ರಾಮಲಿಂಗಾ ರೆಡ್ಡಿ ಮತ್ತು ಸಿಎಂ ಡಿಕೆ.ಶಿವಕುಮಾರ್. 
ರಾಜ್ಯ

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಈ ಬಾರಿಯೂ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ 100 ದಿನಗಳ ಸಂಭ್ರಮಕ್ಕೆ ಸಿದ್ಧತೆಗಳು ಚುರುಕುಗೊಂಡಿವೆ. ವಿಶೇಷ ತಂಡವೊಂದು ಕಾರ್ಯಕ್ರಮಗಳ ರೂಪುರೇಷೆ ಹಾಗೂ ವಿವಿಧ ನೀತಿ ಘೋಷಣೆಗಳನ್ನು ಅಂತಿಮಗೊಳಿಸುತ್ತಿದೆ ಎನ್ನಲಾಗಿದೆ.

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು ಯಶಸ್ವಿಯಾಗಿ 100 ದಿನಗಳನ್ನು ಪೂರೈಸುತ್ತಿದ್ದು, ಈ ಐತಿಹಾಸಿಕ ಮೈಲಿಗಲ್ಲನ್ನು ಸ್ಮರಣೀಯವಾಗಿಸಲು ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಜನತೆಗೆ ವಿಶೇಷವಾಗಿ ಅನ್ನದಾತರಿಗೆ ದೊಡ್ಡ ಕೊಡುಗೆಗಳನ್ನು ಘೋಷಿಸಲು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮುಂದಾಗಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 10ರಂದು ಅಧಿಕಾರದ 100 ದಿನಗಳನ್ನು ಪೂರ್ಣಗೊಳಿಸಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳು ಹಾಗೂ ಮಹತ್ವದ ಘೋಷಣೆಗಳಿಗೆ ಸಿದ್ಧತೆ ನಡೆಸುತ್ತಿದೆ.

ಕರ್ನಾಟಕದಲ್ಲಿ ಈ ಹಿಂದೆ ಆರ್. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಅಧಿಕಾರದ ಮೊದಲ 100 ದಿನಗಳನ್ನು ಇದೇ ರೀತಿಯಲ್ಲಿ ಗುರುತಿಸಲಾಗಿತ್ತು.

ಈ ಬಾರಿಯೂ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ 100 ದಿನಗಳ ಸಂಭ್ರಮಕ್ಕೆ ಸಿದ್ಧತೆಗಳು ಚುರುಕುಗೊಂಡಿವೆ. ವಿಶೇಷ ತಂಡವೊಂದು ಕಾರ್ಯಕ್ರಮಗಳ ರೂಪುರೇಷೆ ಹಾಗೂ ವಿವಿಧ ನೀತಿ ಘೋಷಣೆಗಳನ್ನು ಅಂತಿಮಗೊಳಿಸುತ್ತಿದೆ ಎನ್ನಲಾಗಿದೆ.

ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ ಅವರು ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದು, ರೈತರಿಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆಗಳು ಹೊರಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲೂ ಕಾರ್ಯಕ್ರಮಗಳು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೆಲವು ಮಹತ್ವದ ಘೋಷಣೆಗಳು ನಿರೀಕ್ಷೆಯಲ್ಲಿವೆ ಎಂದು ತಿಳಿಸಿದ್ದಾರೆ.

ಹೀಗಾಗಿ, ಸರ್ಕಾರದ 100 ದಿನಗಳ ಸಂಭ್ರಮ ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗುತ್ತದೆಯೇ ಅಥವಾ ಜನರಿಗೆ ನೇರ ಪ್ರಯೋಜನ ನೀಡುವ ನಿರ್ಧಾರಗಳು ಹೊರಬರುತ್ತವೆಯೇ ಎಂಬ ಕುತೂಹಲ ರಾಜ್ಯದಲ್ಲಿ ಮೂಡಿದೆ.

ಈ ನಡುವೆ ಶಾಸಕ ಸುಧಾಮ್ ದಾಸ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಎಸ್‌ಸಿಪಿ-ಟಿಎಸ್‌ಪಿ) ಅನುದಾನದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ದಲಿತ ಸಮುದಾಯವು ಸರ್ಕಾರಕ್ಕೆ ಇತರೆ ಯಾವುದೇ ವರ್ಗಕ್ಕಿಂತ ಹೆಚ್ಚಿನ ಬೆಂಬಲ ನೀಡಿದೆ ಎಂದು ಹೇಳಿರುವ ಅವರು, ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಕೇವಲ ಕಾಗದದ ಮೇಲಷ್ಟೇ ಅಲ್ಲದೆ, ನಿಜವಾದ ಅರ್ಥದಲ್ಲೂ ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಸರ್ಕಾರ ತನ್ನ ಬದ್ಧತೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಕೀಯ ವಿಶ್ಲೇಷಕ ಬಿ.ಎಸ್. ಮೂರ್ತಿ ಅವರು ಮಾತನಾಡಿ, ಸರ್ಕಾರದ ಇದುವರೆಗಿನ ಕಾರ್ಯವೈಖರಿ ಬಗ್ಗೆ ತುಸು ಮಿತವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಡಳಿತ ಆರಂಭದಲ್ಲೇ ನಿಧಾನಗತಿಯಲ್ಲಿ ಸಾಗಿದ್ದು, ಬೆಂಗಳೂರು ಸಂಬಂಧಿತ ಸಮಸ್ಯೆಗಳು ಮತ್ತು ಸಚಿವ ಸಂಪುಟದ ವಿಚಾರಗಳಲ್ಲೇ ಹೆಚ್ಚಿನ ಸಮಯ ಕಳೆದುಹೋಯಿತು. ರಾಜ್ಯದ ಒಟ್ಟಾರೆ ಆಡಳಿತದತ್ತ ಗಮನ ಹರಿಸಲು ಸರ್ಕಾರಕ್ಕೆ ಹೆಚ್ಚಿನ ಸಮಯ ಸಿಗಲಿಲ್ಲ ಎಂದು ಹೇಳಿದ್ದಾರೆ.

ಆದರೆ, ಬಿಜೆಪಿ ಮಾತ್ರ ಸರ್ಕಾರದ 100 ದಿನಗಳ ಸಂಭ್ರಮಕ್ಕೆ ಸೇರಲು ಸಿದ್ಧವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದನ್ನು ‘ಯೂಟರ್ನ್ ಸರ್ಕಾರ’ ಎಂದು ವ್ಯಂಗ್ಯವಾಡಿದ್ದಾರೆ.

ವಿರೋಧ ಪಕ್ಷಗಳ ಪ್ರತಿಭಟನೆ ಬಳಿಕ ಉದ್ಯಾನವನಗಳಿಗೆ ಸಂಬಂಧಿಸಿದ ಕಾಯ್ದೆಯನ್ನು ಹಿಂಪಡೆದಿದ್ದು, ಟೀಕೆಗಳ ನಂತರ ಬರಪೀಡಿತ ತಾಲೂಕುಗಳ ಪಟ್ಟಿಯನ್ನು 101ರಿಂದ 125ಕ್ಕೆ ವಿಸ್ತರಿಸಿದ್ದು ಹಾಗೂ ಆಕ್ಷೇಪಗಳು ವ್ಯಕ್ತವಾದ ಬಳಿಕ ಸಚಿವರೊಬ್ಬರನ್ನು ಕೈಬಿಟ್ಟಿದ್ದು, ಸೇರಿದಂತೆ ಹಲವು ನೀತಿ ಬದಲಾವಣೆಗಳನ್ನು ವಿಜಯೇಂದ್ರ ಉಲ್ಲೇಖಿಸಿದ್ದಾರೆ.

‘ಸರ್ಕಾರ ಸಾಧಿಸಿದ್ದೇನು?’ ಎಂದು ಪ್ರಶ್ನಿಸಿರುವ ಅವರು, 100 ದಿನಗಳ ಸಂಭ್ರಮಾಚರಣೆ ತೆರಿಗೆದಾರರ ಹಣದ ವ್ಯರ್ಥ ಖರ್ಚು ಎಂದು ಟೀಕಿಸಿದ್ದಾರೆ.

ಇತ್ತ ಶಿವಕುಮಾರ್ ಅವರ ಆಪ್ತರಾಗಿರುವ ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರು ಸರ್ಕಾರದ 100 ದಿನಗಳ ಸಾಧನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘100 ದಿನಗಳು ಕ್ಷಣಾರ್ಧದಲ್ಲಿ ಕಳೆದುಹೋಗಿವೆ. ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕವನ್ನು ಅಭಿವೃದ್ಧಿ, ನಿರ್ಣಾಯಕ ನಾಯಕತ್ವ ಮತ್ತು ನಿರಂತರ ವೇಗದೊಂದಿಗೆ ಮುನ್ನಡೆಸುತ್ತಿರುವ ರೀತಿಯಲ್ಲೇ ಈ ಅವಧಿಯೂ ವೇಗವಾಗಿ ಸಾಗಿದೆ. 100 ದಿನಗಳು ಪೂರ್ಣಗೊಂಡಿವೆ. ಕರ್ನಾಟಕವು ವೇಗವಾಗಿ, ಬಲವಾಗಿ ಮತ್ತು ಮುನ್ನಡೆಯುತ್ತಿದೆ’ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಜಾರ್ಖಂಡ್: ಸಚಿವ ಸುದಿವ್ಯ ಸೋನು ಹೃದಯಾಘಾತದಿಂದ ನಿಧನ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ

ತುಂಗಭದ್ರಾ ಜಲಾಶಯದ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!