ಕರ್ನಾಟಕ ಲೋಕಾಯುಕ್ತ 
ರಾಜ್ಯ

ಸರ್ಕಾರಿ ಶಾಲೆಯ ಛಾವಣಿ ಬಿದ್ದು ಮಕ್ಕಳಿಗೆ ಗಾಯ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಕರ್ನಾಟಕ ಲೋಕಾಯುಕ್ತ!

ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಿರಿಯ ಎಂಜಿನಿಯರ್ ಅನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು: ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯೊಂದರಲ್ಲಿ ಬುಧವಾರ ತರಗತಿ ನಡೆಯುತ್ತಿದ್ದಾಗಲೇ ಕೊಠಡಿಯ ಛಾವಣಿಯ ಒಂದು ಭಾಗ ಕುಸಿದು ಬಿದ್ದು ಮಕ್ಕಳು ಗಾಯಗೊಂಡಿರುವ ಕುರಿತಾದ ಮಾಧ್ಯಮ ವರದಿಯ ಆಧಾರದ ಮೇಲೆ, ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಗುರುವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ, ಹೆಚ್ಚುವರಿ ಆಯುಕ್ತ, ಬಾಗಲಕೋಟೆ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ (BEO) ನೋಟಿಸ್ ಜಾರಿ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ, ಅಕ್ಟೋಬರ್ 7 ರಂದು ಖುದ್ದಾಗಿ ಹಾಜರಾಗಿ ವರದಿ ಸಲ್ಲಿಸುವಂತೆ ಧಾರವಾಡದ ಹೆಚ್ಚುವರಿ ಆಯುಕ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ನಿರ್ದೇಶಕರು ಹಾಗೂ ಬಿಇಒಗೆ (BEO) ನಿರ್ದೇಶನ ನೀಡಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ, ಬಾಗಲಕೋಟೆ ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ, ಕಟ್ಟಡಗಳ ಸ್ಥಿತಿಗತಿ, ಸುರಕ್ಷತಾ ಮಾನದಂಡಗಳು ಮತ್ತು ಮೂಲಸೌಕರ್ಯಗಳನ್ನು ಸುರಕ್ಷತಾ ಪರಿಶೀಲನೆ (safety audit) ನಡೆಸಲು ಹಾಗೂ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ.

ಈಮಧ್ಯೆ, ಬುಧವಾರ ನಡೆದ ಘಟನೆ ನಂತರ, ಬಾಗಲಕೋಟೆ ಜಿಲ್ಲಾಡಳಿತವು ದೀರ್ಘಕಾಲೀನ ಕ್ರಮಗಳೂ ಸೇರಿದಂತೆ ತ್ವರಿತ ಕ್ರಮಗಳನ್ನು ಕೈಗೊಂಡಿದೆ.

ಅಧಿಕೃತ ಹೇಳಿಕೆ ಪ್ರಕಾರ, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಎಂಟು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಡಿಸ್ಚಾರ್ಜ್ ಮಾಡಲಾಗಿದೆ.

ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಿರಿಯ ಎಂಜಿನಿಯರ್ ಅನ್ನು ಅಮಾನತುಗೊಳಿಸಲಾಗಿದೆ; ಹಾಗೆಯೇ, ಅದೇ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಅನ್ನು ಅಮಾನತುಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ.

ಜೊತೆಗೆ, DDPI, BEO ಮತ್ತು ತಾಲ್ಲೂಕು ಪಂಚಾಯತ್ EOಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ತಕ್ಷಣದ ಸುರಕ್ಷತಾ ಕ್ರಮವಾಗಿ, 4 ರಿಂದ 6ನೇ ತರಗತಿಯ ವಿದ್ಯಾರ್ಥಿಗಳನ್ನು ಸಮೀಪದ (1.5 ಕಿ.ಮೀ. ದೂರದಲ್ಲಿರುವ) ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಶಾಲೆಗೆ ಸ್ಥಳಾಂತರಿಸಲಾಗುತ್ತಿದೆ. ಸಾರಿಗೆ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದೆ.

1 ರಿಂದ 3ನೇ ತರಗತಿಯ ವಿದ್ಯಾರ್ಥಿಗಳು ಮುಗಳೊಳ್ಳಿ ಎಲ್‌ಟಿ ಶಾಲೆಯ ಸುರಕ್ಷಿತ ತರಗತಿ ಕೊಠಡಿಗಳಲ್ಲೇ ತಮ್ಮ ಕಲಿಕೆಯನ್ನು ಮುಂದುವರಿಸಲಿದ್ದಾರೆ. ಒಟ್ಟು ನಾಲ್ಕು ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಇವುಗಳಲ್ಲಿ ಎರಡು ಶಿಕ್ಷಣ ಇಲಾಖೆಯಿಂದ ಮತ್ತು ಉಳಿದ ಎರಡು VBGRAMG ಯೋಜನೆಯಡಿ ನಿರ್ಮಾಣವಾಗಲಿವೆ.

ಜಿಲ್ಲೆಯಲ್ಲಿರುವ ಒಟ್ಟು 9,449 ತರಗತಿ ಕೊಠಡಿಗಳ ರಚನಾತ್ಮಕ ಭದ್ರತೆಯನ್ನು, ಮುಂದಿನ ಒಂದು ತಿಂಗಳ ಒಳಗಾಗಿ PRED ಮತ್ತು PWD ಇಲಾಖೆಗಳು ಹಾಗೂ ಮೂರನೇ ಪಕ್ಷದ ಪರಿಶೀಲನೆಯ ಮೂಲಕ ಮರು-ಮೌಲ್ಯಮಾಪನ ಮಾಡಲಿವೆ.

ಶಾಲಾ ಆವರಣದಲ್ಲಿ ಸುರಕ್ಷಿತ ಕುಡಿಯುವ ನೀರು ಮತ್ತು ಸುರಕ್ಷಿತ ತರಗತಿ ಕೊಠಡಿಯ ವಾತಾವರಣ ಸೇರಿದಂತೆ, ಶಾಲೆಯ ಒಟ್ಟಾರೆ ಸುರಕ್ಷತೆಯನ್ನು ಪರಿಶೀಲಿಸಲು ಸೆಪ್ಟೆಂಬರ್ 3 ರಂದು ಪಿಡಬ್ಲ್ಯೂಡಿ (PWD), ಪಿಆರ್‌ಇಡಿ (PRED), ಆರ್‌ಡಬ್ಲ್ಯುಎಸ್ (RWS) ಮತ್ತು ಎಲ್ಲ ಬಿಇಒ (BEO) ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ನಡೆಸಲಾಯಿತು.

ಜಿಲ್ಲೆಯಾದ್ಯಂತ ಶಾಲಾ ಆವರಣಗಳ ಮೇಲೆ ಹಾದುಹೋಗಿರುವ ಅಧಿಕ ಒತ್ತಡದ (ಹೈ-ಟೆನ್ಷನ್) ವಿದ್ಯುತ್ ತಂತಿಗಳನ್ನು ತಕ್ಷಣವೇ ಗುರುತಿಸಿ ತೆರವುಗೊಳಿಸುವಂತೆ ಹೆಸ್ಕಾಂ (HESCOM) ಗೆ ಸೂಚನೆ ನೀಡಲಾಗಿದೆ. ಎಲ್ಲ ವಿದ್ಯಾರ್ಥಿಗಳ ಸಂಪೂರ್ಣ ಸುರಕ್ಷತೆ ಮತ್ತು ಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

ಮಳೆ ಕೊರತೆ, ಬರದ ಆತಂಕ; ರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಾಲನೆ

ನನ್ನ ನಿರಾಯುಧ ಪತಿ ಕೊಂದ ನೀನು ಗಲ್ಲು ಶಿಕ್ಷೆಗೆ ಯೋಗ್ಯ: ವಿಧವೆಯರ ಬಗ್ಗೆ ನಿನಗೇನು ಗೊತ್ತು? ಸಂತ್ರಸ್ತನ ಸೋಗು ಹಾಕಬೇಡ; ನಿರ್ಮಲಾ ಖನ್ನಾ ಆಕ್ರೋಶ

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!