ಬೆಂಗಳೂರು: ಮನೆಗಳ ಮುಂದೆ ವಾಹನ ನಿಲುಗಡೆ ಮಾಡುವುದಕ್ಕೆ ವಾರ್ಷಿಕ ಶುಲ್ಕ ವಿಧಿಸುವ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವಾಹನ ನಿಲುಗಡೆ ನಿಯಮಗಳು-2026ಕ್ಕೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಿ ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆಯಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಸ್ತಾವಿತ ಕರಡು ನೀತಿಯ ಪ್ರಕಾರ, ನಿವೇಶನದ ಅಳತೆಗೆ ಅನುಗುಣವಾಗಿ ಮನೆ ಮಾಲೀಕರು ವಾರ್ಷಿಕ ರೂ.25,000ದಿಂದ ರೂ.40,000ವರೆಗೆ ವಾಹನ ನಿಲುಗಡೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ನಿಯಮದ ವಿರುದ್ಧ ಸಾರ್ವಜನಿಕರಿಂದ ಹಲವು ಆಕ್ಷೇಪಣೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ನಿವಾಸಿಗಳಿಂದ ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸುವ ನಿಯಮವನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಿಮ ನಿಯಮಾವಳಿಗಳಲ್ಲಿ ಈ ನಿರ್ದಿಷ್ಟ ಅಂಶವನ್ನು ಕೈಬಿಡುವ ಸಾಧ್ಯತೆಯಿದೆ ಎಂದಿದ್ದಾರೆ.
ಬಿಟಿಎಂ ಲೇಔಟ್ ಶಾಸಕ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ನೀತಿಯನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಮೊದಲಿಗೆ ಒತ್ತಾಯಿಸಿದ್ದರು.
ಈ ನೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ” ಎಂದು ಸಚಿವರು ಇದೀಗ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಾಜಿ ಮೇಯರ್ ಸಂಪತ್ ರಾಜ್ ಕೂಡ ಸರ್ಕಾರವು ಬೆಂಗಳೂರಿನ ಜನರಿಗೆ ತೊಂದರೆಯಾಗುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಭವಿಷ್ಯದಲ್ಲಿ 30X40 ಅಡಿ ಹಾಗೂ 40X60 ಅಡಿ ಮತ್ತು ಅದಕ್ಕಿಂತ ದೊಡ್ಡ ನಿವೇಶನಗಳಲ್ಲಿ ನಿರ್ಮಾಣ ಯೋಜನೆಗೆ ಅನುಮತಿ ಪಡೆಯುವಾಗ ವಾಹನ ನಿಲುಗಡೆ ಸ್ಥಳವನ್ನು ಕಡ್ಡಾಯವಾಗಿ ತೋರಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಹಿರಿಯ ನಾಯಕ ಹಾಗೂ ನಾಲ್ಕು ಬಾರಿ ಶಾಸಕರಾಗಿರುವ ಸತೀಶ್ ರೆಡ್ಡಿ ಅವರು ಮಾತನಾಡಿ, ಗುಂಡಿಬಿದ್ದ ರಸ್ತೆಗಳು, ಕಸದ ಸಮಸ್ಯೆ ಹಾಗೂ ಇತರ ಮೂಲಸೌಕರ್ಯ ಕೊರತೆಗಳಿಂದ ಜನರು ಈಗಾಗಲೇ ಆಕ್ರೋಶಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಭಾರಿ ಮೊತ್ತದ ಶುಲ್ಕ ವಿಧಿಸುವ ಪ್ರಸ್ತಾವನೆಯು ಸರ್ಕಾರದ ವಿರುದ್ಧ ಜನರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದಿದ್ದಾರೆ.
ಬೆಂಗಳೂರು ನವನಿರ್ಮಾಣ ಪಕ್ಷದ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಅವರು ಮಾತನಾಡಿ, ನಿವೇಶನ ಮಾಲೀಕರ ಮೇಲಿನ ವಾಹನ ನಿಲುಗಡೆ ಶುಲ್ಕವನ್ನು ಹಿಂಪಡೆದರೆ ಸ್ವಾಗತಿಸುವುದಾಗಿ ಹೇಳಿದ್ದಾರೆ.
ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳು ಮತ್ತು ನಾಗರಿಕ ಸಂಸ್ಥೆಗಳು ಬೆಳೆಯಲು ಬಿಟ್ಟಿರುವ ಸಮಸ್ಯೆಗೆ ನಾಗರಿಕರನ್ನೇ ಏಕೆ ಹೊಣೆಗಾರರನ್ನಾಗಿ ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ ಎಂದು ಅವರು ಹೇಳಿದ್ದಾರೆ.
ಕಟ್ಟಡ ನಿಯಮಗಳ ಉಲ್ಲಂಘನೆಗೆ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣದ ನಿಯಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ನಗರದ ಬೆಳವಣಿಗೆಗೆ ತಕ್ಕಂತೆ ನಗರ ಯೋಜನೆಯೂ ರೂಪುಗೊಂಡಿಲ್ಲ. ಮೊದಲು ಇಂತಹ ಸಮಸ್ಯೆಗಳು ಬೆಳೆಯಲು ಅವಕಾಶ ನೀಡಿ, ನಂತರ ತಮ್ಮ ವೈಫಲ್ಯಗಳ ಬೆಲೆಯನ್ನು ನಾಗರಿಕರೇ ಪಾವತಿಸಬೇಕೆಂದು ಸರ್ಕಾರ ಹೇಳಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದಾರೆ.
ವಾಹನ ನಿಲುಗಡೆ ಶುಲ್ಕ ವಿಧಿಸುವ ಮೊದಲು ಕಟ್ಟಡ ನಿಯಮಗಳ ಉಲ್ಲಂಘನೆ ಹಾಗೂ ಅವ್ಯವಸ್ಥಿತ ನಗರಾಭಿವೃದ್ಧಿಗೆ ಅವಕಾಶ ನೀಡಿದ ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಅಶೋಕ್ ಮೃುತ್ಯುಂಜಯ ಅವರು ಮಾತನಾಡಿ, ಈ ಶುಲ್ಕದ ಪ್ರಸ್ತಾವನೆಯು ಆಡಳಿತಾತ್ಮಕ ವೈಫಲ್ಯ ಮತ್ತು ನೀತಿ ನಿರೂಪಣೆಯಲ್ಲಿನ ಗೊಂದಲವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಈಗಾಗಲೇ ರಸ್ತೆ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಪಾವತಿಸುತ್ತಿರುವ ನಾಗರಿಕರ ಮೇಲೆ ವಾರ್ಷಿಕ ರೂ.25,000ದಿಂದ ರೂ.40,000ವರೆಗೆ ಅವೈಜ್ಞಾನಿಕ ಹಾಗೂ ದುಬಾರಿ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ. ಆದರೆ, ಸ್ಥಳೀಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸ್ವಪಕ್ಷದ ಶಾಸಕರಿಂದಲೇ ವಿರೋಧ ವ್ಯಕ್ತವಾದ ತಕ್ಷಣ ಹಿಂದೆ ಸರಿಯುವ ಪ್ರಯತ್ನ ಮಾಡುತ್ತಿದೆ” ಎಂದು ಹೇಳಿದ್ದಾರೆ.
ನಗರದ ರಸ್ತೆಗಳು ವಾಹನ ದಟ್ಟಣೆಯಿಂದ ತುಂಬಿದ್ದು, ಪಾದಚಾರಿಗಳಿಗೆ ಅನುಕೂಲಕರವಾದ ವ್ಯವಸ್ಥೆಗಳೂ ಇಲ್ಲ. ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು, ಮೊದಲು ದುಬಾರಿ ಶುಲ್ಕದ ಪ್ರಸ್ತಾವನೆ ತಂದು, ವಿರೋಧ ವ್ಯಕ್ತವಾದಾಗ ಹಿಂದೆ ಸರಿಯುವ ಕ್ರಮವನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕು ಎಂದು ಟೀಕಿಸಿದ್ದಾರೆ.
ಬೆಂಗಳೂರಿಗೆ ವ್ಯವಸ್ಥಿತ ನಗರಾಡಳಿತ, ಸಮರ್ಪಕ ಸಾರ್ವಜನಿಕ ಸಾರಿಗೆ ಹಾಗೂ ನಿಗದಿತ ವಾಹನ ನಿಲುಗಡೆ ವ್ಯವಸ್ಥೆ ಅಗತ್ಯವಿದೆ. ಸಾರ್ವಜನಿಕ ನೀತಿಗಳನ್ನು ರೂಪಿಸುವಾಗ ನಾಗರಿಕರ ಮೇಲೆ ಎಷ್ಟು ಹೊರೆ ಹೇರಬಹುದು ಎಂಬುದನ್ನು ಪರೀಕ್ಷಿಸುವ ಪ್ರಯೋಗದಂತೆ ಸರ್ಕಾರ ವರ್ತಿಸಬಾರದು ಎಂದು ಹೇಳಿದ್ದಾರೆ.
ಕರಡು ನೀತಿಯಲ್ಲೇನಿದೆ?
ನಿವೇಶನದ ಅಳತೆಗೆ ಅನುಗುಣವಾಗಿ ಮನೆ ಮಾಲೀಕರು ವಾರ್ಷಿಕ ರೂ.25,000ದಿಂದ ರೂ.40,000ವರೆಗೆ ವಾಹನ ನಿಲುಗಡೆ ಶುಲ್ಕ ಪಾವತಿಸಬೇಕು ಎಂಬ ಪ್ರಸ್ತಾವನೆ ಇದೆ.
ನಿರ್ಧಾರ ಮರುಪರಿಶೀಲನೆಗೆ ಕಾರಣವೇನು?
ಗುಂಡಿಬಿದ್ದ ರಸ್ತೆಗಳು, ಕಸದ ಸಮಸ್ಯೆ ಹಾಗೂ ಮೂಲಸೌಕರ್ಯ ಕೊರತೆಯಿಂದ ಜನರು ಈಗಾಗಲೇ ಜಿಬಿಎ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಹೊಸ ಶುಲ್ಕ ಜಾರಿಗೊಳಿಸಿದರೆ ಆಕ್ರೋಶ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಕಟ್ಟಡ ನಿಯಮಗಳ ಉಲ್ಲಂಘನೆಗೆ ಅವಕಾಶ ನೀಡಿದ ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.