28 ವರ್ಷಗಳ ಬಳಿಕ ಪತ್ನಿಯ ಸಾವಿನ ಬೆನ್ನೇರಿ ಬಂದ 73ರ ವೃದ್ಧ! AI Image
ರಾಜ್ಯ

28 ವರ್ಷಗಳ ಬಳಿಕ ಪತ್ನಿ ಸಾವಿನ ಬೆನ್ನೇರಿ ಬಂದ 73ರ ವೃದ್ಧ! ಕೋಟಿ ಕೋಟಿ ಆಸ್ತಿ ಕಬಳಿಕೆ ಆರೋಪದಲ್ಲಿ ಪೊಲೀಸರಿಗೆ ದೂರು ನೀಡಿದ ಪತಿ; ಮೈಸೂರಿನ ತವರು ಮನೆಯಲ್ಲಿ ನಡೆದಿದ್ದೇನು?

ಸಾಮಾನ್ಯವಾಗಿ ಕಾಲ ಕಳೆದಂತೆ ಹಳೆಯ ಘಟನೆಗಳು ಮರೆತುಹೋಗುತ್ತವೆ ಎಂಬ ಮಾತಿದೆ. ಆದರೆ ಸುಮಾರು ಮೂರು ದಶಕಗಳ ಕಾಲ ಮನಸ್ಸಿನಲ್ಲೇ ಉಳಿದಿದ್ದ ಒಂದು ಸಂಶಯ ಮತ್ತು ಕಳೆದುಹೋದ ಕೋಟ್ಯಂತರ ರೂಪಾಯಿ ಆಸ್ತಿಯ ರಹಸ್ಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಆ ಕುರಿತ ವರದಿ ಇಲ್ಲಿದೆ:

ಮೈಸೂರು: ಸಾಮಾನ್ಯವಾಗಿ ಕಾಲ ಕಳೆದಂತೆ ಹಳೆಯ ಘಟನೆಗಳು ಮರೆತುಹೋಗುತ್ತವೆ ಎಂಬ ಮಾತಿದೆ. ಆದರೆ ಸುಮಾರು ಮೂರು ದಶಕಗಳ ಕಾಲ ಮನಸ್ಸಿನಲ್ಲೇ ಉಳಿದಿದ್ದ ಒಂದು ಸಂಶಯ ಮತ್ತು ಕಳೆದುಹೋದ ಕೋಟ್ಯಂತರ ರೂಪಾಯಿ ಆಸ್ತಿಯ ರಹಸ್ಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಹೌದು, 28 ವರ್ಷಗಳ ಹಿಂದೆ ತವರು ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪತ್ನಿಯ ಸಾವಿನ ಸತ್ಯಾಸತ್ಯತೆ ಹಾಗೂ ಆಕೆಯ ಹೆಸರಲ್ಲಿದ್ದ ಅಪಾರ ಆಸ್ತಿ ಕಬಳಿಕೆಯಾಗಿರುವ ಕುರಿತು ವೃದ್ಧ ಪತಿಯೊಬ್ಬರು ನೀಡಿರುವ ದೂರು ಮೈಸೂರಿನಲ್ಲಿ ಭಾರಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಬೆಂಗಳೂರು ಬಸವೇಶ್ವರನಗರದ ಶಾರದಾ ಕಾಲೊನಿ ನಿವಾಸಿ ಎನ್.ಎನ್. ಪ್ರಸಾದ್ (73) ಅವರೊಂದಿಗೆ ಮೈಸೂರಿನ ಚಾಮುಂಡಿಪುರಂ ನಿವಾಸಿ, ಇಂಜಿನಿಯರ್ ಗೌರಿಶಂಕರ್ ಅವರ ಪುತ್ರಿ ಪದ್ಮಜಾ ಅವರ ವಿವಾಹ 1988ರ ಜನವರಿ 24ರಂದು ನಡೆದಿತ್ತು. ಇನ್ನು ಮದುವೆಯಾದ ನಂತರ ಈ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ, 1998ರಲ್ಲಿ ಭಾರತಕ್ಕೆ ಬಂದಿದ್ದಾಗ ಪದ್ಮಜಾ ಮೈಸೂರಿನ ತಾಯಿ ಮನೆಯಲ್ಲೇ ಉಳಿದುಕೊಂಡಿದ್ದರು. ಅದೇ ವರ್ಷದ ಡಿಸೆಂಬರ್ 29ರಂದು ಪದ್ಮಜಾ ಅವರು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದರು. ಅಂದು ಪ್ರಸಾದ್ ಅವರು ಅಂತ್ಯಸಂಸ್ಕಾರ ಮುಗಿಸಿ, ಯಾವುದೇ ಅನುಮಾನವಿಲ್ಲದೆ ಮತ್ತೆ ಅಮೆರಿಕಕ್ಕೆ ಮರಳಿದ್ದರು.

28 ವರ್ಷಗಳ ಬಳಿಕ ಸಂಶಯ ಬರಲು ಕಾರಣವೇನು?

ಇಷ್ಟು ಸುದೀರ್ಘ ವರ್ಷಗಳ ಕಾಲ ಪತ್ನಿಯ ಸಾವು ಸಹಜವೆಂದೇ ನಂಬಿದ್ದ ಪ್ರಸಾದ್ ಅವರಿಗೆ ಇತ್ತೀಚೆಗೆ ಪತ್ನಿಯ ಕುಟುಂಬದವರೊಂದಿಗೆ ನಡೆದ ಮಾತುಕತೆ ಮತ್ತು ಕೆಲವು ದಾಖಲೆಗಳನ್ನು ಪರಿಶೀಲಿಸಿದಾಗ ದೊಡ್ಡ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಅದುವೇ, ದೂರುದಾರರ ಮಾವ ಗೌರಿಶಂಕರ್ ಅವರು ಎಂಜಿನಿಯರ್ ಆಗಿದ್ದು, ಮೂವರು ಹೆಣ್ಣುಮಕ್ಕಳ ಹೆಸರಿನಲ್ಲಿ ಷೇರು ಮಾರುಕಟ್ಟೆ ಹಾಗೂ ಸ್ಥಿರಾಸ್ತಿಗಳಲ್ಲಿ ಅಪಾರ ಹೂಡಿಕೆ ಮಾಡಿದ್ದರು. 2010ರಲ್ಲಿ ಗೌರಿಶಂಕರ್ ನಿಧನರಾದ ನಂತರ, ಅವಿವಾಹಿತೆಯಾಗಿದ್ದ ಹಿರಿಯ ಪುತ್ರಿ ಶೈಲಜಾ ಅವರು ಪ್ರಸಾದ್ ಅವರಿಗೆ ಮಹತ್ವದ ವಿಷಯವೊಂದನ್ನು ತಿಳಿಸಿದ್ದರು. ಪದ್ಮಜಾ ಅವರ ಹೆಸರಿನಲ್ಲಿದ್ದ ಆಸ್ತಿಗಳು ಹಾಗೂ ಷೇರು ಮಾರುಕಟ್ಟೆಯ ಲಾಭಾಂಶಗಳನ್ನು ನಕಲಿ ಸಹಿ ಹಾಕಿ ಕಬಳಿಸಲಾಗಿದೆ ಎಂದು ಶೈಲಜಾ ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ಶೈಲಜಾ ಕೂಡ ನಿಧನರಾಗಿದ್ದು ಇಡೀ ಪ್ರಕರಣಕ್ಕೆ ನಿಗೂಢ ತಿರುವು ನೀಡಿತು.

ಮುಂದುವರೆದು, ಇತ್ತೀಚೆಗೆ ಭಾರತದಲ್ಲಿರುವ ತಮ್ಮ ಕೌಟುಂಬಿಕ ಆಸ್ತಿಪಾಸ್ತಿಗಳ ದಾಖಲೆಗಳನ್ನು ಪರಿಶೀಲಿಸುವಾಗ, ಪದ್ಮಜಾ ಅವರ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಅವರ ತವರು ಮನೆಯ ಕಡೆಯವರು ಅಥವಾ ಸಂಬಂಧಿಕರು ತಮ್ಮ ಹೆಸರಿಗೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಇದರೊಂದಿಗೆ, ಪದ್ಮಜಾ ಅವರ ನಿಗೂಢ ಸಾವನ್ನು ಬಳಸಿಕೊಂಡು, ಆಕೆ ಬದುಕಿದ್ದಾಗಲೇ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ ಎಂಬಂತೆ ನಕಲಿ ಉಯಿಲು ಮತ್ತು ಮರಣ ಪ್ರಮಾಣಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಪ್ರಸಾದ್ ಅವರ ಗಮನಕ್ಕೆ ಬಂದಿದೆ. ಜೊತೆಗೆ, ದಾಖಲೆಗಳು ನಕಲಿಯಾಗಿರುವುದನ್ನು ನೋಡಿದಾಗ, 1998ರಲ್ಲಿ ಪದ್ಮಜಾ ಅವರು ಸಹಜವಾಗಿ ಸತ್ತಿಲ್ಲ; ಬದಲಿಗೆ ಆಕೆಯನ್ನು ಆಸ್ತಿಗಾಗಿ ಸಂಚು ರೂಪಿಸಿ ಕೊಲೆ ಮಾಡಿರಬಹುದು ಎಂಬ ಬಲವಾದ ಶಂಕೆ ಪ್ರಸಾದ್ ಅವರಿಗೆ ಬಂದಿದೆ.

ಅದರಂತೆ, ಬೆಂಗಳೂರು ಮೂಲದ ಶ್ರೀಕಾಂತ್, ಸುಧಾ ಸ್ವಾಮಿ, ಶ್ವೇತಾ ಮತ್ತು ದ್ವಾರಕನಾಥ್ ಎಂಬುವವರ ಮೇಲೆ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಿರುವ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 28 ವರ್ಷಗಳ ಬಳಿಕ ಬಂದಿರುವ ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!

ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸಹಪಾಠಿ ಮೇಲೆ ಹಲ್ಲೆ: ನಟ ದುನಿಯಾ ವಿಜಯ್ ಪುತ್ರನ ವಿರುದ್ಧ FIR ದಾಖಲು

Nepal Floods: 'ನೀವೇನ್ ದಾನ ಕೊಡ್ತಿಲ್ಲ.. ಪ್ರವಾಹಕ್ಕೆ ನೀವೇ ಕಾರಣ.. ಪರಿಹಾರ ಕೊಡಿ ಅಷ್ಟೇ': ಭಾರತ, ಚೀನಾ, ಅಮೆರಿಕಕ್ಕೆ ನೇಪಾಳ ಖಡಕ್ ಆಗ್ರಹ!

‘15 ರೂ. ಹೇರ್ ಡೈ’: ಕಿಂಗ್ ಚಾರ್ಲ್ಸ್ ಭೇಟಿಗೂ ಮುನ್ನ ಪಾಕಿಸ್ತಾನ ನಾಯಕ Babar Azam ಫುಲ್ ಟ್ರೋಲ್!

ಮೇಕೆದಾಟು ವಿಚಾರದಲ್ಲಿ ಕರ್ನಾಟಕ ದಿಟ್ಟ ಹೆಜ್ಜೆ; CWC ಮುಖ್ಯಸ್ಥರ ಜೊತೆ ಸಚಿವರ ಮಹತ್ವದ ಮಾತುಕತೆ