ಅಗತ್ಯವಿದ್ದರೆ ಕರ್ನಾಟಕ ಸರ್ಕಾರದ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಮಸೂದೆ-2026ರ ಕುರಿತು ವಿಧಾನಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಲು ಸಿದ್ಧ; ಸಾರ್ವಜನಿಕರ ವಿಶಾಲ ಹಿತದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಸಿದ್ಧ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಮಸೂದೆ-2026 ಕುರಿತು ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಮಸೂದೆಯನ್ನು ವಿಧಾನಮಂಡಲದ ಎರಡೂ ಸದನಗಳು ಅಂಗೀಕರಿಸಿದ್ದು, ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಸೇರಿದಂತೆ ಬೆಂಗಳೂರಿನ ಪ್ರಮುಖ ಹಸಿರು ಪ್ರದೇಶಗಳಿಗೆ ಅನ್ವಯವಾಗುವ 1975ರ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಂಗಳೂರು ನಿವಾಸಿಗಳು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ಜಾಗೃತಿ ನಡಿಗೆ ನಡೆಸಿದ್ದರು.
ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕಳೆದ ವಾರ ಯಾವುದೇ ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕರಿಸಲಾಯಿತು.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮಸೂದೆಯನ್ನು ವಿರೋಧಿಸಿದ್ದು, ಮಸೂದೆಗೆ ಒಪ್ಪಿಗೆ ನೀಡದಂತೆ ರಾಜ್ಯಪಾಲರಿಗೆ ಮನವಿಯನ್ನೂ ಸಲ್ಲಿಸಿವೆ.
ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ 17 ಕಿ.ಮೀ. ಸುರಂಗ ರಸ್ತೆ ಯೋಜನೆಯ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಹತ್ವ ಪಡೆದಿದೆ. ಮೂಲಗಳ ಪ್ರಕಾರ, ಈ ಯೋಜನೆಗೆ ಲಾಲ್‌ಬಾಗ್‌ನ ಸುಮಾರು 6 ಎಕರೆ ಜಮೀನನ್ನು ತಾತ್ಕಾಲಿಕವಾಗಿ ಹಾಗೂ 1 ಎಕರೆ ಜಮೀನನ್ನು ಶಾಶ್ವತವಾಗಿ ಬಳಸಿಕೊಳ್ಳಬೇಕಾಗಿದೆ.