

ಪಾಟ್ನಾ: ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕುಟುಂಬದ ವಿರುದ್ಧ ಕಾಂಗ್ರೆಸ್ ಪದೇ ಪದೇ ನಿಂದನೀಯ ಭಾಷೆಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕೂಡ ಖರ್ಗೆ ಅವರ ಹೇಳಿಕೆಯನ್ನು ತೀವ್ರವಾಗಿ ದುರದೃಷ್ಟಕರ ಎಂದು ಖಂಡಿಸಿದ್ದಾರೆ ಮತ್ತು ಪಾಟ್ನಾದಲ್ಲಿ ಮಾಡಿದ ಹೇಳಿಕೆಗಳಿಗೆ ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರೂ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಖರ್ಗೆ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ಪ್ರಧಾನಿಯವರ ತಂದೆಯ ಬಗ್ಗೆ ಅಸಭ್ಯ ಹೇಳಿಕೆ ನೀಡುವ ಮೂಲಕ ಖರ್ಗೆ, ಸಭ್ಯತೆಯ ಗಡಿಯನ್ನು ಮೀರಿದ್ದಾರೆ ಎಂದು ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ಮೋದಿ ಮತ್ತು ಅವರ ಕುಟುಂಬವನ್ನು ಪದೇ ಪದೇ ಅವಮಾನಿಸಿದ್ದಾರೆ. ಅವರ ತಾಯಿಯ ಬಗ್ಗೆ ಹೇಳಿಕೆ ಸೇರಿದಂತೆ “ಸಾವಿನ ವ್ಯಾಪಾರಿ” ಮತ್ತು “ಚಾಯ್ವಾಲಾ” ಎಂದು ಕರೆಯುವ ಮೂಲಕ ಅವರ ಹಿನ್ನೆಲೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ ಪದೇ ಪದೇ ಚುನಾವಣಾ ಸೋಲುಗಳು ಕಾಂಗ್ರೆಸ್ ಅನ್ನು "ಹತಾಶೆ" ಗೊಳಿಸಿವೆ. ವೈಯಕ್ತಿಕ ದಾಳಿಗಳನ್ನು ಹೊರತುಪಡಿಸಿ ಮತದಾರರಿಗೆ ನೀಡಲು ಯಾವುದೇ ನೀತಿ ಅಥವಾ ಪ್ರಮುಖ ವಿಷಯವಿಲ್ಲ. ಕಾಂಗ್ರೆಸ್ ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿದೆ ಮತ್ತು ಕಾರ್ಯಕರ್ತರಲ್ಲಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿದೆ. ಮೋದಿ ಅಥವಾ ಅವರ ಕುಟುಂಬದ ಬಗ್ಗೆ ದ್ವೇಷಪೂರಿತ ಹೇಳಿಕೆಗಳನ್ನು ನೀಡಿದಾಗಲೆಲ್ಲಾ ಮತದಾರರು ಪಕ್ಷವನ್ನು ಪದೇ ಪದೇ ತಿರಸ್ಕರಿಸಿದ್ದಾರೆ ಎಂದು ಶಾ ಹೇಳಿದ್ದಾರೆ.
ಕ್ಷಮೆಯಾಚನೆಗೆ ಬಿಹಾರ ಸಿಎಂ ಬೇಡಿಕೆ: ಖರ್ಗೆ ಅವರ ಹೇಳಿಕೆಯನ್ನು "ತೀವ್ರ ದುರದೃಷ್ಟಕರ" ಎಂದು ಬಿಹಾರ ಸಿಎಂ ಸಾಮ್ರಾಟ್ ಚೌಧರಿ ಖಂಡಿಸಿದ್ದು, ಪ್ರಧಾನಿಯವರ ತಂದೆಯ ಬಗ್ಗೆ ಅವಹೇಳನಕಾರಿ ಭಾಷೆ ಮೋದಿ ಕುಟುಂಬದ ವಿರುದ್ಧದ ದ್ವೇಷವನ್ನು ಪ್ರತಿಬಿಂಬಿಸುತ್ತದೆ. ಈ ಸಂಬಂಧ ಖರ್ಗೆ ಮತ್ತು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.