇಶನಕ್ಕಾಗಿ ಆರೋಗ್ಯ ಇಲಾಖೆ ಕಾಯುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ನೋಟಿಸ್ ಜಾರಿ ಕ್ರಮವನ್ನು ಸ್ವಾಗತಿಸಿರುವ ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಯುವ ಘಟಕದ ನಾಯಕ ಗಿರೀಶ್ ಕುಮಾರ್ ನಾಯ್ಡು ಅವರು, 2024ರಲ್ಲಿ ಇಂತಹ 13 ಪಿಜಿಗಳ ವಿರುದ್ಧ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ವ್ಯಾಪಾರ ಪರವಾನಗಿಗಳನ್ನು ನೀಡುವುದನ್ನು ಮುಂದುವರಿಸಿದ್ದರು. ಇದರಿಂದಾಗಿ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಲೋಕಾಯುಕ್ತರಿಗೆ ದೂರು ನೀಡಿದ ಬಳಿಕ ಇಂತಹ 13 ಪಿಜಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಆದರೆ, ಇದರಿಂದ 25,000 ಪಿಜಿ ಕೇಂದ್ರಗಳಿಗೆ ತೊಂದರೆಯಾಗಲಿದೆ ಎಂದು ಹೇಳಿ ಪಿಜಿ ಮಾಲೀಕರ ಸಂಘವು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡಿತು.

ಸಂಘ ಸಲ್ಲಿಸಿದ ಪ್ರಮಾಣಪತ್ರದ ಆಧಾರದಲ್ಲಿ ನಗರದ ಎಲ್ಲ ಪಿಜಿಗಳ ಪರಿಶೀಲನೆ ನಡೆಸುವಂತೆ ನಾವು ನ್ಯಾಯಾಲಯಕ್ಕೆ ಮನವಿ ಮಾಡಿದೆವು. ಇವುಗಳಲ್ಲಿ ಹಲವು ಪಿಜಿಗಳು ವಾಣಿಜ್ಯ ಬಳಕೆಯ ಬದಲು ವಸತಿ ವಿಭಾಗದಲ್ಲಿ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಹಾಗೂ ವಿದ್ಯುತ್ ಶುಲ್ಕವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ (ಬೆಸ್ಕಾಂ) ಪಾವತಿಸುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 3,000 ಕೋಟಿ ರೂಪಾಯಿಯಿಂದ 5,000 ಕೋಟಿ ರೂಪಾಯಿವರೆಗೆ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ನಾಗರಿಕರ ವೇದಿಕೆಯಾದ ಸಿಟಿಜನ್ಸ್‌ ಅಜೆಂಡಾ ಫಾರ್ ಬೆಂಗಳೂರು ಸಂಘಟನೆಯ ಸಂಚಾಲಕ ಸಂದೀಪ್ ಅನಿರುಧನ್ ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ಅಕ್ರಮ ಪಿಜಿಗಳು ಕಾನೂನು ಉಲ್ಲಂಘನೆ ಮತ್ತು ಅದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದರ ಸ್ಪಷ್ಟ ಸಂಕೇತವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕಟ್ಟಡ ನಿಯಮಗಳು ಮತ್ತು ನಗರ ಯೋಜನಾ ನಿಯಮಗಳನ್ನು ಉಲ್ಲಂಘಿಸಿದರೂ ಕಾನೂನು ಕ್ರಮ ಅಥವಾ ಜಾರಿ ಕ್ರಮದ ಭಯವೇ ಇಲ್ಲ ಎಂಬುದು ಈಗ ಬಹಿರಂಗ ಸತ್ಯವಾಗಿದೆ. ನಗರವು ಕಾನೂನು ಉಲ್ಲಂಘಿಸುವವರಿಗೆ ಮತ್ತು ಅಕ್ರಮವಾಗಿ ಕಾರ್ಯನಿರ್ವಹಿಸುವವರಿಗೆ ಸ್ವರ್ಗವಾಗಿದೆ. ಈ ಪರಿಸ್ಥಿತಿಯನ್ನು ಬದಲಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅಕ್ರಮ ಕಟ್ಟಡಗಳು ಮತ್ತು ಬಡಾವಣೆಗಳನ್ನು ನಿಯಂತ್ರಿಸುವ ಭರವಸೆ ಕಡಿಮೆ ಎಂದು ಹೇಳಿದ್ದಾರೆ.

ಸಾಕಷ್ಟು ಅಧಿಕಾರ, ಸಂಪನ್ಮೂಲ ಮತ್ತು ಸಾಂಸ್ಥಿಕ ಸ್ವಾಯತ್ತತೆ ಹೊಂದಿರುವ ಸ್ವತಂತ್ರ ನಾಗರಿಕ ಕಾನೂನು ಜಾರಿ ಪ್ರಾಧಿಕಾರವನ್ನು ಸ್ಥಾಪಿಸಲು ಕಾನೂನು ರೂಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅಕ್ರಮ ಕಟ್ಟಡಗಳು ಮತ್ತು ಬಡಾವಣೆಗಳನ್ನು ಗುರುತಿಸುವುದು, ಕಾನೂನು ಪ್ರಕ್ರಿಯೆಯ ಮೂಲಕ ಅವುಗಳನ್ನು ವಶಕ್ಕೆ ಪಡೆಯುವುದು, ನಿಯಮಬಾಹಿರ ನಿರ್ಮಾಣಗಳನ್ನು ತೆರವುಗೊಳಿಸುವುದು ಅಥವಾ ನಿಯಮಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡುವುದು ಈ ಪ್ರಾಧಿಕಾರದ ಮುಖ್ಯ ಹೊಣೆಗಾರಿಕೆಯಾಗಿರಬೇಕು ಎಂದು ಹೇಳಿದ್ದಾರೆ.

ಕಾನೂನುಬದ್ಧವಾಗಿ ಮತ್ತು ಪ್ರಾಯೋಗಿಕವಾಗಿ ಸಾಧ್ಯವಿರುವ ಕಡೆಗಳಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ, ನಿಯಮಾನುಸಾರ ಹೊಸ ಕಟ್ಟಡಗಳನ್ನು ನಿರ್ಮಿಸಿ ಹರಾಜು ಅಥವಾ ಮರುಮಾರಾಟಕ್ಕೆ ಒದಗಿಸುವುದು, ಇಲ್ಲವೇ ಸಾಮಾಜಿಕ ವಸತಿ ಯೋಜನೆಗಳಿಗೆ ಬಳಸಿಕೊಳ್ಳುವ ಬಗ್ಗೆಯೂ ಅವರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ. ನಷ್ಟದ ಎಚ್ಚರಿಕೆ!

ಹುಬ್ಬಳ್ಳಿಯಲ್ಲಿ ಮತ್ತೆ ಮಾಂಜಾದಾರ ಹಾವಳಿ: ಯುವಕನ ಮುಖಕ್ಕೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು! Video

India vs New Zealand: ಕೊನೆಗೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ; ಆದ್ರೆ 'ವಂಡರ್‌ ಕಿಡ್‌'ಗೆ ಹೊಸ ಬ್ಯಾಟಿಂಗ್ ಕ್ರಮಾಂಕ!

ಬರೀ ವೈಭವ್​, ವೈಭವ್​ ಅಂದ್ರೆ ಹೇಗೆ? ನಿಮ್ಮಿಷ್ಟದಂತೆ ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ಟೀಂ​ ಇಂಡಿಯಾ ಬ್ಯಾಟಿಂಗ್​ ಕೋಚ್ ಶಾಕಿಂಗ್ ಹೇಳಿಕೆ!

'ಸಲ್ಮಾನ್ ಖಾನ್ ಒಬ್ಬರೇ ಬಾಲಿವುಡ್ ಟೈಗರ್': ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿಗೆ ಸ್ಫೋಟಕ ಕಾರಣ ಬಹಿರಂಗ!