ಕಾರವಾರ: ಉತ್ತರ ಕನ್ನಡ ಜಿಲ್ಲೆಯ ತದಡಿ ಬಂದರಿನಲ್ಲಿ ಮಂಗಳವಾರ ಬೋಟ್ ನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಮೂವರು ಮೀನುಗಾರರು ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತ ಮೀನುಗಾರರನ್ನು ನೌಶಾದ್ (48), ಅಮೀನ್ (40) ಮತ್ತು ಅಮನ್ (26) ಎಂದು ಗುರುತಿಸಲಾಗಿದೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತದಡಿ ಬಂದರಿನಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಅಸ್ವಸ್ಥಗೊಂಡ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋಕರ್ಣದ ತದಡಿಯ 'ಕುಚೈಮಾ' ಬೋಟ್‌ನಲ್ಲಿ ಈ ಮೀನುಗಾರರು ಕೆಲಸ ಮಾಡುತ್ತಿದ್ದರು. ಚಮನ್ ಮೀನುಗಳನ್ನು ಹಿಡಿದು ಬಂದರಿಗೆ ವಾಪಸಾಗಿದ್ದರು. ಬಳಿಕ ಮೀನು ಸಂಗ್ರಹಿಸುವ ಸ್ಥಳಕ್ಕೆ ಇಳಿದು ಮೀನನ್ನು ಖಾಲಿ ಮಾಡಿದ್ದರು. ನಂತರ ಮೀನು ಸಂಗ್ರಹಿಸಿದ್ದ ಜಾಗವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೀನಿನ ಕೊಳೆತ ವಾಸನೆ ಅಥವಾ ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇಬ್ಬರ ರಕ್ಷಣೆ, ಓರ್ವನ ಸ್ಥಿತಿ ಗಂಭೀರ
ಈ ದುರ್ಘಟನೆಯಲ್ಲಿ ಒಟ್ಟು ಐವರು ಸಿಲುಕಿದ್ದು, ಇಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ರಕ್ಷಿಸಲ್ಪಟ್ಟವರ ಪೈಕಿ ಓರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.