ಕೆಐಎ ರಸ್ತೆ ಫ್ಲೈಓವರ್‌ನಿಂದ ದ್ವಿಚಕ್ರ ವಾಹನ ಸವಾರರನ್ನು ಬೇರೆಡೆಗೆ ತಿರುಗಿಸಿದ ಸಂಚಾರ ಪೊಲೀಸ್ ಸಿಬ್ಬಂದಿ 
ರಾಜ್ಯ

ಬೆಂಗಳೂರಿನ 4 ಪ್ರಮುಖ ಫ್ಲೈಓವರ್‌ಗಳಲ್ಲಿ ಬೈಕ್-ಆಟೋ ಸಂಚಾರ ಬಂದ್: ಟ್ರಾಫಿಕ್ ಜಾಮ್'ಗೆ ಸವಾರರು ಹೈರಾಣ, ಪೊಲೀಸರ ವಿರುದ್ಧ ಜನಾಕ್ರೋಶ..!

ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್, ಪೀಣ್ಯ ಮೇಲ್ಸೇತುವೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾವಿಹಾರ ಜಂಕ್ಷನ್‌ವರೆಗೆ) ಹಾಗೂ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ನಿರ್ಬಂಧ ಜಾರಿಗೆ ಬಂದಿದೆ.

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಸಂಚಾರಿ ಪೊಲೀಸರು ನಗರದ ನಾಲ್ಕು ಪ್ರಮುಖ ಫ್ಲೈಓವರ್‌ಗಳಲ್ಲಿ ಹೊಸ ವಾಹನ ನಿರ್ಬಂಧಗಳನ್ನು ಜಾರಿಗೆ ತಂದಿದ್ದಾರೆ. ಶುಕ್ರವಾರದಿಂದಲೇ ಈ ನಿಯಮ ಅನ್ವಯವಾಗುತ್ತಿದ್ದು, ವಾಹನ ಸವಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಿರ್ಬಂಧದಿಂದ ಅನಿವಾರ್ಯವಾಗಿ ಸುತ್ತು ಮಾರ್ಗಗಳಲ್ಲಿ ಸಂಚರಿಸಬೇಕಾಗಿದ್ದು, ಇದರಿಂದ ನಗರದ ಇತರ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುತ್ತಿದೆ ಎಂದು ವಾಹನ ಸವಾರರು ಹೇಳಿದ್ದಾರೆ.

ಅಪಘಾತಗಳನ್ನು ನಿಯಂತ್ರಿಸಿ ರಸ್ತೆ ಸುರಕ್ಷತೆ ಸುಧಾರಿಸುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ಶುಕ್ರವಾರ ಬೆಳಗ್ಗೆಯಿಂದ ಈ ನಿರ್ಬಂಧಗಳನ್ನು ಜಾರಿಗೆ ತಂದಿದ್ದಾರೆ.

ವಾಹನ ಸವಾರರಿಗೆ ಮಾಹಿತಿ ನೀಡಲು ಫ್ಲೈಓವರ್‌ಗಳ ಬಳಿ ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಪೊಲೀಸರು ಧ್ವನಿವರ್ಧಕಗಳ ಮೂಲಕವೂ ಜಾಗೃತಿ ಮೂಡಿಸಿದರು.

ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್, ಪೀಣ್ಯ ಮೇಲ್ಸೇತುವೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾವಿಹಾರ ಜಂಕ್ಷನ್‌ವರೆಗೆ) ಹಾಗೂ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ನಿರ್ಬಂಧ ಜಾರಿಗೆ ಬಂದಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯಲ್ಲಿ ಸೆಪ್ಟೆಂಬರ್ 11ರಿಂದ ನಿರ್ಬಂಧ ಜಾರಿಗೆ ಬರಲಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆಯಲ್ಲಿ ಮಾತ್ರ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆಲವು ಫ್ಲೈಓವರ್‌ಗಳಲ್ಲಿ ಆಟೊರಿಕ್ಷಾಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಭಾರಿ ಟ್ರಕ್‌ಗಳು ಸೇರಿದಂತೆ ಸರಕು ಸಾಗಣೆ ವಾಹನಗಳಿಗೆ ಪೀಕ್ ಅವಧಿಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆಯನ್ನು ನಿಯಮಿತವಾಗಿ ಬಳಸುತ್ತಿದ್ದ ರಮೇಶ್ ಎಂಬ ಬೈಕ್ ಸವಾರ ಮಾತನಾಡಿ, “ದ್ವಿಚಕ್ರ ವಾಹನಗಳ ಎಂಜಿನ್ ಸಾಮರ್ಥ್ಯವನ್ನು ಪರಿಗಣಿಸಿ ಪೊಲೀಸರು ನಿರ್ಬಂಧ ವಿಧಿಸಬೇಕಿತ್ತು. ದುಬಾರಿ ಬೈಕ್‌ಗಳ ಸವಾರರು ವೇಗವಾಗಿ ಚಲಿಸಬಹುದು. ಆದರೆ, ವಿದ್ಯುತ್ ಸ್ಕೂಟರ್‌ಗಳು ಮತ್ತು ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಸವಾರರಿಗೇಕೆ ನಿರ್ಬಂಧ?” ಎಂದು ಪ್ರಶ್ನಿಸಿದ್ದಾರೆ.

ನಗರದ ರಸ್ತೆ ಬಳಕೆದಾರರಲ್ಲಿ ಸುಮಾರು ಶೇ.60ರಷ್ಟು ಮಂದಿ ದ್ವಿಚಕ್ರ ವಾಹನ ಹಾಗೂ ಆಟೊರಿಕ್ಷಾ ಬಳಕೆದಾರರಾಗಿದ್ದಾರೆ. ಇವರಿಗೆ ಫ್ಲೈಓವರ್ ಬಳಸಲು ಅವಕಾಶ ನೀಡದಿದ್ದರೆ ಸಂಚಾರ ಅನಿವಾರ್ಯವಾಗಿ ಇತರ ರಸ್ತೆಗಳಿಗೆ ಸ್ಥಳಾಂತರಗೊಳ್ಳಲಿದೆ ಎಂದು ಹೇಳಿದ್ದಾರೆ.

ಅಪಘಾತ ತಡೆಗೆ ಕ್ರಮಗಳ ಅಗತ್ಯವಿದೆ ಎಂಬುದನ್ನು ಹಲವು ವಾಹನ ಸವಾರರು ಒಪ್ಪಿಕೊಂಡರೂ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಸರ್ವಿಸ್ ರಸ್ತೆಗಳನ್ನು ಸುಧಾರಿಸುವಂತೆ ಸಂಚಾರ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಆಟೊರಿಕ್ಷಾ ಚಾಲಕರು ಕೂಡ ನಿರ್ಬಂಧದಿಂದ ಪ್ರಯಾಣದ ಅವಧಿ ಹಾಗೂ ಇಂಧನ ವೆಚ್ಚ ಹೆಚ್ಚಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತ, ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲು ಫ್ಲೈಓವರ್‌ಗಳ ಮೇಲೆ ಹಗಲು-ರಾತ್ರಿ ನಿಗಾ ವಹಿಸಬೇಕಾಗಿರುವುದರಿಂದ ಪೊಲೀಸರಿಗೆ ಕಾರ್ಯದ ಒತ್ತಡ ಹೆಚ್ಚಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ನಿರ್ಬಂಧ ಜಾರಿಗಾಗಿ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ ಎಂದು ಹಿರಿಯ ಸಂಚಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸದ್ಯ ವಾಹನ ಸವಾರರಿಗೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ನಿರ್ಬಂಧಿತ ವಾಹನಗಳ ಸಂಚಾರವನ್ನು ತಡೆಯಲಾಗುತ್ತಿದೆ” ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಒಬ್ಬ ರಾಜಿನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ; ಸಿಎಂ ಡಿಕೆ ಶಿವಕುಮಾರ್

Park Billiಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ: ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!