ಬೆಂಗಳೂರು: ರಾಜ್ಯ ಸರ್ಕಾರವು ಬರಪೀಡಿತ ತಾಲೂಕುಗಳ ಅರ್ಹ ರೈತರಿಗೆ ಮೊದಲ ಹಂತದ ಬೆಳೆಹಾನಿ ತುರ್ತು ಪರಿಹಾರವಾಗಿ ಗರಿಷ್ಠ ₹2,500 ಹಣವನ್ನು ಬಿಡುಗಡೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ. ವಿಶೇಷ ಅಧಿವೇಶನದಲ್ಲಿ ಘೋಷಣೆಯಾಗಿದ್ದ ಈ ತಾತ್ಕಾಲಿಕ ನೆರವನ್ನು, ದುರುಪಯೋಗವಾಗದಂತೆ ತಡೆಯಲು ಮತ್ತು ನಿಖರ ಫಲಾನುಭವಿಗಳಿಗೆ ತಲುಪಿಸಲು ಇ-ಆಡಳಿತ ಮತ್ತು ಭೂಮಿ ಕೋಶದ ಮೂಲಕ 17 ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಅದರಂತೆ, ರಾಜ್ಯದ 226 ಬರಪೀಡಿತ ತಾಲ್ಲೂಕುಗಳ ಸುಮಾರು 45 ರಿಂದ 50 ಲಕ್ಷ ರೈತರಿಗೆ ಈ ಆದೇಶದಿಂದ ನೇರ ಪ್ರಯೋಜನ ಸಿಗಲಿದೆ. ಆ ಕುರಿತ ವರದಿ ಇಲ್ಲಿದೆ:
17 ಕಟ್ಟುನಿಟ್ಟಿನ ಷರತ್ತುಗಳೇನು?
FRUITS ನೋಂದಣಿ: FRUITS ತಂತ್ರಾಂಶದಲ್ಲಿ ನೋಂದಣಿಯಾಗಿ Farmer ID ಹೊಂದಿರುವ ಹಾಗೂ ಬರ ಘೋಷಣೆಯಾಗಿರುವ ತಾಲ್ಲೂಕು ಮತ್ತು ಬೆಳೆಗಳಿಗೆ ಮಾತ್ರ ಪರಿಹಾರ ಸೀಮಿತ.
ಸಮೀಕ್ಷಾ ವಿವರ: 226 ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿಗಳು ನಡೆಸಿರುವ ಸಮೀಕ್ಷೆ ಆಧಾರದ ಮೇಲೆ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆ ವಿವರಗಳು ನಮೂದಾಗಿರಬೇಕು.
SDRF ಮಾರ್ಗಸೂಚಿ: SDRF ಮಾರ್ಗಸೂಚಿಯನ್ವಯ ಅರ್ಹ ರೈತರಿಗೆ ಒಟ್ಟು ಪರಿಹಾರ ಮೊತ್ತವನ್ನು ಲೆಕ್ಕ ಹಾಕಿ, ಅರ್ಹತೆಗೆ ಅನುಗುಣವಾಗಿ ₹2,500 ಬೆಳೆ ಪರಿಹಾರ ನೀಡುವುದು.
ಆಧಾರ್ ಹಾಗೂ DBT: FRUITS ನಲ್ಲಿ Farmer ID ಹೊಂದಿ ಆಧಾರ್ ಜೋಡಣೆಯಾಗಿರುವ ಅರ್ಹ ರೈತರಿಗೆ ನೇರವಾಗಿ DBT ಮೂಲಕ ಹಣ ಸಂದಾಯ.
ಭೂಸ್ವಾಧೀನ ಜಮೀನು: ಕೃಷಿ ಜಮೀನು ಭೂಸ್ವಾಧೀನಕ್ಕೆ ಒಳಪಟ್ಟಿದ್ದರೆ ಅಂತಹ ರೈತರಿಗೆ ಪರಿಹಾರ ಸಿಗುವುದಿಲ್ಲ.
ಕೃಷಿಯೇತರ ಭೂಮಿ: ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿದ್ದು ಸಮೀಕ್ಷೆಯಾಗಿದ್ದರೂ ಪರಿಹಾರ ಲಭ್ಯವಿಲ್ಲ.
ಸರ್ಕಾರಿ ಜಮೀನು: ಸರ್ಕಾರಿ ಜಮೀನುಗಳನ್ನು 'ಭೂಮಿ' ದತ್ತಾಂಶದಲ್ಲಿ ಗುರುತಿಸಿ ಬೆಳೆಹಾನಿ ಪರಿಹಾರ ಪಾವತಿಯಾಗದಂತೆ ಭೂಮಿ ಕೋಶದವರು ಗಮನಹರಿಸುವುದು.
NA (ಭೂ ಪರಿವರ್ತನೆ) ದಾಖಲೆ: RTC ಕಾಲಂನಲ್ಲಿ ಅಧಿಕೃತವಾಗಿ ಭೂ ಪರಿವರ್ತನೆ ಎಂದು ನಮೂದಾಗದಿದ್ದರೂ, ಇತ್ತೀಚಿನ ಬೆಳೆ ಸಮೀಕ್ಷೆಯ ದತ್ತಾಂಶದಲ್ಲಿ NA ಎಂದು ದಾಖಲಾಗಿರುವ ಜಮೀನುಗಳನ್ನು ಪರಿಹಾರಕ್ಕೆ ಪರಿಗಣಿಸುವಂತಿಲ್ಲ.
ಜಂಟಿ ಖಾತೆದಾರರು: ಜಂಟಿ ಖಾತೆದಾರರಾಗಿದ್ದಲ್ಲಿ FRUITS ತಂತ್ರಾಂಶದಲ್ಲಿ ನೋಂದಾಯಿಸಿದ ವ್ಯಕ್ತಿಗೆ ಅನುಗುಣವಾಗಿ ಮಾತ್ರ ಪರಿಹಾರ ಪಾವತಿ.
ಬಹು ಮಾಲೀಕತ್ವದ ಜಮೀನು: ಒಂದೇ ಹಿಸ್ಸಾ ಜಮೀನಿನಲ್ಲಿ ಬಹು ಮಾಲೀಕರಿದ್ದಲ್ಲಿ, ಒಂದೇ ಕ್ಷೇತ್ರಕ್ಕೆ ಎರಡು ಬಾರಿ ಪರಿಹಾರ ಪಾವತಿಯಾಗದಂತೆ ಭೂಮಿ ಸೆಲ್‌ನವರು ನೋಡಿಕೊಳ್ಳುವುದು.
ಡಬಲ್ ಪೇಮೆಂಟ್ ತಡೆ: ಒಂದೇ ಹಿಸ್ಸಾ ಜಮೀನಿಗೆ ಒಂದೇ ವ್ಯಕ್ತಿಗೆ ಎರಡು ಸಲ (ಡಬಲ್ ಪೇಮೆಂಟ್) ಪರಿಹಾರ ಪಾವತಿಯಾಗದಂತೆ ತಡೆಯುವುದು.
ಗರಿಷ್ಠ 2 ಹೆಕ್ಟೇರ್ ಮಿತಿ: ರೈತರು ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಾಲ್ಲೂಕುಗಳಲ್ಲಿ ಕೃಷಿ ಜಮೀನು ಹೊಂದಿದ್ದರೂ, ಒಟ್ಟಾರೆ ಗರಿಷ್ಠ 2 ಹೆಕ್ಟೇರ್‌ಗೆ ಮೀರದಂತೆ ಪರಿಹಾರ ನೀಡುವುದು.
ಗರಿಷ್ಠ ಬೆಳೆ ಪ್ರಮಾಣಕ್ಕೆ ಆದ್ಯತೆ: ಮೆಮೊರಾಂಡಮ್‌ನಲ್ಲಿ ನಮೂದಿಸಿದಂತೆ ಒಂದೇ ಹಿಸ್ಸಾ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆದಿದ್ದರೆ, ಗರಿಷ್ಠ ಪ್ರಮಾಣದಲ್ಲಿ ಬೆಳೆದ ಬೆಳೆಗೆ ಮಾತ್ರ 'payment logic' ಅನ್ವಯ ಪರಿಹಾರ ನೀಡುವುದು.
ಹೆಸರು ವ್ಯತ್ಯಾಸ (VAO ಪರಿಶೀಲನೆ): RTC ಯಲ್ಲಿರುವ ಹೆಸರು ಮತ್ತು ಬೆಳೆ ಸಮೀಕ್ಷೆಯಲ್ಲಿರುವ ಹೆಸರಿನಲ್ಲಿ ವ್ಯತ್ಯಾಸವಿದ್ದರೆ, ಗ್ರಾಮ ಆಡಳಿತಾಧಿಕಾರಿಗಳ ಲಾಗಿನ್‌ಗೆ ಕಳುಹಿಸಿ, 3 ದಿನಗಳಲ್ಲಿ ಸ್ಥಳೀಯ ಪರಿಶೀಲನೆ ನಡೆಸಿ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಷರಾ ನಮೂದಿಸುವುದು.
ಆಧಾರ್-RTC ಹೊಂದಾಣಿಕೆ (ತಹಶೀಲ್ದಾರ್ ಪರಿಶೀಲನೆ): ಆಧಾರ್ ಮತ್ತು RTC ಯಲ್ಲಿನ ಹೆಸರುಗಳಲ್ಲಿ ಶೇ. 70 ಕ್ಕಿಂತ ಹೆಚ್ಚು ಹೊಂದಾಣಿಕೆ ಇಲ್ಲದ ಪ್ರಕರಣಗಳನ್ನು ತಹಶೀಲ್ದಾರರ ಲಾಗಿನ್‌ಗೆ ಕಳುಹಿಸಿ, 5 ದಿನಗಳಲ್ಲಿ ಸ್ಥಳೀಯ ಪರಿಶೀಲನೆ ನಡೆಸಿ ಬಯೋಮೆಟ್ರಿಕ್ ಮೂಲಕ ಷರಾ ದಾಖಲಿಸುವುದು.
ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ: ಪರಿಹಾರ ವಿತರಣೆ ಆರಂಭಿಸುವ ಮುನ್ನ ಎಲ್ಲಾ ನಿಯಮಗಳನ್ನು ಪರಿಶೀಲಿಸಿ, ಜಿಲ್ಲೆಯ ಪರಿಹಾರ ದತ್ತಾಂಶಕ್ಕೆ ಜಿಲ್ಲಾಧಿಕಾರಿಗಳು ಡಿಜಿಟಲ್ ಸಹಿ ಮೂಲಕ ಅಂತಿಮ ಅನುಮೋದನೆ ನೀಡುವುದು.
ವಿವರ ದಾಖಲೀಕರಣ: ಜಿಲ್ಲಾವಾರು, ತಾಲ್ಲೂಕುವಾರು, ಗ್ರಾಮವಾರು ಹಾಗೂ ಫಲಾನುಭವಿವಾರು ವಿತರಿಸಲಾದ ಬೆಳೆಹಾನಿ ಪರಿಹಾರದ ಸಮಗ್ರ ವಿವರಗಳನ್ನು ಭೂಮಿ ಸೆಲ್ ನಿರ್ವಹಿಸುವುದು.
ಹಾಗಾದ್ರೆ, ಪರಿಹಾರಕ್ಕೆ ಯಾರು ಅರ್ಹರಲ್ಲ:
ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಜಮೀನುಗಳು.
ಸರ್ಕಾರಿ ಜಮೀನುಗಳು.
ನೀರಾವರಿ ಯೋಜನೆಗಳಿಗಾಗಿ ಈಗಾಗಲೇ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಪಡೆದಿರುವ ಜಮೀನುಗಳು (ಪಹಣಿಯಲ್ಲಿ ಹೆಸರು ಬದಲಾಗದಿದ್ದರೂ ಪರಿಹಾರ ಲಭಿಸುವುದಿಲ್ಲ).
ಮುಂದುವರೆದು, ಕೇಂದ್ರ ಸರ್ಕಾರದಿಂದ NDRF ಅನುದಾನ ಬಿಡುಗಡೆಯಾಗುವುದು ತಡವಾಗುತ್ತಿರುವ ಕಾರಣ, ರಾಜ್ಯ ಸರ್ಕಾರವು ತನ್ನದೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಈ ₹1,250 ಕೋಟಿ ವೆಚ್ಚದ ತಾತ್ಕಾಲಿಕ ನೆರವನ್ನು ಒದಗಿಸುತ್ತಿದೆ. ಕೇಂದ್ರದಿಂದ ಪೂರ್ಣ ಹಣ ಬಂದ ಬಳಿಕ ಉಳಿದ ಹೆಚ್ಚುವರಿ ಪರಿಹಾರವನ್ನು ಜಮೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.