ಬೆಂಗಳೂರು: ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬಿಗ್ ರಿಲೀಫ್ ನೀಡಿದೆ. ನಗರದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಇ-ಖಾತಾ ವಿಶೇಷ ಮೇಳಗಳು (Melas) ಅಕ್ಟೋಬರ್ 31 ರಿಂದ ಪುನರಾರಂಭಗೊಳ್ಳಲಿವೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಐದು ಪಾಲಿಕೆಗಳ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳು ಹಾಗೂ ಗುರುತಿಸಲಾದ ಇತರ ಸ್ಥಳಗಳಲ್ಲಿ ಇ-ಖಾತಾ ಮೇಳಗಳು ನಡೆಯಲಿವೆ. ಇ-ಖಾತಾ ಸೇವೆಗಳನ್ನು ಹೇಗೆ ಪಡೆಯಬೇಕು ಎಂಬುದನ್ನು ವಿವರಿಸುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕರು ಜಿಬಿಎ ಇ-ಆಸ್ತಿ ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು, ಹೊಸ ಖಾತೆ ಮಾಡಿಸಲು ಅಥವಾ ಬಿ ಖಾತಾವನ್ನು ಎ ಖಾತೆಯಾಗಿ ಪರಿವರ್ತಿಸಲು ತೊಂದರೆ ಎದುರಿಸುತ್ತಿರುವವರು ಜನಸೇವಕ ಸೇವೆಯ ಪ್ರಯೋಜನ ಪಡೆಯಬಹುದು. ಜನಸೇವಕ ಪ್ರತಿನಿಧಿಗಳು ಮನೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೆರವಾಗಲಿದ್ದಾರೆ.
ಈ ಸೇವೆ ಪಡೆಯಲು ಸಾರ್ವಜನಿಕರು ಜನಸೇವಕ ವೆಬ್‌ಸೈಟ್ ಮೂಲಕ ಸಮಯ ನಿಗದಿಪಡಿಸಿಕೊಳ್ಳಬಹುದು ಅಥವಾ ನೀಡಿರುವ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಜಿಬಿಎ ವ್ಯಾಪ್ತಿಯ 140 ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಇ-ಖಾತಾಗೆ ಅರ್ಜಿ ಸಲ್ಲಿಸುವ ಸೌಲಭ್ಯ ಲಭ್ಯವಿದೆ.
ಇ-ಖಾತಾ ಸೇವೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಾರ್ವಜನಿಕರು ಕಂದಾಯ ಇಲಾಖೆಯ ಯೂಟ್ಯೂಬ್ ಚಾನೆಲ್ ವೀಕ್ಷಿಸಬಹುದು. ಸ್ವತಃ ಅರ್ಜಿ ಸಲ್ಲಿಸಲು ಜಿಬಿಎ ಇ-ಆಸ್ತಿ ಪೋರ್ಟಲ್ ಬಳಸಬಹುದು ಎಂದು ತಿಳಿಸಿದರು.
ಸಹಾಯವಾಣಿ ಸಂಖ್ಯೆ ಇಂತಿದೆ...
080-42474411 / 8904085030