ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

‘ನಿರ್ಲಕ್ಷ್ಯ ಮಾಡಿದ್ರೆ ಕ್ರಮ ಖಚಿತ’: ನಗರದಲ್ಲಿ ಸಚಿವ ಕೃಷ್ಣ ಬೈರೇಗೌಡ ದಿಢೀರ್ ತಪಾಸಣೆ, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ!

ಶನಿವಾರ ಬೆಳಗ್ಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ, ಜಯಂತಿನಗರ, ರಾಮಮೂರ್ತಿನಗರ ಹಾಗೂ ಕಸ್ತೂರಿನಗರ ಸೇರಿದಂತೆ ಹಲವು ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.

ಬೆಂಗಳೂರು: ನಗರದ ನಾಗರಿಕ ಸೇವೆಗಳಲ್ಲಿ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬೆಳಗ್ಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ, ಜಯಂತಿನಗರ, ರಾಮಮೂರ್ತಿನಗರ ಹಾಗೂ ಕಸ್ತೂರಿನಗರ ಸೇರಿದಂತೆ ಹಲವು ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.

ಈ ವೇಳೆ ಸ್ವಚ್ಛತೆ, ಕಸ ವಿಲೇವಾರಿ, ಪೌರಕಾರ್ಮಿಕರ ಕಾರ್ಯನಿರ್ವಹಣೆ, ರಸ್ತೆ ಹಾಗೂ ಫುಟ್‌ಪಾತ್‌ಗಳ ನಿರ್ವಹಣೆ, ರಾಜಕಾಲುವೆಗಳ ಸ್ವಚ್ಛತೆ, ಕೆರೆಗಳ ನಿರ್ವಹಣೆ, ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ನಾಗರಿಕ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮೂಲಭೂತ ನಾಗರಿಕ ಸೇವೆಗಳು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆ ಅಥವಾ ಸುರಕ್ಷತಾ ಸಮಸ್ಯೆ ಉಂಟಾಗಬಾರದು ಎಂದು ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿದಿನ ಮನೆಮನೆಗೆ ಹೋಗಿ ಕಸ ಸಂಗ್ರಹಿಸಿ

ಹೊರಮಾವಿನ ಗಾಂಧಿ ಸರ್ಕಲ್‌ನಲ್ಲಿ ಮನೆಮನೆಗೆ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಪರಿಶೀಲಿಸಿದ ಸಚಿವರು, ಕಸ ಸಂಗ್ರಹಣೆ ಮತ್ತು ವಿಲೇವಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರತಿಯೊಂದು ಮನೆಯಿಂದಲೂ ಪ್ರತಿದಿನ ಕಸ ಸಂಗ್ರಹವಾಗಬೇಕು ಹಾಗೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಅವರು ಸೂಚಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದನ್ನು ತಡೆಯಲು ಮಾರ್ಷಲ್‌ಗಳು ನಿರಂತರವಾಗಿ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ರಸ್ತೆ, ಫುಟ್‌ಪಾತ್ ಹಾಗೂ ಸ್ಲ್ಯಾಬ್‌ಗಳ ಮೇಲೆ ಬಿದ್ದಿರುವ ನಿರ್ಮಾಣ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಿ, ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು. ವಾರ್ಡ್‌ನಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಗರ ಕೆರೆ ಸುತ್ತಮುತ್ತಲಿನ ಸ್ವಚ್ಛತೆ ಪರಿಶೀಲನೆ

ಅಗರ ಕೆರೆಗೆ ಭೇಟಿ ನೀಡಿದ ಬೈರೇಗೌಡ, ಕೆರೆ ಸುತ್ತಮುತ್ತಲಿನ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ಪರಿಶೀಲಿಸಿದರು. ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಿ, ನಿಯಮಿತವಾಗಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ಆವರಣದ ಹೊರಭಾಗದಲ್ಲಿರುವ ಬೆಸ್ಕಾಂ ವಿದ್ಯುತ್ ಪ್ಯಾನೆಲ್‌ಗಳನ್ನೂ ಪರಿಶೀಲಿಸಿದ ಅವರು, ಸಾರ್ವಜನಿಕರಿಗೆ ಅಪಾಯವಾಗದಂತೆ ಅವುಗಳನ್ನು ಸೂಕ್ತ ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಕೆರೆ ಸುತ್ತಮುತ್ತ ಸಂಭವನೀಯ ಒತ್ತುವರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಒತ್ತುವರಿ ಕಂಡುಬಂದಲ್ಲಿ ಕಾನೂನು ಪ್ರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ಫುಟ್‌ಪಾತ್‌ಗಳ ಮೇಲಿನ ಒತ್ತುವರಿಗಳನ್ನು ತೆರವುಗೊಳಿಸಿ, ಪಾದಚಾರಿಗಳ ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.

ರಸ್ತೆ ಅಗೆದರೆ ಕಾಮಗಾರಿ ಮುಗಿದ ತಕ್ಷಣ ದುರಸ್ತಿ

ಯುಟಿಲಿಟಿ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆದ ಬಳಿಕ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಅವುಗಳನ್ನು ಪುನಃ ದುರಸ್ತಿ ಮಾಡಬೇಕು. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಕನಿಷ್ಠ ತೊಂದರೆಯಾಗುವಂತೆ ಕ್ರಮ ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೆ ಕಾಮಗಾರಿಗಳ ಬಗ್ಗೆಯೂ ಪರಿಶೀಲನೆ

ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ರೈಲ್ವೆ ನಿಲ್ದಾಣದ ಕಾಮಗಾರಿಗಳ ಪ್ರಗತಿ ಹಾಗೂ ಸುತ್ತಮುತ್ತಲಿನ ಸ್ವಚ್ಛತೆಯನ್ನು ಸಚಿವರು ಪರಿಶೀಲಿಸಿದರು. ರಸ್ತೆ ಬದಿಯಲ್ಲಿ ಬಿದ್ದಿರುವ ನಿರ್ಮಾಣ ತ್ಯಾಜ್ಯ, ಮಣ್ಣು ಹಾಗೂ ಇತರ ಸಾಮಗ್ರಿಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದರು. ಬೆಂಗಳೂರು ಪೂರ್ವ ನಗರ ಪಾಲಿಕೆ ಅಧಿಕಾರಿಗಳು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಮಳೆಗಾಲ: ರಾಜಕಾಲುವೆ ಸ್ವಚ್ಛತೆಗೆ ಸೂಚನೆ

ಮುಂಗಾರು ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜಕಾಲುವೆಗಳನ್ನು ನಿಯಮಿತವಾಗಿ ಹೂಳೆತ್ತಿ ಸ್ವಚ್ಛಗೊಳಿಸಬೇಕು ಎಂದು ಸಚಿವರು ಸೂಚಿಸಿದರು. ಸಂಬಂಧಪಟ್ಟ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ನಾಗರಿಕರು ಎದುರಿಸುವ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.

‘ಶೇ.30 ಪೌರಕಾರ್ಮಿಕರು ಕೆಲಸಕ್ಕೇ ಬರುತ್ತಿಲ್ಲ’

ತಪಾಸಣೆ ವೇಳೆ ಕೆಲವು ಪೌರಕಾರ್ಮಿಕರು ತಮ್ಮ ಸೇವೆಗಳನ್ನು ಖಾಯಂಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೈರೇಗೌಡ, “ಸುಮಾರು ಶೇ.30ರಷ್ಟು ಪೌರಕಾರ್ಮಿಕರು ಪ್ರತಿದಿನದ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಮನೆಮನೆಗೆ ಕಸ ಸಂಗ್ರಹಿಸುವ ಕೆಲಸವೂ ನಡೆಯುತ್ತಿಲ್ಲ” ಎಂದು ಹೇಳಿದರು.

ಇದರಿಂದ ಹಲವು ಪ್ರದೇಶಗಳಲ್ಲಿ ಜನರು ರಸ್ತೆಗಳ ಮೇಲೆಯೇ ಕಸ ಎಸೆಯುವಂತಾಗಿದೆ. ನಗರದ ಹಲವು ಭಾಗಗಳಲ್ಲಿ ದುರ್ವಾಸನೆ ಬೀರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. “ಪ್ರತಿದಿನ ಸಾರ್ವಜನಿಕರಿಂದ ನಮ್ಮ ವಿರುದ್ಧ ಟೀಕೆ ಕೇಳಿಬರುತ್ತಿದೆ.

ಕೆಲಸಕ್ಕೆ ಬಾರದವರನ್ನು ಅಥವಾ ಕೆಲಸಕ್ಕೆ ಬಂದು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದವರನ್ನು ಖಾಯಂಗೊಳಿಸುವುದು ಏಕೆ?” ಎಂದು ಬೈರೇಗೌಡ ಪ್ರಶ್ನಿಸಿದರು. ಪೌರಕಾರ್ಮಿಕರ ಸೇವಾ ಖಾಯಂ ವಿಚಾರವನ್ನು ಹೊಣೆಗಾರಿಕೆ ಹಾಗೂ ಕರ್ತವ್ಯ ನಿರ್ವಹಣೆಗೆ ಪರ್ಯಾಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

Hanuman Ansh: ಥಿಯೇಟರ್ ಗಳಲ್ಲಿ ಭಕ್ತಿಯ ಅಲೆ, ಚಪ್ಪಲ್ಲಿ ಬಿಚ್ಚಿಟ್ಟು, ಹನುಮಾನ್ ಚಾಲೀಸಾ ಪಠಿಸಿದ ಪ್ರೇಕ್ಷಕರು! Video ವೈರಲ್

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

ಪ್ರಧಾನಿ ಮೋದಿ ಮೆಚ್ಚಿದ ಇಡ್ಲಿ ನಿಂಗಮ್ಮನಿಗೆ ಸಂಕಷ್ಟ: ಅಂಗಡಿ ನಡೆಸದಂತೆ GBA ಅಧಿಕಾರಿಗಳ ವಾರ್ನಿಂಗ್!