ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು IED ಸ್ಫೋಟ ಪ್ರಕರಣ: ಕೇವಲ 72 ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ ಪಡೆ; ಭಯೋತ್ಪಾದಕ ಕೃತ್ಯವಲ್ಲ, ವೈಯಕ್ತಿಕ ದ್ವೇಷಕ್ಕೆ ಐಇಡಿ ಬಳಕೆ: ಪೊಲೀಸರ ಸ್ಪಷ್ಟನೆ

ಈ ಸ್ಫೋಟದ ಹಿಂದೆ ಯಾವುದೇ ಭಯೋತ್ಪಾದಕ ಸಂಘಟನೆಗಳ ಕೈವಾಡ ಅಥವಾ ಭಯೋತ್ಪಾದನಾ ಆಯಾಮವಿಲ್ಲ. ಇದು ಸಂಪೂರ್ಣವಾಗಿ ಕೌಟುಂಬಿಕ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಕೊಲೆ ಯತ್ನವಾಗಿದೆ.

ಬೆಂಗಳೂರು: ರಾಜಧಾನಿಯ ಪುಲಕೇಶಿನಗರದಲ್ಲಿ ನಡೆದ ಐಇಡಿ (IED) ಸ್ಫೋಟ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 20 ರಂದು ಜೆರೆಮಿಯಾ ರಸ್ತೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್, ಈ ಸ್ಫೋಟದ ಹಿಂದೆ ಯಾವುದೇ ಭಯೋತ್ಪಾದಕ ಸಂಘಟನೆಗಳ ಕೈವಾಡ ಅಥವಾ ಭಯೋತ್ಪಾದನಾ ಆಯಾಮವಿಲ್ಲ. ಇದು ಸಂಪೂರ್ಣವಾಗಿ ಕೌಟುಂಬಿಕ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಕೊಲೆ ಯತ್ನವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ..

ಗ್ರಾಮದಲ್ಲಿ ಭೂಮಿ, ಹಣಕಾಸು ಹಾಗೂ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಸೆಕ್ಯುರಿಟಿ ಗಾರ್ಡ್‌ನನ್ನು ಹತ್ಯೆ ಮಾಡುವ ಉದ್ದೇಶದಿಂದ ಸ್ಫೋಟ ನಡೆಸಲಾಗಿದೆ. ಬಂಧಿತರನ್ನು ಅಸ್ಸಾಂನ ಹೈಲಾಕಂಡಿ ಜಿಲ್ಲೆಯ ದೀನನಾಥಪುರ ಗ್ರಾಮದ ಬುರ್ಹಾನ್ ಅಹ್ಮದ್ ಬುರ್ಬುಯ್ಯ (20), ಜಾಹಿದುಲ್ ಹುಸೇನ್ ಬುರ್ಬುಯ್ಯ (27) ಹಾಗೂ ಸಜಿದುಲ್ ಲಷ್ಕರ್ (22) ಎಂದು ಗುರುತಿಸಲಾಗಿದೆ.

ಬುರ್ಹಾನ್ ಕಳೆದ ಒಂದು ವರ್ಷದಿಂದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಜಾಹಿದುಲ್ ಜಯನಗರದ ಬೇಕರಿಯಲ್ಲಿ ಹಾಗೂ ಸಜಿದುಲ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೂವರೂ ಬಾಲ್ಯದ ಸ್ನೇಹಿತರಾಗಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡವರನ್ನು ಉತ್ತರ ಪ್ರದೇಶ ಮೂಲದ ಪೇಂಟರ್ ಸೂರಜ್ ಕುಮಾರ್ (28) ಹಾಗೂ ನಿರ್ಮಾಣ ಹಂತದ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅಲ್ಲಾವುದ್ದೀನ್ ಎಂ. (53) ಎಂದು ಗುರುತಿಸಲಾಗಿದೆ.

ಅಲ್ಲಾವುದ್ದೀನ್ ಆರೋಪಿಗಳ ಸ್ವಂತ ಗ್ರಾಮದವರಾಗಿದ್ದಾರೆ. ಸೂರಜ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲ್ಲಾವುದ್ದೀನ್ ಮತ್ತು ಜಾಹಿದುಲ್ ಸಂಬಂಧಿಕರಾಗಿದ್ದು, ಇಬ್ಬರ ನಡುವೆ ಹಣಕಾಸು, ಆಸ್ತಿ ಹಾಗೂ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ವಿವಾದವಿತ್ತು. ಈ ಜಗಳದಿಂದಾಗಿ ಜಾಹಿದುಲ್ ಸಹೋದರಿಯ ಮದುವೆಯೂ ಮುರಿದುಬಿದ್ದಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಜಾಹಿದುಲ್, ಅಲ್ಲಾವುದ್ದೀನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿ ತನ್ನ ಇಬ್ಬರು ಸ್ನೇಹಿತರ ನೆರವು ಪಡೆದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಆನ್‌ಲೈನ್ ಮಾಹಿತಿ ಬಳಸಿ ಬಾಂಬ್ ತಯಾರಿ, ಬಸ್‌ನಲ್ಲಿ ಬೆಂಗಳೂರಿಗೆ ಸಾಗಣೆ

ವಿದ್ಯುತ್ ಕೆಲಸ ಮಾಡುತ್ತಿದ್ದ ಬುರ್ಹಾನ್ ತನ್ನ ಮನೆಯಲ್ಲಿ ಐಇಡಿ ತಯಾರಿಸಿ, ಬಸ್‌ನಲ್ಲಿ ಬೆಂಗಳೂರಿಗೆ ತಂದಿದ್ದಾನೆ. ಬಳಿಕ ಸ್ಫೋಟಕ ಸಾಧನವನ್ನು ಪಾರ್ಸೆಲ್‌ನಂತೆ ಕಾಣುವಂತೆ ಪೆಟ್ಟಿಗೆಯೊಳಗೆ ಇರಿಸಿ, ನಿರ್ಮಾಣ ಹಂತದ ಕಟ್ಟಡದ ಸಮೀಪದ ಸಣ್ಣ ಅಂಗಡಿಯ ಮುಂದೆ ಇರಿಸಿದ್ದಾನೆ.

ತಮ್ಮ ಗುರುತು ಪತ್ತೆಯಾಗದಂತೆ ಆರೋಪಿಗಳು ಅಪರಿಚಿತ ವ್ಯಕ್ತಿಯೊಬ್ಬರಿಂದ ಮೊಬೈಲ್ ಪಡೆದು ಅಲ್ಲಾವುದ್ದೀನ್‌ಗೆ ಕರೆ ಮಾಡಿದ್ದಾರೆ. ಕೇವಲ 15 ದಿನಗಳ ಹಿಂದಷ್ಟೇ ಆ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ ಅಲ್ಲಾವುದ್ದೀನ್‌ಗೆ, ಪಾರ್ಸೆಲ್ ಆತನಿಗಾಗಿಯೇ ಬಂದಿದ್ದು ಅದನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

ಅಲ್ಲಾವುದ್ದೀನ್ ಪೆಟ್ಟಿಗೆಯನ್ನು ತೆಗೆದುಕೊಂಡರೂ ಅದನ್ನು ತೆರೆಯಲು ಸಾಧ್ಯವಾಗದೆ ಸೂರಜ್‌ಗೆ ನೀಡಿದ್ದಾರೆ. ಸೂರಜ್ ಸಾಧನದಲ್ಲಿದ್ದ ಗುಂಡಿಯನ್ನು ಒತ್ತಿದಾಗ ಸ್ಫೋಟ ಸಂಭವಿಸಿದ್ದು, ಇಬ್ಬರೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಐಇಡಿ ತಯಾರಿಕೆಗೆ ಕೃತಕ ಬುದ್ಧಿಮತ್ತೆ ನೆರವು ಪಡೆದ ಆರೋಪಿಗಳು

ಆರೋಪಿಗಳು ಎಂಟನೇ ತರಗತಿವರೆಗೆ ಮಾತ್ರ ಓದಿದ್ದರೂ, ಆನ್‌ಲೈನ್ ವಿಡಿಯೊಗಳು, ವಿವಿಧ ವೆಬ್‌ಸೈಟ್‌ಗಳು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಸಂವಾದ ವ್ಯವಸ್ಥೆಯೊಂದರಿಂದ ಮಾಹಿತಿ ಪಡೆದು ಐಇಡಿ ತಯಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹಿದುಲ್ ಸ್ಥಳೀಯ ಅಂಗಡಿಗಳಿಂದ ಕಚ್ಚಾ ವಸ್ತುಗಳನ್ನು ಖರೀದಿಸಿದ್ದ. ಪಟಾಕಿಗಳಿಂದ ಸಿಡಿಮದ್ದಿನ ಪುಡಿ ತೆಗೆದು, ಲೋಹದ ಬಾಲ್ ಬೇರಿಂಗ್‌ಗಳನ್ನು ಬಳಸಿದ್ದಲ್ಲದೆ, ವಿದ್ಯುತ್ ತಂತಿಗಳು, ಬ್ಯಾಟರಿ ಸರ್ಕ್ಯೂಟ್ ಮತ್ತು ಗುಂಡಿಯ ನೆರವಿನಿಂದ ಸ್ಫೋಟಕ ಸಾಧನವನ್ನು ಜೋಡಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಅಪರಾಧಕ್ಕೆ ಸಂಚು ರೂಪಿಸಲು ಹಾಗೂ ಪರಸ್ಪರ ಮಾಹಿತಿ ಹಂಚಿಕೊಳ್ಳಲು ಆರೋಪಿಗಳು ವಾಟ್ಸ್‌ಆ್ಯಪ್ ಗುಂಪೊಂದನ್ನು ರಚಿಸಿಕೊಂಡಿದ್ದರು ಎನ್ನಲಾಗಿದೆ. ಆರೋಪಿಗಳ ಮೊಬೈಲ್‌ಗಳ ಬ್ರೌಸಿಂಗ್ ಇತಿಹಾಸ ಪರಿಶೀಲಿಸಿದಾಗ, ಸ್ಫೋಟಕ ಸಾಧನ ತಯಾರಿಸಲು ಬೇಕಾದ ವಸ್ತುಗಳು ಹಾಗೂ ಅದರ ವಿಧಾನಕ್ಕೆ ಸಂಬಂಧಿಸಿದ ಹುಡುಕಾಟಗಳು ಪತ್ತೆಯಾಗಿವೆ. ಐಇಡಿಯ ಸಂಯೋಜನೆಯ ಕುರಿತು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.

72 ಗಂಟೆಗಳಲ್ಲಿ ಆರೋಪಿಗಳ ಬಂಧನ

ಪ್ರಕರಣವನ್ನು ಭೇದಿಸಲು ಪೂರ್ವ ವಿಭಾಗದ ಪೊಲೀಸರು 10 ವಿಶೇಷ ತಂಡಗಳನ್ನು ರಚಿಸಿದ್ದರು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಅಸ್ಸಾಂ ಮತ್ತು ರಾಯಚೂರು ಪೊಲೀಸರ ನೆರವಿನಿಂದ ಸ್ಫೋಟ ಸಂಭವಿಸಿದ 72 ಗಂಟೆಗಳೊಳಗೆ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ತನಿಖೆಯ ವೇಳೆ 1,500ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸುಮಾರು 100 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿತ್ತು. ತಾಂತ್ರಿಕ ವಿಶ್ಲೇಷಣೆಯ ನೆರವಿನಿಂದ ಬೆಂಗಳೂರಿನಲ್ಲಿ ಇಬ್ಬರನ್ನು ಹಾಗೂ ರಾಯಚೂರಿನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ರೂ.3 ಲಕ್ಷ ಬಹುಮಾನ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪರಿಚಿತರಿಗೆ ಮೊಬೈಲ್ ನೀಡುವ ಮುನ್ನ ಎಚ್ಚರಿಕೆ ವಹಿಸಿ: ಪೊಲೀಸ್ ಆಯುಕ್ತ

ಪರಿಶೀಲನೆ ನಡೆಸದೆ ಅಪರಿಚಿತರಿಗೆ ತಮ್ಮ ಮೊಬೈಲ್ ನೀಡಬಾರದು ಎಂದು ಪೊಲೀಸ್ ಆಯುಕ್ತರು ಇದೇ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮೊಬೈಲ್ ಕೇಳುವವರ ಗುರುತು ಹಾಗೂ ಅದರ ಅಗತ್ಯವನ್ನು ಖಚಿತಪಡಿಸಿಕೊಂಡ ಬಳಿಕವೇ ಸಾಧನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳ ಕಾರ್ಯವ್ಯಾಪ್ತಿಯನ್ನು ಪರಿಶೀಲಿಸಿ, ಕ್ಯಾಮೆರಾಗಳ ನಿಗಾ ಇಲ್ಲದ ಪ್ರದೇಶಗಳನ್ನು ಗುರುತಿಸಿ ಸರಿಪಡಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಘಟಕಗಳು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮೇಲೂ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ನಿಗಾ ಇರಿಸಲಾಗುವುದು. ಬೀಟ್ ಪೊಲೀಸರು ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಮೋದಿ ಕಾ ಬಾಪ್ ಭಿ ಜಾಯೇಗಾ" ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ BJPತೀವ್ರ ಆಕ್ರೋಶ, ದೇಶಾದ್ಯಂತ ಸಮರಕ್ಕೆ ಮುಂದು..!

ಕೈ ಪಾಳಯದಲ್ಲಿ 'ಸ್ಟಿಂಗ್ ಆಪರೇಷನ್' ಕೋಲಾಹಲ: ನ.2ಕ್ಕೆ ದೆಹಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ದೂರು ಸಲ್ಲಿಕೆ..?

ಸ್ಟಿಂಗ್ ಆಪರೇಷನ್ ವಿವಾದ: ನಮ್ಮ ಸಮಸ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ, ಹೈಕಮಾಂಡ್ ಮಧ್ಯಪ್ರವೇಶ ಅಗತ್ಯವಿಲ್ಲ; DCM ಪರಮೇಶ್ವರ್ ಸ್ಪಷ್ಟನೆ

ವಾಯುವ್ಯ ಸಾರಿಗೆ ಸಂಸ್ಥೆಗೆ ರಾಣಿ ಚೆನ್ನಮ್ಮನ ಹೆಸರು ಮರು ನಾಮಕರಣ: ಸಿಎಂ ಡಿಕೆ ಶಿವಕುಮಾರ್!

'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': 'ಚುನಾವಣಾ ಸೋಲುಗಳಿಂದ ಹತಾಶೆ'- ಖರ್ಗೆ ಹೇಳಿಕೆ ವಿರುದ್ಧ ಅಮಿತ್ ಶಾ ಕಿಡಿ!